ಭಾನುವಾರ, ಜನವರಿ 26, 2020
29 °C
ಪ್ರತಿಭಟನೆಯಲ್ಲಿ ಅಚ್ಚುಕಟ್ಟುತನ ಮೆರೆದ ಸ್ವಯಂಸೇವಕರ ಪಡೆ

ಕಣ್ಣು ಹಾಯಿಸಿದಲ್ಲೆಲ್ಲ ಶ್ವೇತವಸ್ತ್ರ, ತಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

otestors during a demonstration against the new citizenship law at Adyar-Kannur near Mangaluru (PTI)

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌– ಕಣ್ಣೂರಿನಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಕಣ್ಣು ಹಾಯಿಸಿದಲ್ಲೆಲ್ಲ ತಿರಂಗ ಹಿಡಿದ ಶ್ವೇತ ವಸ್ತ್ರಧಾರಿಗಳೇ ಕಾಣಿಸುತ್ತಿದ್ದರು. ಹೆದ್ದಾರಿಯ ಎರಡೂ ಕಡೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಉದ್ದದವರೆಗೂ ತಿರಂಗಗಳ ಹಾರಾಟ ವ್ಯಾಪಿಸಿತ್ತು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಗೆ ಬಂದಿದ್ದ ಬಹುತೇಕರ ಕೈಗಳಲ್ಲಿ ಭಾರತದ ತ್ರಿವರ್ಣ ಧ್ವಜ ಇತ್ತು. ಕೆಲವರು ಒಂದು ಕೈಯಲ್ಲಿ ತಿರಂಗ ಹಿಡಿದಿದ್ದರೆ, ಇನ್ನೊಂದರಲ್ಲಿ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದು ಪ್ರತಿಭಟನಾ ಸಭೆಯತ್ತ ಹೆಜ್ಜೆ ಹಾಕಿದ್ದರು. ಹೆಚ್ಚಿನವರು ‘ಬಾಯ್ಕಾಟ್‌ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌’ ಎಂಬ ಬ್ಯಾಂಡ್‌ ಅನ್ನು ಹಣೆಗೆ ಕಟ್ಟಿಕೊಂಡಿದ್ದರು.

‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ತಿರಸ್ಕರಿಸಿ’, ‘ನಾನು ಭಾರತೀಯ, ಧರ್ಮದ ಹೆಸರಿನಲ್ಲಿ ನಮ್ಮನ್ನು ಒಡೆಯಬೇಡಿ’, ‘ಗೋಲಿಬಾರ್‌ನಲ್ಲಿ ಗಾಯಗೊಂಡ 33 ಪೊಲೀಸರು ಎಲ್ಲಿದ್ದಾರೆ?’... ಇತ್ಯಾದಿ ಘೋಷಣೆಗಳುಳ್ಳ ಸಹಸ್ರಾರು ಫಲಕಗಳು ಕಂಡುಬಂದವು.

ಕಟ್ಟಡದ ಮೇಲೆಲ್ಲ ಜನ: ಮಧ್ಯಾಹ್ನ 12ರಿಂದಲೇ ಜನರು ಸಮಾವೇಶದ ಸ್ಥಳದತ್ತ ಬರಲಾರಂಭಿಸಿದ್ದರು. ವಾಹನ ನಿಲುಗಡೆಗಾಗಿ ಏಳು ಸ್ಥಳಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ದ್ವಿಚಕ್ರ ವಾಹನಗಳು, ಕಾರುಗಳು ಅಲ್ಲಿ ಮಧ್ಯಾಹ್ನವೇ ಜಮೆಯಾಗಿದ್ದವು. ಪ್ರತಿಭಟನೆ ಆರಂಭಕ್ಕೆ ಕೆಲ ಸಮಯ ಮುಂಚಿನವರೆಗೂ ಬಸ್‌ಗಳಲ್ಲಿ ಜನರು ಸ್ಥಳಕ್ಕೆ ಬರುತ್ತಲೇ ಇದ್ದರು.

ಪ್ರತಿಭಟನಾ ಸಭೆಯನ್ನು ವೀಕ್ಷಿಸಲು ಬಂದಿದ್ದ ಜನರು ಮೈದಾನದಲ್ಲಿ ತುಂಬಿದ್ದರೆ, ಹಲವರು ಸಮೀಪದ ಕಟ್ಟಡಗಳನ್ನು ಏರಿದ್ದರು. ಸುತ್ತಮುತ್ತ ಕಣ್ಣು ಹಾಯಿಸಿದಲ್ಲೆಲ್ಲ ಜನರು ಕಟ್ಟಡ ಏರಿ ಸಭೆ ವೀಕ್ಷಿಸುತ್ತಿದ್ದುದು ಕಂಡುಬಂತು.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸ್ಕೈವಾಕ್‌ ಮೇಲೂ ಜನರು ಕಿಕ್ಕಿರಿದಿದ್ದರು. ಸುತ್ತಮುತ್ತಲಿನ ಮನೆಗಳ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಕಟ್ಟಡಗಳ ಮೇಲೆ ಗುಂಪುಗೂಡಿದ್ದರು.

ಸಮಯಕ್ಕೆ ಮಿತಿ: ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಅತಿಥಿಗಳಿಗೆ ಸಮಯ ನಿಗದಿ ಮಾಡಲಾಗಿತ್ತು.

ನಿಗದಿಗಿಂತ ತುಸು ಹೆಚ್ಚು ಮಾತನಾಡಲು ಯಾರಿಗೂ ಅವಕಾಶ ನೀಡಲಿಲ್ಲ. ಸಂಘಟಕರು ಮತ್ತೆ ಮತ್ತೆ ವೇಳಾಪಟ್ಟಿಯನ್ನು ಪಾಲಿಸುವ ಕುರಿತು ನೆನಪಿಸುತ್ತಲೇ ಇದ್ದರು.

ಅತಿಥಿಗಳ ಮಾತು ಮುಗಿಯುತ್ತಿದ್ದಂತೆಯೇ ‘ಆಝಾದಿ’ ಘೋಷಣೆ ಮೊಳಗುತ್ತಿತ್ತು. ಸಿಪಿಐ ಯುವ ನಾಯಕ ಡಾ.ಕನ್ಹಯ್ಯ ಕುಮಾರ್‌ ಮಾದರಿಯಲ್ಲೇ ಘೋಷಣೆಗಳನ್ನು ಕೂಗುತ್ತಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು