ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗೆ ಹರಿಯದ ನೀರು: ಒಣಗುತ್ತಿರುವ 60 ಲಕ್ಷ ಟನ್‌ ಕಬ್ಬು

80 ಸಾವಿರ ಎಕರೆ ಭೂಮಿಯಲ್ಲಿ ಬೆಳೆ, ಗದ್ದೆಯಲ್ಲಿ ₹ 1,500 ಕೋಟಿ ಬಂಡವಾಳ
Last Updated 14 ಜುಲೈ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ಕೆಆರ್‌ಎಸ್‌ ಜಲಾಶಯದಲ್ಲಿ 85 ಅಡಿ ನೀರಿನ ಸಂಗ್ರಹವಿದ್ದರೂ ಜಿಲ್ಲೆಯ 80 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಒಣಗುತ್ತಿದೆ. ತಕ್ಷಣಕ್ಕೆ ಒಂದು ಕಟ್ಟು ನೀರು ಸಿಗದಿದ್ದರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕುವ ಅಪಾಯ ಎದುರಾಗಿದೆ.

ಕಳೆದ ವರ್ಷ ಜುಲೈ, ಆಗಸ್ಟ್‌ನಲ್ಲಿ ನಾಟಿ ಮಾಡಿದ 60 ಲಕ್ಷ ಟನ್‌ ಕಬ್ಬು ಕಟಾವು ಹಂತಕ್ಕೆ ಬಂದಿದೆ. ₹ 1,500 ಕೋಟಿಗೂ ಹೆಚ್ಚು ಬಂಡವಾಳ ಕಬ್ಬಿನ ಗದ್ದೆಯಲ್ಲಿದೆ. ನಾಟಿ ಮಾಡಿದ ದಿನದಿಂದ ಮೇ ತಿಂಗಳವರೆಗೂ ನೀರಿನ ಕೊರತೆ ಉಂಟಾಗಲಿಲ್ಲ. ಲೋಕಸಭಾ ಚುನಾವಣೆ ಸಮಯದಲ್ಲಿ ನೀರಿನ ಅವಶ್ಯಕತೆ ಇಲ್ಲದಿದ್ದರೂ ನಾಲೆಗಳಿಗೆ ನೀರು ಹರಿಸಲಾಯಿತು. ಆದರೆ, ಮೇ 10ರ ನಂತರ ನಾಲೆಗಳಿಗೆ ಒಂದು ತೊಟ್ಟೂ ನೀರು ಹರಿಯದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಹೆಕ್ಟೇರ್‌ಗೆ 50 ಟನ್‌ ಇಳುವರಿ ಬರಬೇಕು. ಆದರೆ, ಸೂಕ್ತ ಸಮಯಕ್ಕೆ ನೀರು ಸಿಗದೇ ಈಗಾಗಲೇ ಕಬ್ಬು ಒಣಗುತ್ತಿದ್ದು, ಇಳುವರಿ ಕುಸಿಯುವ ಭೀತಿ ಎದುರಾಗಿದೆ. ಸರಿಯಾಗಿ ಮಳೆಯಾದರೂ ಆಗಿದ್ದರೆ ನಿರಾಳವಾಗಬಹುದಿತ್ತು. ಆದರೆ, ಮುಂಗಾರು ಆರಂಭವಾದ ನಂತರ ಜಿಲ್ಲೆಯಲ್ಲಿ ಶೇ 50 ಮಿ.ಮೀ ಮಳೆ ಕೊರತೆಯಾಗಿದೆ. ಹೀಗಾಗಿ, ಕಳೆದೊಂದು ತಿಂಗಳಿಂದ ರೈತರು ‘ಒಂದು ಕಟ್ಟು ನೀರು ಕೊಡಿ’ ಎಂದು ಮುಷ್ಕರ ನಡೆಸುತ್ತಿದ್ದಾರೆ. ಆದರೂ ಬೆಳೆಗೆ ನೀರು ಸಿಕ್ಕಿಲ್ಲ.

ಸದ್ಯ ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದ ನೀರಿನ ಮಟ್ಟ 68 ಅಡಿ ಇದ್ದಾಗಲೂ ರೈತರು ಬೆಳೆಗೆ ನೀರು ಪಡೆದಿದ್ದಾರೆ. ಈಗ ನೀರಿನ ಮಟ್ಟ 85 ಅಡಿಗೆ ತಲುಪಿದರೂ ಬೆಳೆಗೆ ನೀರು ಸಿಗದಿರುವುದು ರೈತರಿಗೆ ನುಂಗಲಾಗದ ತುತ್ತಾಗಿದೆ.

ಪ್ರಾಧಿಕಾರದತ್ತ ಬೆರಳು:ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿ ವರ್ಷ ಕಳೆದಿದ್ದರೂ ಒಮ್ಮೆಯೂ ನೀರು ಹರಿಸುವ ನಿರ್ಧಾರ ಕೈಗೊಂಡಿಲ್ಲ. ಹಲವು ಸುತ್ತಿನ ಸಭೆಗಳು ನಡೆದಿವೆ, ಜಲಾಶಯಗಳ ಪರಿಶೀಲನೆ, ನೀರಿನ ಲಭ್ಯತೆ ಕುರಿತು ಅಧ್ಯಯನ ನಡೆದಿದೆ. ಆದರೆ ನೀರು ಹರಿಸುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸಿದ್ದಕ್ಕೆ ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್‌ ನೀಡಿತ್ತು. ಪ್ರಾಧಿಕಾರದ ನಡೆಯಿಂದ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು ಸರ್ಕಾರ ದೆಹಲಿಯತ್ತ ಬೆರಳು ತೋರುತ್ತಿದೆ.

‘ಜಿಲ್ಲೆಯ ರೈತರಿಗೆ ನೀರು ಬೇಕಾಗಿದೆ ಎಂಬ ಪ್ರಸ್ತಾವವನ್ನೇ ಪ್ರಾಧಿಕಾರಕ್ಕೆ ಸಲ್ಲಿಸದಿರುವುದು ನಿರ್ಲಕ್ಷ್ಯದ ಪರಮಾವಧಿ.ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಂಕಷ್ಟ ಸ್ಥಿತಿ ರಾಜ್ಯ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪುತ್ರನ ಸೋಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ದೂರುತ್ತಾರೆ ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ.

‘ಒಳ ಹರಿವು ಹೆಚ್ಚಾಗಿದೆ; ನೀರು ಹರಿಸಿ’
‘ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ನಾಲೆಗಳಿಗೆ ನೀರು ಹರಿಸಲು ಅಡ್ಡಿ ಇಲ್ಲ ಎಂದು ಈಚೆಗೆ ನಡೆದ ಸಭೆಯಲ್ಲಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಸದ್ಯ ಒಳಹರಿವು ಹೆಚ್ಚಾಗಿದ್ದು ತಕ್ಷಣ ಒಣಗುತ್ತಿರುವ ಕಬ್ಬಿನ ಬೆಳೆಗೆ ನೀರು ಹರಿಸಬೇಕು’ ಎಂದು ರೈತ ಹೊಳಲು ನಾಗರಾಜ್‌ ಒತ್ತಾಯಿಸಿದರು.

‘ಬೆಳೆಗಳಿಗೆ ಹರಿಸಲು ಜಲಾಶಯದ ನೀರು ನಿಗದಿತ ಮಟ್ಟ ತಲುಪಬೇಕು. ಪ್ರಾಧಿಕಾರ, ಸರ್ಕಾರದ ಸೂಚನೆ ಇಲ್ಲದೆ ನೀರು ಬಿಡಲು ಸಾಧ್ಯವಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ತಿಳಿಸಿದರು.

**

ಜಲಾಶಯದ ಮಟ್ಟ 96 ಅಡಿ ತಲುಪಿದ ನಂತರವಷ್ಟೇ ಕೃಷಿಗೆ ನೀರು ಹರಿಸುವಂತೆ ಪ್ರಾಧಿಕಾರದ ಮುಂದೆ ಪ್ರಸ್ತಾವ ಸಲ್ಲಿಸಬಹುದು. ಅಲ್ಲಿಯವರೆಗೂ ನಾಲೆಗಳಿಗೆ ನೀರು ಬಿಡುವ ಅವಕಾಶ ಇಲ್ಲ.
–ಎನ್‌.ಮಂಜುಶ್ರೀ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT