ಶುಕ್ರವಾರ, ಫೆಬ್ರವರಿ 26, 2021
19 °C
ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ

ಧರ್ಮಸ್ಥಳ: ಮಹಾಮಸ್ತಕಾಭಿಷೇಕಕ್ಕೆ ರತ್ನಗಿರಿಯಲ್ಲಿ ತೋರಣ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಧರ್ಮಸ್ಥಳದಲ್ಲಿ ನಡೆಯುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವ ಭಾವಿಯಾಗಿ ಶನಿವಾರ ರತ್ನಗಿರಿಯಲ್ಲಿ (ಬಾಹುಬಲಿ ಬೆಟ್ಟ) ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ಶನಿವಾರ ಬೆಳಿಗ್ಗೆ 6ಕ್ಕೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪಂಚಾಮೃತಾಭಿಷೇಕ ಹಾಗೂ ಮಹಾಪೂಜೆ ಮತ್ತು ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ನಡೆಯಿತು.

ರತ್ನಗಿರಿಯಲ್ಲಿ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನ ಶುದ್ಧಿ, ಮುಖ ವಸ್ತ್ರ ಉದ್ಘಾಟನೆ, ಬಾಹುಬಲಿ ಮೂರ್ತಿಗೆ 24 ಕಲಶಗಳಿಂದ ಪಾದಾಭಿಷೇಕ ನಡೆಯಿತು.

ಮಧ್ಯಾಹ್ನ ಎರಡು ಗಂಟೆಯಿಂದ ನಾಂದಿ ಮಂಗಲ ಪೂಜಾ ವಿಧಾನ, ಮೃತ್ತಿಕಾ ಸಂಗ್ರಹಣೆ, ಯಜ್ಞ ಶಾಲಾ ಪ್ರವೇಶ ಮತ್ತು ಮಹಾಮಂಗಳಾರತಿಯೊಂದಿಗೆ ಪೂಜಾ ಕಾರ್ಯಕ್ರಮ ಮುಕ್ತಾಯಗೊಂಡಿತು. ಆಚಾರ್ಯ 108 ವರ್ಧಮಾನ ಸಾಗರ ಮುನಿಮಹಾರಾಜರು, ಆಚಾರ್ಯ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಹಾಗೂ ಮುನಿ ಸಂಘದವರು ಮತ್ತು ಮಾತಾಜಿ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು.

ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಪೂಜೆಯಲ್ಲಿ ಭಾಗವಹಿಸಿದ್ದರು.

ಕ್ಷುಲ್ಲಕ ದೀಕ್ಷಾ ಮಹೋತ್ಸವ ಇಂದು:  ಭಾನುವಾರ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಅಮೃತವ
ರ್ಷಿಣಿ ಸಭಾಭವನದಲ್ಲಿ ಆಚಾರ್ಯ 108 ಪುಷ್ಪದಂತ ಸಾಗರ ಮುನಿಮಹಾರಾಜರು ಸತೀಶ್ ಬೈಯಾಜಿ, ಪೂರನ್ ಬೈಯಾಜಿ ಮತ್ತು ಪ್ರಭು ಬೈಯಾಜಿ ಅವರಿಗೆ ಕ್ಷುಲ್ಲಕ ದೀಕ್ಷೆ ನೀಡಲಿದ್ದಾರೆ.

ಮಸ್ತಕಾಭಿಷೇಕಕ್ಕೆ ತಂತ್ರಜ್ಞಾನದ ಮೆರುಗು: ಧರ್ಮಸ್ಥಳದಲ್ಲಿ ನಡೆಯುವ ಬಾಹುಬಲಿ ಮಸ್ತಕಾಭಿಷೇಕಕ್ಕೆ ತಂತ್ರಜ್ಞಾನದ ಬಳಕೆ ವಿಶೇಷ ಮೆರುಗು ನೀಡಲಿದೆ. ವೃಷಭನಾಥನ ಮಕ್ಕಳಾದ ಭರತ-ಬಾಹುಬಲಿ ನಡುವೆ ಯುದ್ಧ ಹಾಗೂ ಬಾಹುಬಲಿ ಕೇವಲ ಜ್ಞಾನ ಪಡೆದ ಸುಂದರ ಕಥಾನಕದ ಪ್ರಸ್ತುತಿ ಬಾಹುಬಲಿ ಮೂರ್ತಿಯ ಮೇಲೆ ಇದೇ 17ರಂದು ಪ್ರದರ್ಶನವಾಗಲಿದೆ.

17 ನಿಮಿಷಗಳ ಕಾಲ ನಿರಂತರ ಬೆಳಕು ಹಾಗೂ ಧ್ವನಿ ತರಂಗಗಳು ಬಾಹುಬಲಿ ಮೂರ್ತಿಯನ್ನು ಸ್ಪರ್ಶಿಸಲಿವೆ. ಬೆಂಗಳೂರಿನ ಡಾ. ಸಂಧ್ಯಾ ಕೌಶಿಕ್ ಅವರ ರಚನೆ, ಡಾ. ಹಂಪನಾ ಅವರ ಸಂಕಲನ, ಸಂಗೀತಾ ಕಟ್ಟಿ ಅವರ ಸಂಗೀತ ಮತ್ತು ಧ್ವನಿ ಈ ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಲಿದೆ.

ಕೆರೆ ಸಂಜೀವಿನಿಗೆ ಚಾಲನೆ

ಧರ್ಮಸ್ಥಳದ ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಸಣ್ಣ ನೀರಾವರಿ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ವತಿಯಿಂದ ರೂಪಿಸಿರುವ ಕೆರೆ ಸಂಜೀವಿನಿ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಈ ಯೋಜನೆಯಡಿ ₹ 28 ಕೋಟಿ ವೆಚ್ಚದಲ್ಲಿ 93 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಗಳಲ್ಲಿ ಹೂಳು ತೆಗೆಯುವುದಕ್ಕೆ ₹ 11.24 ಕೋಟಿಯನ್ನು ಸಣ್ಣ ನೀರಾವರಿ ಇಲಾಖೆ ನೀಡುತ್ತಿದೆ. ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಎಸ್‌ಕೆಡಿಆರ್‌ಡಿಪಿ ₹ 16.7 ಕೋಟಿ ಭರಿಸುತ್ತಿದೆ. ಕೆರೆ ನಿರ್ವಹಣಾ ಸಂಘಗಳು ಮತ್ತು ಸಮಿತಿಗಳಿಗೆ ಶನಿವಾರ ₹97.50 ಲಕ್ಷ ಮೊತ್ತದ ಚೆಕ್‌ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು