ನಾಯಕರ ನಡುವೆ ಮುಸುಕಿನ ಗುದ್ದಾಟ: ‘ಕೈ’ಗೆ ಮಂಡ್ಯ ಕಗ್ಗಂಟು

ಗುರುವಾರ , ಮಾರ್ಚ್ 21, 2019
27 °C
ನಾಯಕರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ

ನಾಯಕರ ನಡುವೆ ಮುಸುಕಿನ ಗುದ್ದಾಟ: ‘ಕೈ’ಗೆ ಮಂಡ್ಯ ಕಗ್ಗಂಟು

Published:
Updated:

ಬೆಂಗಳೂರು: ‘ಮೈತ್ರಿ’ ಸೂತ್ರದಂತೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೂ ಪಕ್ಷದ ಸ್ಥಳೀಯ ಕೆಲವು ನಾಯಕರು ಸುಮಲತಾ ಅಂಬರೀಷ್‌ ಬೆನ್ನಿಗೆ ನಿಂತಿರುವುದು ಕಾಂಗ್ರೆಸ್‌ ಚಿಂತೆಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ‌ ನಿವಾಸದಲ್ಲಿ‌ ಭಾನುವಾರ ಕರೆದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇದರಿಂದಾಗಿ ‘ಕೈ’ ನಾಯಕರ ಪಾಲಿಗೆ ಈ ಕ್ಷೇತ್ರ ಮತ್ತಷ್ಟು ಕಗ್ಗಂಟಾಗುವ ಲಕ್ಷಣ ಕಾಣಿಸಿದೆ.

ಚಲುವರಾಯಸ್ವಾಮಿ, ಎಂ.ಎಸ್. ಆತ್ಮಾನಂದ, ನರೇಂದ್ರಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ರಮೇಶ್ ಬಂಡಿಸಿದ್ದೇಗೌಡ, ರವಿ ಗಾಣಿಗ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯಶೋದಾ, ಮಧು ಮಾದೇಗೌಡ, ಬಿ.ಸಿ. ಶಿವಾನಂದ, ಸಿ.ಕೆ. ನಾಗರಾಜ್, ಸಚ್ಚಿದಾನಂದ, ಸಿ. ದೇವಣ್ಣ, ಸಿ.ಎಂ. ದ್ಯಾವಪ್ಪ, ರಮೇಶ್, ಪಾಪಣ್ಣ, ಅನಿಲ್ ಕುಮಾರ್, ಎಲ್.ಡಿ. ರವಿ, ಸಂಪಂಗಿ ಭಾಗವಹಿಸಿದರು.

ಕೆಲವು ನಾಯಕರು ಸಭೆಗೆ ಹಾಜರಾಗಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದ ಕೆಲವರನ್ನು ಕರೆ ಮಾಡಿ ಕರೆಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಭೆಗೂ ಮೊದಲು ಮಾತನಾಡಿದ ಶಿವಕುಮಾರ್‌, ‘ಬಹಳ ದಿನಗಳಿಂದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾತನಾಡಬೇಕಿತ್ತು. ನಾನೇನೂ ದೊಡ್ಡ ನಾಯಕ ಅಲ್ಲ. ನಾನೂ ಪಕ್ಷದ ಕಾರ್ಯಕರ್ತ. ಅವರೆಲ್ಲ ನನ್ನ ಕಷ್ಟ ಕಾಲದಲ್ಲಿ ಜೊತೆಯಲ್ಲಿದ್ದವರು. ಹೀಗಾಗಿ ಮಾತುಕತೆ ನಡೆಸುತ್ತಿದ್ದೇನೆ’ ಎಂದರು.

‘ಹಾಲಿ ಶಾಸಕ‌, ಮಾಜಿ ಶಾಸಕ ಎನ್ನುವುದು ಮುಗಿದ ಅಧ್ಯಾಯ. ಚುನಾವಣೆ ಹಿನ್ನೆಲೆಯಲ್ಲಿ ಸಭೆ ಕರೆಯುವಂತೆ ನನಗೆ ಯಾರೂ ಹೇಳಿಲ್ಲ’ ಎಂದರು.

‘ಸುಮಲತಾ ಅವರಿಗೆ ಅವರದ್ದೇ ಆದ ಗೌರವ, ಸ್ವಾಭಿಮಾನ ಇದೆ. ಅವರು ನಮ್ಮ ಮನೆ ಹೆಣ್ಣು ಮಗಳು. ಅವರೊಂದಿಗೂ ನಾನು ಮಾತನಾಡಿದ್ದೇನೆ. ನಮ್ಮ ಭಾವನೆಗಳನ್ನು ತಿಳಿಸಿದ್ದೇನೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ‌ಸಾಧ್ಯವಿಲ್ಲ’ ಎಂದರು.

ಸುಮಲತಾಗೆ ನಟ ದರ್ಶನ್‌ ಬೆಂಬಲ
ಬೆಂಗಳೂರು: ಸುಮಲತಾ ಅಂಬರೀಷ್‌ ಅವರನ್ನು ನಟ ದರ್ಶನ್ ಭಾನುವಾರ ಭೇಟಿ ಮಾಡಿ, ಸುಮಾರು ಒಂದು ಗಂಟೆ ಚರ್ಚೆ ನಡೆಸಿದ‌ರು.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಪರ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಭರವಸೆ ನೀಡಿರುವ ದರ್ಶನ್, ಅವರಿಗೆ ಧೈರ್ಯ ತುಂಬಿದ್ದಾರೆ.

‘ನೀವು ಯಾವಾಗ ಕರೆದರೂ ಬಂದು ಪ್ರಚಾರ ಮಾಡಲು ಸಿದ್ಧ. ಹಗಲಿರುಳು ಕೆಲಸ ಮಾಡಲು ಸಿದ್ಧನಿದ್ದೇನೆ. ಯಾರು ಏನೇ ಟೀಕೆ ಮಾಡಿದರೂ ನೀವು ಧೈರ್ಯಗುಂದಬೇಡಿ’ ಎಂದು ಸುಮಲತಾ ಅವರಿಗೆ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 27

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !