ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ವಿವಾದ: ಕೋರ್ಟ್‌ ಹೊರಗೆ ಇತ್ಯರ್ಥಪಡಿಸಿ

ಪ್ರಧಾನಿ ಮೋದಿಗೆ ಸ್ವಾಮೀಜಿಗಳ ಆಗ್ರಹ
Last Updated 10 ಜನವರಿ 2020, 12:33 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಲು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ, ನ್ಯಾಯಾಲಯದ ಹೊರಗಡೆಯೇ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’.

ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ನೇತೃತ್ವದಲ್ಲಿ ಇಲ್ಲಿ ಶುಕ್ರವಾರ ನಡೆದ ಮಠಾಧೀಶರು ಹಾಗೂ ಕನ್ನಡಪರ ಹೋರಾಟಗಾರರ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯವಿದು.

ಮುಂಬೈ ಕರ್ನಾಟಕದ 7 ಜಿಲ್ಲೆಗಳ 13 ತಾಲ್ಲೂಕುಗಳಿಗೆ ಸಂಬಂಧಿಸಿದ ಕಳಸಾ ಬಂಡೂರಿ ಯೋಜನೆ ಅನುಷ್ಠಾನವಾಗದೇ ಇರುವುದಕ್ಕೆ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ. 2018ರ ಆ. 14ರಂದೇ ನ್ಯಾ.ಜೆ.ಎಂ. ಪಾಂಚಾಲ ನೇತೃತ್ವದ ನ್ಯಾಯಮಂಡಳಿಯು ತೀರ್ಪು ನೀಡಿದೆ. ಇದಾಗಿ ತಿಂಗಳುಗಳೇ ಕಳೆದಿದ್ದರೂ ಕೇಂದ್ರ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಈ ನಡುವೆ, ತೀರ್ಪಿನ ವಿರುದ್ಧ ಸಂಬಂಧಿಸಿದ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವವರಗೆ ಕಾಯುವ ಅಗತ್ಯವಿಲ್ಲ ಎಂದು ಸಭೆ ಒತ್ತಾಯಿಸಿತು.

ಕೇಂದ್ರದ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಲು ರಾಜ್ಯದ ಎಲ್ಲ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಕೂಡಲೇ ಸರ್ವಪಕ್ಷಗಳ ನಾಯಕರು ಹಾಗೂ ಹೋರಾಟಗಾರರ ನಿಯೋಗ ತೆಗೆದುಕೊಂಡು ಹೋಗಬೇಕು. ಅಗತ್ಯಬಿದ್ದರೆ, ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲೂ ಸಿದ್ಧವಾಗಬೇಕು ಎಂದು ಆಗ್ರಹಿಸಿತು.

ಗಡಿ ವಿವಾದ ಕರ್ನಾಟಕದ ಪಾಲಿಗೆ ಮುಗಿದ ಅಧ್ಯಾಯವಾಗಿದೆ. ಆದರೆ, ನೆರೆಯ ಮಹಾರಾಷ್ಟ್ರವು ರಾಜಕೀಯ ಕಾರಣಗಳಿಗಾಗಿ ವಿವಾದವನ್ನು ಕೆದಕುತ್ತಾ ಗಡಿ ಭಾಗದಲ್ಲಿನ ಭಾಷಾ ಸೌಹಾರ್ದಕ್ಕೆ ಧಕ್ಕೆ ತರುವುದನ್ನು ಖಂಡಿಸಿತು.

15 ವರ್ಷಗಳಿಂದ ನ್ಯಾಯಾಲಯದ ಮುಂದಿರುವ ವಿವಾದ ಇನ್ನೂ ವಿಚಾರಣೆಗೆ ಸ್ವೀಕರಿಸುವ ಹಂತದಲ್ಲಿಯೇ ಇದೆ. ಪ್ರಕರಣ ಬಾಕಿ ಇರುವಾಗಲೇ ಮಹಾರಾಷ್ಟ್ರವು ಗಡಿಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗಡಿಯಲ್ಲಿ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳನ್ನು ಬಲಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು.

ಬೆಳಗಾವಿಯ ಒಂದಿಂಚನ್ನೂ ಬಿಟ್ಟು ಕೊಡುವುದಿಲ್ಲ ಎನ್ನುವ ಹೇಳಿಕೆ ನೀಡುವುದು ಬಿಟ್ಟು ರಾಜ್ಯ ಸರ್ಕಾರವು ನಿರ್ದಿಷ್ಟ ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಚರ್ಚಿಸಲು ಹೋರಾಟಗಾರರು ಹಾಗೂ ಈ ಭಾಗದ ಜನಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯನ್ನು ಮುಖ್ಯಮಂತ್ರಿ ಸುವರ್ಣ ವಿಧಾನಸೌಧದಲ್ಲೇ ನಡೆಸಬೇಕು.

ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT