ಜಾತ್ಯತೀತ ಅಭ್ಯರ್ಥಿಗಳ ಬೆಂಬಲಿಸಲು ನಿರ್ಧಾರ

ಶನಿವಾರ, ಏಪ್ರಿಲ್ 20, 2019
24 °C
ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಸಭೆ

ಜಾತ್ಯತೀತ ಅಭ್ಯರ್ಥಿಗಳ ಬೆಂಬಲಿಸಲು ನಿರ್ಧಾರ

Published:
Updated:
Prajavani

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಲು ಪ್ರಗತಿಪರ ಚಿಂತಕರು, ಸಾಹಿತಿಗಳು ನಿರ್ಧರಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಜಯನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ‘ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಸಿದ್ಧಾಂತ ಪ್ರತಿಪಾದಕರನ್ನು ಬೆಂಬಲಿಸುವುದು ಸೂಕ್ತ’ ಎಂದು ತೀರ್ಮಾನಿಸಿದರು.

ಎಚ್‌.ಎಸ್‌. ದೊರೆಸ್ವಾಮಿ ಮಾತನಾಡಿ, ‘ಸಂಸತ್ತಿನಲ್ಲಿ ಒಂದೆರಡು ನಿಮಿಷ ಮಾತನಾಡಲು ಆಗದ ಪ್ರಧಾನಿ, ಸಾರ್ವಜನಿಕ ಸಭೆಗಳಲ್ಲಿ ಘರ್ಜಿಸುತ್ತಾರೆ. ಇವರನ್ನು ಇದೇ ರೀತಿ ಬಿಟ್ಟರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ಎಲ್ಲರೂ ಸೇರಿ ಈ ಗಂಡಾಂತರದಿಂದ ದೇಶವನ್ನು ಪಾರು ಮಾಡಬೇಕಿದೆ’ ಎಂದರು.

ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ‘ಸ್ವಾತಂತ್ರ್ಯ ಬಂದಾಗಿನಿಂದಲೂ ಸೇನೆ ಸಾಹಸ ತೋರಿಸುತ್ತಲೇ ಬಂದಿದೆ. ಆದರೆ, ಸೇನೆಯ ಶೌರ್ಯವನ್ನು ತಮ್ಮದೆಂದು ಹೇಳಿಕೊಳ್ಳುವುದು ಸರಿಯಲ್ಲ. ಇದು ಅವರ ಸಣ್ಣತನವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ‘ಪ್ರಜಾಪ್ರಭುತ್ವದ ಉಳಿವಿಗಾಗಿ ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು. ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ಮಾಡೋಣ’ ಎಂದರು.

ಲೇಖಕಿ ಬಿ.ಟಿ.ಲಲಿತಾ ನಾಯ್ಕ್ ಮಾತನಾಡಿ, ‘ಕೆಲ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮಂಡ್ಯ ಲೋಕಸಭಾ ಕ್ಷೇತ್ರವನ್ನೇ ಗುರಿಯಾಗಿಸಿಕೊಂಡು ಪ್ರಚಾರ ಮಾಡುತ್ತಿವೆ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತಿಳಿಸುವಲ್ಲಿ ವಿಫಲವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತೇಜಸ್ವಿ ಸೂರ್ಯ ಅವಿವೇಕಿ’
‘ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವಿವೇಕಿ. ಮತಾಂಧನ ರೀತಿ ಮಾತನಾಡುತ್ತಾನೆ. ಮಹಿಳೆಯರ ಬಗ್ಗೆ ಯಾವ್ಯಾವ ಮಾತುಗಳನ್ನಾಡಿದ್ದಾರೆ ಎನ್ನುವುದು ನಮ್ಮ ಮುಂದೆ ಇದೆ. ಇಂತವರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿದರೆ, ಏನಾಗುತ್ತದೆ ಯೋಚನೆ ಮಾಡಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ಧರಾಮಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !