ಶುಕ್ರವಾರ, ಫೆಬ್ರವರಿ 28, 2020
19 °C
ವಿಟಿಯು ಘಟಿಕೋತ್ಸವದಲ್ಲಿ ಎನ್‌ಬಿಎ ಅಧ್ಯಕ್ಷ ಪ್ರೊ.ಕೆ.ಕೆ. ಅಗರ್‌ವಾಲ್‌

ಸೃಜನಶೀಲತೆ ಹವ್ಯಾಸ ಮಾಡಿಕೊಂಡರೆ ಯಶಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೃಜನಶೀಲತೆಯನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಇದರಿಂದ, ಅತ್ಯಂತ ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಯಶಸ್ಸು ಸಾಧಿಸಬಹುದಾಗಿದೆ’ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಅಧ್ಯಕ್ಷ ಪ್ರೊ.ಕೆ.ಕೆ. ಅಗರ್‌ವಾಲ್‌ ಸಲಹೆ ನೀಡಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ‘ಜ್ಞಾನಸಂಗಮ’ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ 19ನೇ ಘಟಿಕೋತ್ಸವದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಎಂಜಿನಿಯರ್‌ ಆದವರಿಗೆ ಕಲಿಕೆ ಎನ್ನುವುದು ಜೀವನಪರ್ಯಂತ ಇರಬೇಕಾಗುತ್ತದೆ. ಎಲ್ಲೇ ಹೋದರು, ಏನನ್ನೇ ನೋಡಿದರೂ ಅಲ್ಲಿ ತಾಂತ್ರಿಕ ಜ್ಞಾನ ವೃದ್ಧಿಸಿಕೊಳ್ಳಲು ಏನಾದರೂ ವಿಷಯ ಇದ್ದೇ ಇರುತ್ತದೆ. ಆ ಒಳನೋಟ ನಿಮ್ಮದಾಗಬೇಕು. ನಮ್ರತೆ ಹಾಗೂ ವಿನಯ ವೃತ್ತಿ ಮೌಲ್ಯಗಳಾಗಬೇಕು. ಅಹಂಕಾರಿ ಎಂಜಿನಿಯರ್‌ಗಳನ್ನು ಸಮಾಜ ಮೆಚ್ಚುವುದಿಲ್ಲ’ ಎಂದು ಸೂಚ್ಯವಾಗಿ ಕಿವಿಮಾತು ಹೇಳಿದರು.

ಕೌಶಲ ರೂಢಿಸಿಕೊಳ್ಳಬೇಕು

‘ಅಂತರಶಿಸ್ತೀಯ ಹಾಗೂ ಬಹುಶಿಸ್ತೀಯ ಆಲೋಚನೆ ಮತ್ತು ಸಂಬಂಧಿಸಿದ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಸೃಜನಶೀಲತೆಯು ವಿದ್ಯಾರ್ಥಿಯನ್ನು ಕ್ಲಾಸ್‌ರೂಂನಿಂದ ಬೋರ್ಡ್‌ ರೂಂಗೆ (ಉನ್ನತ ಹುದ್ದೆ) ಕರೆದುಕೊಂಡು ಹೋಗುತ್ತದೆ’ ಎಂದರು.

‘ದೇಶದ ಭವಿಷ್ಯವು ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರ ಕೈಯಲ್ಲಿದೆ. ಹೀಗಾಗಿ, ಸದೃಢ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಹೊಸ ಪದವೀಧರರ ಮೇಲಿದೆ. ಪದವಿ ಜೊತೆಗೆ ವೃತ್ತಿನೈಪುಣ್ಯತೆ, ಬದ್ಧತೆಯ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.

‘ಅಂತರರಾಷ್ಟ್ರೀಯ ಸಂಶೋಧನೆ ಪ್ರಕಾರ ಮುಂದಿನ ದಿನಗಳಲ್ಲಿ ಕೃತಕ‌ ಬುದ್ಧಿಮತ್ತೆಯ ಬದಲಿಗೆ ಭಾವನಾತ್ಮಕ ಬುದ್ಧಿಮತ್ತೆ (ಎಮೋಷನಲ್ ಇಂಟಿಲೆಜೆನ್ಸ್)ಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಭಾರತದಲ್ಲಿ ಮುಂದಿನ 3ರಿಂದ 5 ವರ್ಷಗಳಲ್ಲಿ ಭಾವನಾತ್ಮಕ ಬುದ್ಧಿಮತ್ತೆಯ ಕೌಶಲಕ್ಕೆ ಬೇಡಿಕೆಯು ಬಹಳ ಹೆಚ್ಚಾಗಲಿದೆ. ಉದ್ಯೋಗ ಅವಕಾಶಗಳು ಕಡಿಮೆ ಆಗುವುದಿಲ್ಲ. ಆದರೆ, ಅವಕಾಶಗಳನ್ನು ಗಳಿಸಲು ಕೌಶಲದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ರೈಲ್ವೆ ಸಂಶೋಧನಾ ಕೇಂದ್ರ

ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ‘ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಂಪ್ಯೂಟರ್ ವಿಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಬಗೆಯ ನೂತನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ‘ಬಹುಶಿಸ್ತೀಯ ರೈಲ್ವೆ ಸಂಶೋಧನೆ ಮತ್ತು ತಂತ್ರಜ್ಞಾನ ಆವಿಷ್ಕಾರ ಕೇಂದ್ರ’ವನ್ನು ಆರಂಭಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ಯೋಜನಾ ವರದಿ  ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ದೃಶ್ಯ-ಶೃವಣ ವ್ಯವಸ್ಥೆಯ ಮೂಲಕ ಏಕಕಾಲದಲ್ಲಿ ವಿವಿಧೆಡೆಯ ವಿದ್ಯಾರ್ಥಿ ಸಮೂಹಕ್ಕೆ ಶಿಕ್ಷಣ ನೀಡಲು ಹಾಗೂ ಅವರೊಂದಿಗೆ ಸಂವಾದ ನಡೆಸಲು ಅನುಕೂಲವಾಗುವಂತಹ ಇ-ಶಿಕ್ಷಣ ವೇದಿಕೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ಡಿಜಿಟಲ್‌ ಮೌಲ್ಯಮಾಪನ, ಜ್ಞಾನಯಾನ ಫೆಲೋಶಿಪ್ ಆರಂಭಿಸಲಾಗಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ಅಕಾಡೆಮಿ ಸ್ಥಾಪಿಸಲಾಗಿದೆ. ರೈತರಿಗೆ ನೆರವಾಗುವ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗಿದೆ’ ಎಂದು ವಿವರ ನೀಡಿದರು.

ಸಂಶೋಧನಾ ಕೇಂದ್ರಗಳಾಗಿ

‘ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳ ಸಹಭಾಗಿತ್ವದಲ್ಲಿ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರಗಳನ್ನು ಸಂಶೋಧನಾ ಮತ್ತು ತರಬೇತಿ ಕೇಂದ್ರಗಳನ್ನಾಗಿ ರೂಪಿಸಲಾಗುವುದು’ ಎಂದು ತಿಳಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ.ಕೆ. ಶಿವನ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿಯನ್ನು ಅವರ ಅನುಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.

ಕುಲಸಚಿವರಾದ ಪ್ರೊ.ಸತೀಶ ಅಣ್ಣಿಗೇರಿ, ಡಾ.ಎ.ಎಸ್. ದೇಶಪಾಂಡೆ, ಡೀನ್ ಪ್ರೊ.ಎನ್.ಬಿ.ಆರ್. ನಾಯ್ಡು ಇದ್ದರು.

ಕುಲಾಧಿಪತಿಯೂ ಆದ ರಾಜ್ಯಪಾಲ ವಿ.ಆರ್. ವಾಲಾ, ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಗೈರು ಹಾಜರಿ ಎದ್ದುಕಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು