ಮಂಗಳವಾರ, ಜನವರಿ 21, 2020
29 °C
ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಸಹಾಯಕತೆ

ಗಣಿ ಇಲಾಖೆ ಅಸಹಕಾರ: ತನಿಖೆ ಸ್ಥಗಿತ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವರ ಬಂಧುಗಳು, ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರೂ ಸೇರಿದಂತೆ ಕೆಲವು ಪ್ರಭಾವಿಗಳು ನಡೆಸಿದ್ದರೆನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಮಾಹಿತಿ ನೀಡುವಂತೆ ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ಸುಮಾರು 50 ಪತ್ರ ಬರೆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕವಡೆ ಕಾಸಿನ ಕಿಮ್ಮತ್ತು ಕೊಡದಿರುವುದರಿಂದ ತನಿಖೆ ಸ್ಥಗಿತಗೊಂಡಿದೆ. 

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ತನಿಖೆಗೆ 2014ರಲ್ಲಿ ಎಸ್‌ಐಟಿ ರಚಿಸಿದ್ದು, ಬಿ ಮತ್ತು ಸಿ ವರ್ಗದ ಗಣಿಗಳಲ್ಲಿ ಅಕ್ರಮವಾಗಿ ಅದಿರು ತೆಗೆದು ಸಾಗಿಸಿದ ಪ್ರಕರಣಗಳ ತನಿಖೆ ನಡೆಸುತ್ತಿದೆ. 2015–16ರಲ್ಲಿ 14 ಪ್ರಕರಣಗಳು ದಾಖಲಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಸಹಕಾರದಿಂದಾಗಿ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಪ್ರತಿ ಪ್ರಕರಣದಲ್ಲೂ ಕನಿಷ್ಠ ಮೂರ್ನಾಲ್ಕು ‍ಪತ್ರ ಬರೆಯಲಾಗಿದೆ. 2015ರಿಂದಲೂ ಸತತವಾಗಿ ಪತ್ರ ಬರೆಯುತ್ತಿದ್ದರೂ ಇಲಾಖೆ ನಿರ್ದೇಶಕರು ಕ್ಯಾರೆ ಎನ್ನುತ್ತಿಲ್ಲ. ಈ ಅವಧಿಯಲ್ಲಿ ಅರ್ಧ ಡಜನ್‌ ಅಧಿಕಾರಿಗಳು ನಿರ್ದೇಶಕರಾಗಿ ಬಂದಿದ್ದಾರೆ. ಎಸ್‌ಐಟಿ ತನಿಖಾಧಿಕಾರಿಗಳು ನಿರ್ದೇಶಕರನ್ನು ಅನೇಕ ಬಾರಿ ಖುದ್ದು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸುಪ್ರೀಂಕೋರ್ಟ್‌ ಮೇಲುಸ್ತುವಾರಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸಿದ ಕೇಂದ್ರ ಉನ್ನತಾಧಿಕಾರದ ಸಮಿತಿ (ಸಿಇಸಿ) 2012ರ ಫೆಬ್ರುವರಿ 3ರಂದು ಸಲ್ಲಿಸಿದ ಅಂತಿಮ ವರದಿಯಲ್ಲಿ, ರಾಜ್ಯದ ಒಟ್ಟು 166 ಗಣಿ ಗುತ್ತಿಗೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿತ್ತು. ಅಲ್ಪಸ್ವಲ್ಪ ಅಕ್ರಮಗಳು ನಡೆದಿದ್ದ 45 ಗುತ್ತಿಗೆಗಳನ್ನು ‘ಎ’ ವರ್ಗದಲ್ಲಿ; ಶೇ 10ಕ್ಕಿಂತಲೂ ಕಡಿಮೆ ಅಕ್ರಮ ಆಗಿದ್ದ 72 ಗುತ್ತಿಗೆಗಳನ್ನು ‘ಬಿ’ ವರ್ಗದಲ್ಲಿ ಮತ್ತು ವ್ಯಾಪಕ ಅಕ್ರಮ ಎಸಗಿದ್ದ 51 ಗುತ್ತಿಗೆಗಳನ್ನು ‘ಸಿ’ ವರ್ಗದಲ್ಲಿ ಇಡಲಾಗಿದೆ.

2014ರ ಜನವರಿ 7ರಂದು ಕೋರ್ಟ್‌ ನೀಡಿದ ಆದೇಶದನ್ವಯ ‘ಸಿ’ ವರ್ಗದ ಗಣಿಗಳಲ್ಲಿ ಹೊರತೆಗೆದ ಅದಿರು ಪ್ರಮಾಣ ನಿರ್ಧರಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಗಣಿ ಹಾಗೂ ಭೂವಿಜ್ಞಾನ ಇಲಾಖೆ ನಿರ್ದೇಶಕರು, ಅರಣ್ಯ ಸಂರಕ್ಷಣಾಧಿಕಾರಿ, ಇಡಿಸಿಎಸ್‌ ನಿರ್ದೇಶಕರು, ಐಬಿಎಂ, ಜಿಎಸ್‌ಐ ಮತ್ತು ದೂರ ಸಂವೇದಿ ಸಂಸ್ಥೆಗಳ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದಾರೆ. ‘ಬಿ’ ವರ್ಗದ ಗಣಿಗಳಲ್ಲಿ ಹೊರ ತೆಗೆದ ಅದಿರು ಪ್ರಮಾಣ ಕುರಿತು ಸಿಇಸಿ ತೀರ್ಮಾನಿಸಲಿದೆ.

ದೂರ ಸಂವೇದಿ ತಂತ್ರಜ್ಞಾನಗಳು ಹಾಗೂ ವಿಡಿಯೊ ದೃಶ್ಯಾವಳಿಗಳ ಮೂಲಕ ಗಣಿಗಳಿಂದ ಹೊರ ತೆಗೆದ ಅದಿರು ಪ್ರಮಾಣ ನಿರ್ಧರಿಸಬಹುದು. ಆದರೆ, ನಾಲ್ಕೈದು ವರ್ಷ ಕಳೆದರೂ ಯಾವ ಪ್ರಮಾಣದಲ್ಲಿ ಅದಿರು ತೆಗೆಯಲಾಗಿದೆ ಎಂಬ ವರದಿಯನ್ನು ಗಣಿ ಇಲಾಖೆ ನೀಡಿಲ್ಲ. 

ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ಸಮಗ್ರ ಚಿತ್ರಣ ಇದುವರೆಗೆ ಸಿಕ್ಕಿಲ್ಲ. ಲೋಕಾಯುಕ್ತರ ವರದಿ ಪ್ರಕಾರ ₹64 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯದ 2.98 ಕೋಟಿ ಟನ್‌ ಅದಿರನ್ನು ಅಕ್ರಮವಾಗಿ ತೆಗೆದು ಸಾಗಿಸಲಾಗಿದೆ.

ಆದರೆ, ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಕೆ. ಪಾಟೀಲರ ನೇತೃತ್ವದ ಸಂಪುಟ ಉಪ ಸಮಿತಿ 35 ಕೋಟಿ ಟನ್‌ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಸಾಕಷ್ಟು ಪತ್ರಗಳು ಬಂದಿವೆ
ಸಿ ವರ್ಗದ ಗಣಿಗಳಲ್ಲಿ ಹೊರ ತೆಗೆದಿರುವ ಅದಿರು ಪ್ರಮಾಣ ಕುರಿತು ವರದಿ ಕೊಡುವಂತೆ ಎಸ್‌ಐಟಿ ಸಾಕಷ್ಟು ಪತ್ರಗಳನ್ನು ಬರೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳು ಖಚಿತ‍ಪಡಿಸಿವೆ.

ತಜ್ಞರ ಸಮಿತಿ ವರದಿ ಕೊಟ್ಟ ತಕ್ಷಣವೇ ಎಸ್‌ಐಟಿಗೆ ಕಳುಹಿಸುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ. 

ಲೋಕಾಯುಕ್ತರಿಗೂ ಎಸ್‌ಐಟಿ ಪತ್ರ: ‘ಅಕ್ರಮ ಗಣಿಗಾರಿಕೆ ಸಂಬಂಧದ ಮಾಹಿತಿ ಕೊಡದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸತಾಯಿಸುತ್ತಿದೆ’ ಎಂದು ಆರೋಪಿಸಿ ಲೋಕಾಯುಕ್ತರಿಗೂ ಎಸ್‌ಐಟಿ ಪತ್ರ ಬರೆದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು