ಶುಕ್ರವಾರ, ಆಗಸ್ಟ್ 6, 2021
23 °C
ಪ್ರೀತಿಸಿ ಮನೆ ಬಿಟ್ಟು ಬಂದಿದ್ದ ಪ್ರೇಮಿಗಳು

ಠಾಣೆ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವಕನೊಬ್ಬನನ್ನು ಪ್ರೀತಿಸಿ ಆತನ ಜೊತೆಯಲ್ಲೇ ಮನೆ ಬಿಟ್ಟು ನಗರಕ್ಕೆ ಬಂದಿದ್ದ ಯುವತಿಯೊಬ್ಬರು ಅಶೋಕ ನಗರ ಠಾಣೆ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಜೂನ್ 6ರಂದು ಈ ಘಟನೆ ನಡೆದಿದೆ. ಯುವಕ ಹಾಗೂ ಯುವತಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವತಿ ಆಸ್ಪತ್ರೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶ ಕಡಪಾ ಜಿಲ್ಲೆಯ ಯುವತಿ ಹಾಗೂ ಯುವಕ, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ, ಎರಡು ಕುಟುಂಬದಲ್ಲೂ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಪ್ರೇಮಿಗಳು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಯುವತಿ ಕಾಣೆಯಾದ ಬಗ್ಗೆ ಅವರ ಪೋಷಕರು ಕಡಪಾ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು’

‘ನಗರದಲ್ಲಿರುವ ಪರಿಚಯಸ್ಥರೊಬ್ಬರ ಮನೆಯಲ್ಲಿ ಪ್ರೇಮಿಗಳು ಒಂದು ದಿನ ವಾಸವಿದ್ದರು. ಅದು ‍ಪೋಷಕರಿಗೆ ಗೊತ್ತಾಗಿ ಬೆಂಗಳೂರಿನತ್ತ  ಹೊರಟಿದ್ದರು. ಪೋಷಕರು ಬಂದರೆ ತಮ್ಮಿಬ್ಬರನ್ನು ಬೇರೆ ಬೇರೆ ಮಾಡುತ್ತಾರೆಂದು ತಿಳಿದ ಪ್ರೇಮಿಗಳು ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಕಡಪಾದಲ್ಲಿ ಪ್ರಕರಣ ದಾಖಲಾದ ಮಾಹಿತಿ ತಿಳಿಯುತ್ತಿದ್ದಂತೆ ಪರಿಚಯಸ್ಥರೇ ಅವರಿಬ್ಬರನ್ನು ರಾತ್ರಿ 10ರ ಸುಮಾರಿಗೆ  ಅಶೋಕ ನಗರ ಠಾಣೆ ಬಳಿ ಕರೆತಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಪೋಷಕರು ಬರುವ ಸುದ್ದಿ ತಿಳಿದ ಯುವತಿ, ತನ್ನ ಬಳಿ ಇದ್ದ ಹೇರ್‌ ಡೈ ಆಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಕೂಡಲೇ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದೂ ವಿವರಿಸಿದರು.

‘ಪೋಷಕರು ಠಾಣೆಗೆ ಬಂದರೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಪ್ರೀತಿಸಿದ ಯುವಕ ತನಗೆ ಸಿಗುವುದಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾರೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.