ಎಚ್‌.ಸಿ. ಬಾಲಕೃಷ್ಣಗೆ ಬಿಜೆಪಿ ಗಾಳ?

ಮಂಗಳವಾರ, ಮಾರ್ಚ್ 19, 2019
26 °C

ಎಚ್‌.ಸಿ. ಬಾಲಕೃಷ್ಣಗೆ ಬಿಜೆಪಿ ಗಾಳ?

Published:
Updated:
Prajavani

ರಾಮನಗರ: ಮಾಗಡಿಯ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅವರೂ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರ ದಂಡು ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದೆ ಎಂದು ಸುದ್ದಿ ಹಬ್ಬಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಸಭೆ ನಡೆದಿದ್ದು, ಅಲ್ಲಿ ಅವರನ್ನು ಚನ್ನಪಟ್ಟಣದ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಹೇಳಲಾಗುತ್ತಿದೆ. ಜೆಡಿಎಸ್‌ ತೊರೆಯಲು ಮುಂದಾದ ಸಮಯದಿಂದಲೇ ಬಾಲಕೃಷ್ಣರಿಗೆ ಬಿಜೆಪಿ ಆಹ್ವಾನ ನೀಡಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿ ಕಾಂಗ್ರೆಸ್ ಸೇರಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾಲಕೃಷ್ಣ ಸೋತಿದ್ದು, ಅಲ್ಲಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಅದರಲ್ಲೂ ಜೆಡಿಎಸ್ ಜೊತೆಗಿನ ಕಾಂಗ್ರೆಸ್ ನಾಯಕರ ಆಪ್ತತೆ ಅವರಿಗೆ ಇರಿಸು–ಮುರಿಸು ತಂದಿದೆ. ಇದನ್ನೇ ಬಳಸಿಕೊಳ್ಳುತ್ತಿರುವ ಯೋಗೇಶ್ವರ್‌, ಬಿಜೆಪಿ ಸೇರುವಂತೆ ಬಾಲಕೃಷ್ಣರ ಮನವೊಲಿಕೆ ಮಾಡುತ್ತಿದ್ದಾರೆ ಎಂದು ಅವರ ಆಪ್ತಮೂಲ ತಿಳಿಸಿವೆ.

ಸದ್ಯ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಬಿಜೆಪಿ ಮುಂದಾಗಿದೆ. ಬಿಜೆಪಿಯಿಂದಲೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಬಾಲಕೃಷ್ಣರ ಮರುಸೇರ್ಪಡೆಗೆ ಪಕ್ಷದ ಹೈಕಮಾಂಡ್‌ ಅನ್ನು ಒಪ್ಪಿಸುವ ಪ್ರಯತ್ನದಲ್ಲಿ ಯೋಗೇಶ್ವರ್‌ ಇದ್ದಾರೆ. ಆದರೆ ಕಳೆದ ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಆದ ಹಿನ್ನಡೆಯಿಂದಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಾಲಕೃಷ್ಣ ಅವರು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಅಶೋಕ್‌ –ಕಟ್ಟಾ ಜಟಾಪಟಿ
ಬೆಂಗಳೂರು: ಬಿಬಿಎಂ‍ಪಿಯ ಮಾಜಿ ಸದಸ್ಯರಾದ ಗೋಪಿ ಹಾಗೂ ಶರವಣ ಅವರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಆರ್‌.ಅಶೋಕ್‌ ಹಾಗೂ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಡುವೆ ಜಟಾಪಟಿ ನಡೆದಿದೆ.

ವಿಧಾನಸಭಾ ಚುನಾವಣೆಯ ವೇಳೆ ಗೋಪಿ ಹಾಗೂ ಶರವಣ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅವರನ್ನು ಮತ್ತೆ ಬಿಜೆಪಿಗೆ ಕರೆತರಲು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಹಾಗೂ ಅಶೋಕ್‌ ಸಿದ್ಧತೆ ನಡೆಸಿದ್ದರು. ಈ ವಿಷಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಸ್ತಾಪವಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಸಮ್ಮುಖದಲ್ಲೇ ಅಶೋಕ್‌ ಹಾಗೂ ಕಟ್ಟಾ ಬೈದಾಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಇಬ್ಬರು ಮುಖಂಡರು ಬಿಜೆಪಿಗೆ ಬಂದರೆ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ’ ಎಂದು ಅಶೋಕ್‌ ಅವರು ವಿಷಯ ಪ್ರಸ್ತಾಪಿಸಿದರು. ಈ ಮಾತಿನಿಂದ ಕಟ್ಟಾ ಕೋಪಗೊಂಡು, ‘ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಅವರೇ ಕಾರಣ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಲೋಕಸಭಾ ಚುನಾವಣೆಯ ವೇಳೆ ಮೌನಕ್ಕೆ ಶರಣಾಗುತ್ತೇನೆ. ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ’ ಎಂದು ಎಚ್ಚರಿಸಿದರು. ಬಳಿಕ ಸಭೆಯಿಂದ ಅರ್ಧದಿಂದಲೇ ನಿರ್ಗಮಿಸಿದರು ಎಂದು ಗೊತ್ತಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ರಾಮನಗರದಲ್ಲಿ ಸೋಮವಾರ ನಿಗದಿಯಾಗಿತ್ತು. ಕಟ್ಟಾ ಅವರ ಮುನಿಸಿನಿಂದ ಈ ಸಭೆ ರದ್ದಾಯಿತು ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !