ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೌಟ್ಸ್‌ ಮಕ್ಕಳಿಂದ ಪರೀಕ್ಷಾರ್ಥಿಗಳಿಗೆ ಮಾಸ್ಕ್‌

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧತೆ
Last Updated 25 ಮೇ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಚಿಕ್ಕೋಡಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ಮಕ್ಕಳಿಗೆ ವಿತರಿಸುವುದಕ್ಕಾಗಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಬಟ್ಟೆಯ ಮುಖಗವಸುಗಳನ್ನು (ಮಾಸ್ಕ್) ತಯಾರಿಸಿ ಸಂಗ್ರಹಿಸಿದ್ದಾರೆ.

ಮಾರಕ ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ, ಮನೆಯಿಂದ ಹೊರಗಡೆ ಬರುವಾಗ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಕೂಡ ಮಾಸ್ಕ್‌ ಬಳಸಬೇಕಾಗುತ್ತದೆ. ಎರಡೂ ಶೈಕ್ಷಣಿಕ ಜಿಲ್ಲೆಗಳಿಂದ 78ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ನೀಡುವುದಕ್ಕಾಗಿ ಈಗಾಗಲೇ 80ಸಾವಿರ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಪ್ರತಿ ವಿದ್ಯಾರ್ಥಿಗೂ ತಲಾ ಒಂದು ಮಾಸ್ಕ್ ಕೊಡಲು ನಿರ್ಧರಿಸಲಾಗಿದೆ. ಕೋವಿಡ್–19 ಲಾಕ್‌ಡೌನ್‌ನಿಂದ ದೊರೆತ ರಜೆಯನ್ನು ಮಾಸ್ಕ್ ಸಿದ್ಧಪಡಿಸುವುದಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲಾಗಿದೆ.

ಹಲವು ಅನುಕೂಲ:

‘ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಹಾಗೂ ಶಿಕ್ಷಕರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಮಾಸ್ಕ್‌ ತಯಾರಿಸುವುದು ಹೇಗೆ ಎನ್ನುವುದರ ವಿಡಿಯೊ ಅವರಿಗೆ ಕಳುಹಿಸಲಾಗಿತ್ತು. ಆ್ಯಪ್‌ ಒಂದರ ಮೂಲಕ ಆನ್‌ಲೈನ್‌ನಲ್ಲಿ ತರಬೇತಿ ನೀಡಲಾಗಿತ್ತು. ಅದನ್ನು ಆಧರಿಸಿ ಕೆಲವರು ಹೊಲಿಗೆ ಯಂತ್ರವನ್ನು ಬಳಸಿದ್ದಾರೆ. ಕೆಲವರು ಸೂಜಿ–ದಾರದಿಂದಲೇ ಮಾಸ್ಕ್‌ ಸಿದ್ಧಪಡಿಸಿದ್ದಾರೆ. ಇದರಿಂದ ಪರೀಕ್ಷಾರ್ಥಿಗಳಿಗೆ ಉಪಯೋಗವಾಗಲಿದೆ. ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಪಡಿಸಿದಂತೆಯೂ ಆಗಿದೆ. ಅವರು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಿದಂತೆಯೂ ಆಗಿದೆ. ಮಾಸ್ಕ್‌ಗಳ ಕೊರತೆಯೂ ನೀಗಿದೆ’ ಎಂದು ಚಿಕ್ಕೋಡಿ ಡಿಡಿಪಿಐ ಕೂಡ ಆಗಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳು ತಮಗೆ ಹಾಗೂ ಕುಟುಂಬದವರಿಗೂ ಮಾಸ್ಕ್‌ಗಳನ್ನು ತಯಾರಿಸಿಕೊಂಡಿದ್ದಾರೆ. ಇದನ್ನು ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೆರೆ ಹೊರೆಯವರಿಗೂ ಜಾಗೃತಿ ಮೂಡಿಸಿದ್ದಾರೆ. ಅವರು ಸಿದ್ಧಪಡಿಸಿದ ಮುಖಗವಸುಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿದ್ದರು. ಅವುಗಳನ್ನು ಈಗ ಬಿಇಒ ಕಚೇರಿಗಳಲ್ಲಿ ಸಂಗ್ರಹಿಸಲಾಗಿದೆ. ಪರೀಕ್ಷೆ ಆರಂಭದ ಮೊದಲ ದಿನ ಸಮವಸ್ತ್ರಧಾರಿಯಾಗಿ ಬರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು, ಶಿಕ್ಷಕರಿಂದಲೇ ವಿತರಣೆ ಮಾಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಹಲವು ಚಟುವಟಿಕೆ:

‘ಸಂಕಲ್ಪ’ ಕಾರ್ಯಕ್ರಮದ ಮೂಲಕ ಮಕ್ಕಳು ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ತಡೆಯಲು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಕುಟುಂಬದವರು, ನೆರೆ–ಹೊರೆಯವರು, ಸ್ನೇಹಿತರು, ಬಂಧುಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ತಿಳಿಸಿಕೊಡುತ್ತಿದ್ದಾರೆ. ಕೈತೊಳೆಯುವ ವಿಧಾನದ ಬಗ್ಗೆ ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾಷಣ, ಗಾಯನ, ಕಿರುನಾಟಕಗಳ ವಿಡಿಯೊ ಮಾಡಿ ಕಳುಹಿಸುತ್ತಿದ್ದಾರೆ. ರೋವರ್ಸ್‌ ಅಂಡ್ ರೇಂಜರ್ಸ್‌ (ಕಾಲೇಜು ಹಂತದ ವಿದ್ಯಾರ್ಥಿಗಳು) ಕೊರೊನಾ ವಾರಿಯರ್‌ಗಳೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು.

‘ಶಾಲೆಗಳು ಪುನರಾರಂಭವಾದ ಮೇಲೂ ಮಾಸ್ಕ್‌ಗಳ ಅಗತ್ಯ ಬೀಳುತ್ತದೆ. ಎಲ್ಲ ಮಕ್ಕಳಿಗೂ ಖರೀದಿಸಲು ಕಷ್ಟವಾಗಬಹುದು. ಹೀಗಾಗಿ, ನಾವೇ ವಿತರಿಸುವುದಕ್ಕೂ ಉದ್ದೇಶಿಸಿದ್ದೇವೆ. ಇದಕ್ಕಾಗಿ ಎನ್‌ಜಿಒಗಳು, ದಾನಿಗಳ ಮೂಲಕ ಸಂಗ್ರಹಿಸಿ ‘ಮಾಸ್ಕ್‌ ಬ್ಯಾಂಕ್‌’ ಮಾಡುವುದಕ್ಕೂ ಯೋಜಿಸಿದ್ದೇವೆ’ ಎಂದು ತಿಳಿಸಿದರು.

ಸ್ಯಾನಿಟೈಸರ್‌ಗೂ ಕ್ರಮ:

‘ಶಾಲೆಯವರ ಬಳಕೆಗಾಗಿ ಇಲಾಖೆಯಿಂದ ಹ್ಯಾಂಡ್‌ ಸ್ಯಾನಿಟೈಸರ್‌ ಪೂರೈಸುವ ಸಾಧ್ಯತೆ ಇದೆ. ಆದಾಗ್ಯೂ ಸ್ಥಳೀಯವಾಗಿ ಎನ್‌ಜಿಒಗಳು ಅಥವಾ ದಾನಿಗಳ ಮೂಲಕ ಸಂಗ್ರಹಿಸುವಂತೆ ಬಿಇಒಗಳಿಗೆ ಸೂಚಿಸಲಾಗಿದೆ. ಕಾಗವಾಡ ಕ್ಷೇತ್ರದ ಶಾಸಕರೂ ಆಗಿರುವ ಜವಳಿ ಸಚಿವ ಶ್ರೀಮಂತ ಪಾಟೀಲ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಸ್ಯಾನಿಟೈಸರ್‌ ಒದಗಿಸುವುದಾಗಿ ತಿಳಿಸಿದ್ದಾರೆ’ ಎಂದರು.

ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆಂದು ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT