ಬುಧವಾರ, ಜೂನ್ 3, 2020
27 °C

ಚೇತರಿಕೆಯತ್ತ ಕುಕ್ಕುಟೋದ್ಯಮ: ಸಚಿವ ಪ್ರಭು ಚವ್ಹಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಅವಧಿ ದೇಶವನ್ನೇ ಸಂಕಷ್ಟಕ್ಕೆ ಸಿಲುಕಿಸಿತ್ತು, ಉತ್ಪಾದನಾ ವಲಯಗಳು ಇದಕ್ಕೆ ಹೊರತಾಗಿರಲಿಲ್ಲ. ಕುಕ್ಕುಟೋದ್ಯಮ ಇದರಿಂದಾಗಿ ನೆಲಕಚ್ಚಿತು. ಸದ್ಯ ಕುಕ್ಕುಟೋದ್ಯಮ ಚೇತರಿಕೆ ಕಾಣುತ್ತಿದ್ದು ಕೋಳಿ ಮಾಂಸ ಮತ್ತು ಮೊಟ್ಟೆಯ ಮಾರಾಟದಲ್ಲಿ ಗಣನೀಯವಾದ ಏರಿಕೆಯಾಗಿರುವುದು ಸಂತಸ ತಂದಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

‘ಕೋವಿಡ್-19 ಲಾಕ್‌ಡೌನ್‌ಗಿಂತ ಮೊದಲು ರಾಜ್ಯದಲ್ಲಿ ಪ್ರತಿ ದಿನ ಸುಮಾರು 600 ರಿಂದ 700 ಮೆಟ್ರಿಕ ಟನ್ ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಲಾಕ್ಡೌನ ಅವಧಿಯಲ್ಲಿ ಅಂದರೆ ಎಪ್ರಿಲ್  ಮೊದಲ ವಾರದಲ್ಲಿ ಎಲ್ಲಾ ಜಿಲ್ಲೆಗಳಿಂದ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಕೋಳಿ ಮಾಂಸದ ಬಳಕೆಯ ಪ್ರಮಾಣ ಪ್ರತಿ ದಿನ ಸುಮಾರು 85.14 ಮೆಟ್ರಿಕ್‌ ಟನ್‌ಗೆ ಇಳಿಕೆಯಾಗಿರುವುದು ಕಂಡುಬಂದಿತು. ಪ್ರತಿದಿನ ನಿರಂತರವಾಗಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದ್ದು ಸಾರ್ವಜನಿಕರ ಬಳಕೆಗೆ ಕೋಳಿ ಮಾಂಸ ಲಭ್ಯವಾಗುವಂತೆ ಮಾಡಿರುವುದರಿಂದ ಸದ್ಯ ಕೋಳಿ ಮಾಂಸದ ಬಳಕೆ ಸುಮಾರು 368.54 ಮೆಟ್ರಿಕ್‌ ಟನ್‌ಗೆ ಏರಿರುವುದು ಕಂಡುಬಂದಿದೆ’ ಎಂದು ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

'ರಾಜ್ಯದಲ್ಲಿ ಲಾಕ್‌ಡೌನ್‌ ಅವಧಿಗೂ ಪೂರ್ವದಲ್ಲಿ ಪ್ರತಿ ದಿನ ಸುಮಾರು 130 ರಿಂದ 150 ಲಕ್ಷ ಕೋಳಿ ಮೊಟ್ಟೆ ಸಾರ್ವಜನಿಕರು ಸೇವಿಸುತ್ತಿದ್ದರು. ಕೋವಿಡ್-19 ಲಾಕ್‌ಡೌನ್‌ ಅವಧಿಯಲ್ಲಿ ಕೋಳಿ ಮೊಟ್ಟೆ ಬಳಕೆಯ ಪ್ರಮಾಣ 37 ಲಕ್ಷ ಇಳಿಕೆಯಾಗಿತ್ತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೊಟ್ಟೆ ಮತ್ತು ಮಾಂಸದ ಬಳಕೆ ಹೆಚ್ಚಿಸುವಲ್ಲಿ ಇಲಾಖೆಯಿಂದ ಸಾಕಷ್ಟು ಕ್ರಮಕೈಗೊಳ್ಳಲಾಗಿತ್ತು. ಸದ್ಯ ಮೊಟ್ಟೆಯ ಬಳಕೆ 107.88 ಲಕ್ಷಗಳಿಗೆ ಏರಿಕೆಯಾಗಿದೆ' ಎಂದು ಹೇಳಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ಕೋಳಿ ಮೊಟ್ಟೆ ಹಾಗೂ ಮಾಂಸದ ಧಾರಣೆಯನ್ನು ವರ್ತಕರು ಅಸಹಜವಾಗಿ ಹೆಚ್ಚಿಸುವುದನ್ನು ತಪ್ಪಿಸಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲೆ ದೊರಕುವಂತೆ ಮಾಡಲು ಇಲಾಖೆಯಿಂದ ಎಲ್ಲ ಕ್ರಮಗಳನ್ನು ಸಹ ಕೈಗೊಳ್ಳಲಾಗಿತ್ತು.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾಂಸಾಹಾರ ಸೇವಿಸುವ ಪ್ರತಿ ವ್ಯಕ್ತಿಯಿಂದ ವಾರ್ಷಿಕ  ಅಂದಾಜು 3 ಕೆಜಿ ಕೋಳಿ ಮಾಂಸ ಸೇವನೆಯಾಗುತ್ತದೆ. ಆದರೆ ಬೇರೆ ದೇಶದಲ್ಲಿ ಇದರ ಪ್ರಮಾಣ 10 ರಿಂದ 11 ಕೆ.ಜಿ ಇದೆ. ಕೋಳಿ ಮಾಂಸ ಪ್ರೋಟಿನ್‌ಗಳ ಆಗರ. ಮಾನವನ ದೇಹಕ್ಕೆ ಬೇಕಾಗುವ ಕೊಬ್ಬು, ಖನಿಜಾಂಶ, ಪ್ರೋಟಿನ್ ಬಿ ಹಾಗೂ ಇತರೆ ಪೋಷಕಾಂಶಗಳನ್ನು ಒದಗಿಸುವ ಆಹಾರವಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು