ಶುಕ್ರವಾರ, ಜನವರಿ 24, 2020
28 °C
ನೆನಪುಗಳನ್ನು ಬಿಚ್ಚಿಟ್ಟ ಜೀವದ ಗೆಳೆಯ

ಕನ್ನಡದ ಯೋಧ, ಪ್ರೇರಕ ಶಕ್ತಿಯಾಗಿದ್ದ ಚಿದಾನಂದಮೂರ್ತಿ: ವೆಂಕಟಾಚಲ ಶಾಸ್ತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಶೋಧನೆ, ಸಾಹಿತ್ಯ, ಕಾವ್ಯ ಇವೆಲ್ಲ ಕನ್ನಡ ಇದ್ದರೆ ತಾನೇ? ಮೊದಲು ಕನ್ನಡ ಉಳಿಯಬೇಕು. ಹೀಗೆಂದು ಮೊದಲಿನಿಂದಲೂ ಹೇಳುತ್ತಾ ಇದ್ದವರು ಡಾ. ಎಂ.ಚಿದಾನಂದಮೂರ್ತಿ’ ಎಂದು ನೆನಪಿಸಿಕೊಂಡಿದ್ದಾರೆ ಅವರ ಜೀವದ ಗೆಳೆಯ, ಸಹಪಾಠಿ, ಭಾಷಾ ತಜ್ಞ  ಟಿ.ಎನ್‌.ವೆಂಕಟಾಚಲ ಶಾಸ್ತ್ರಿ. ಚಿದಾನಂದಮೂರ್ತಿಯವರ ಕುರಿತಾದ ಅನೇಕ ನೆನಪುಗಳನ್ನು ವೆಂಕಟಾಚಲ ಶಾಸ್ತ್ರಿ ಅವರು ಪ್ರಜಾವಾಣಿ ಜತೆ ಹಂಚಿಕೊಂಡಿದ್ದಾರೆ. ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ:

‘ರ್‍ಯಾಂಕ್‌ ವಿದ್ಯಾರ್ಥಿಯಾಗಿದ್ದರೂ ಎಂಜಿನಿಯರಿಂಗ್, ವೈದ್ಯಕೀಯದತ್ತ ಮನ ಮಾಡದೆ ಕನ್ನಡವನ್ನೇ ಅಧ್ಯಯನ ವಿಷಯವನ್ನಾಗಿ ಆಯ್ದುಕೊಂಡು ಸದಾ ಕಾಲ ಕನ್ನಡ ಕಾಯುವ ಯೋಧನಾಗಿ ಚಿದಾನಂದಮೂರ್ತಿ ಕಾರ್ಯನಿರ್ವಹಿಸಿದ್ದರು. ಬಾಲ್ಯದಲ್ಲೇ ಅಧ್ಯಯನಶೀಲರಾಗಿದ್ದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಗಂಭೀರ ವ್ಯಕ್ತಿತ್ವ ಹೊಂದಿದ್ದರು. ವ್ಯಾಕರಣದಲ್ಲಿ ಹೆಚ್ಚಿನ ಅಂಕಗಳನ್ನೂ ಗಳಿಸುತ್ತಿದ್ದರು. ಕುವೆಂಪು ಅವರ ವಿದ್ಯಾರ್ಥಿಗಳಾಗಿದ್ದ ನಮ್ಮ ಮುಂದೆ ಅವರ ಕಾವ್ಯ ಮಾರ್ಗ ಮತ್ತು ತಿ.ನಂ.ಶ್ರೀಕಂಠಯ್ಯ, ಡಿ.ಎಲ್.ನರಸಿಂಹಾಚಾರ್ಯರ ವಿದ್ವತೀಯ ಮಾರ್ಗದ ಆಯ್ಕೆಗಳಿದ್ದವು. ನಾವದರಲ್ಲಿ ಎರಡನೆಯದ್ದನ್ನೇ ಆಯ್ದುಕೊಂಡಿದ್ದೆವು. ಕ್ಷೇತ್ರ ಕಾರ್ಯ, ಸಂಶೋಧನೆಯ ಕೆಲಸಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದ ಚಿದಾನಂದಮೂರ್ತಿ ಬರೆದ ಮೊದಲ ಲೇಖನವೂ (ಮಾತೇ ಸಾಹಿತ್ಯ) ಅದಕ್ಕೆ ಸಂಬಂಧಿಸಿದ್ದೇ ಆಗಿತ್ತು. ನಿರಂತರ ಶೋಧಕ ಪ್ರವೃತ್ತಿ ಜತೆಗೆ ಮಾನವೀಯ ತುಡಿತವೂ ಅವರಲ್ಲಿತ್ತು. ಸ್ನೇಹಿತರ ಮನೆಗಳಿಗೆ ತೆರಳಿ ಕುಟುಂಬದವರ ಕ್ಷೇಮ–ಸಮಾಚಾರ ವಿಚಾರಿಸುತ್ತಿದ್ದರು.

ಇದನ್ನೂ ಓದಿ: ಡಾ.ಎಂ.ಚಿದಾನಂದಮೂರ್ತಿ: ಕನ್ನಡ ಅಸ್ಮಿತೆಯನ್ನು ಎಡೆಬಿಡದೆ ಹುಡುಕಿದ್ದ ವಿದ್ವಾಂಸ

ಕನ್ನಡ ಉಳಿಯಬೇಕು, ಬೆಳೆಯಬೇಕು ಎನ್ನುತ್ತಿದ್ದ ಅವರ ಕನ್ನಡದ ಯೋಧನಾಗಿದ್ದುಕೊಂಡು ಕಿರಿಯರಿಗೆ, ಅಭಿಮಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಭಿನ್ನಾಭಿಪ್ರಾಯಗಳ ನಡುವೆಯೂ ಸ್ನೇಹ ಸಂಪಾದಿಸುವ, ಕೆಲಸ ಮಾಡಿಕೊಂಡುಹೋಗುವ ಕಲೆ ಅವರಲ್ಲಿತ್ತು. ನಿರಂತರ ಅಧ್ಯಯನಶೀಲರೂ ಕ್ರಿಯಾಶೀಲರೂ ಆಗಿದ್ದ ಅವರು ಜನರ ಜತೆ ಬೆರೆಯುತ್ತಿದ್ದರು. ಜೀವನದ ಕೊನೆಯ ತನಕವೂ ಸದಾ ಲವಲವಿಕೆ, ಚಟುವಟಿಕೆಯಿಂದ ಇದ್ದರು.

ರಾಷ್ಟ್ರೀಯವಾದಿ ಚಿಂತನೆ: ಚಿದಾನಂದಮೂರ್ತಿ ರಾಷ್ಟ್ರೀಯವಾದಿ ಚಿಂತನೆ ಹೊಂದಿದ್ದವರು. ಇತ್ತಿಚೆಗೆ ಭಾರತೀಯ ನೆಲೆಗಟ್ಟಿನಲ್ಲಿ ಚಿಂತನೆ ಮಾಡುವುದನ್ನು ಹೆಚ್ಚಿಸಿಕೊಂಡಿದ್ದರು. ಪರಂಪರೆ, ವಾಸ್ತು, ಪುರಾಣ, ಇತಿಹಾಸ ಇತ್ಯಾದಿಗಳ ಬಗ್ಗೆ ಅಪಾರವಾದ ಗೌರವ ಅವರಲ್ಲಿತ್ತು. ಇವುಗಳ ಅವಹೇಳನವನ್ನು ಅವರು ಸಹಿಸುತ್ತಿರಲಿಲ್ಲ. ಈ ವಿಚಾರದಲ್ಲಿ ಅವರಿಗೆ ಅಪಾರವಾದ ಶ್ರದ್ಧೆ ಇತ್ತು.

ಇದನ್ನೂ ಓದಿ: ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದಮೂರ್ತಿ ಇನ್ನಿಲ್ಲ

ತುಂಬಲಾರದ ನಷ್ಟ: ಚಿದಾನಂದಮೂರ್ತಿ ನಿಧನ ಕನ್ನಡ ಸಂಶೋಧನೆ, ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ವೈಯಕ್ತಿಕವಾಗಿ ನನಗೆ ಅವರ ಅಗಲಿಕೆಯಿಂದ ಅತೀವ ದುಃಖವಾಗಿದೆ’.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು