ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಕಾರ್ಮಿಕ– ರೈತ ವಿರೋಧಿ: ಆಕ್ರೋಶ

ಭಾರತ್‌ ಬಂದ್‌ಗೆ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ: ಸಾರಿಗೆ ವ್ಯವಸ್ಥೆ ಇಲ್ಲದೆ ಜನಜೀವನ ಅಸ್ತವ್ಯಸ್ತ
Last Updated 8 ಜನವರಿ 2019, 11:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೋಟಾರು ವಾಹನ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಭಾರತ್ ಬಂದ್‌ಗೆ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಒಂದೇ ಒಂದು ಬಸ್‌ ಸಹ ರಸ್ತೆಗಿಳಿಯಲಿಲ್ಲ. ಹುಬ್ಬಳ್ಳಿ–ಧಾರವಾಡದ ಮಧ್ಯೆ ಸಂಚರಿಸುವ ಬಿಆರ್‌ಟಿಎಸ್ ಸೇವೆಯೂ ಸಂಪೂರ್ಣ ಸ್ಥಗಿತಗೊಂಡಿದ್ದ ಪರಿಣಾಮ ಜನ ಜೀವನ ಅಸ್ತವ್ಯವಸ್ತವಾಯಿತು. ಚನ್ನಮ್ಮ ವೃತ್ತದ ಸುತ್ತಮುತ್ತಲಿನ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ಮೊದಲೇ ರಜೆ ಘೋಷಣೆ ಮಾಡಲಾಗಿತ್ತು.

ನಗರದ ಐಬಿಎಂಆರ್ ಕಾಲೇಜಿನಲ್ಲಿ ನಡೆದ ಜೆಇಇ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಸ್ವಲ್ಪ ತೊಂದರೆ ಅನುಭವಿಸಿದರು. ಬೆಳಿಗ್ಗೆ 7.30ಕ್ಕೆ ಪರೀಕ್ಷೆ ನಿಗದಿಯಾಗಿದ್ದ ಕಾರಣ ಬಹುತೇಕ ಮಂದಿ ಸೋಮವಾರವೇ ಹುಬ್ಬಳ್ಳಿಗೆ ಬಂದಿದ್ದರು. ಆದರೆ ಉಳಿದುಕೊಂಡಿದ್ದ ಲಾಡ್ಜ್‌, ಸಂಬಂಧಿಕರ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಆಟೊದಲ್ಲಿ ಬರಲು ದುಪ್ಪಟ್ಟು ಹಣ ವ್ಯಯಿಸಬೇಕಾಯಿತು.

ಆಟೊ ರಿಕ್ಷಾಗಳು ಸಂಚರಿಸಿದರೂ ಸಂಖ್ಯೆ ಮಾತ್ರ ಬಹಳ ಕಡಿಮೆ ಇತ್ತು. ಚಿತ್ರಮಂದಿರದಲ್ಲಿ ಪ್ರದರ್ಶನ ಅಬಾಧಿತವಾಗಿತ್ತು. ಪೆಟ್ರೋಲ್‌ ಬಂಕ್, ಹೋಟೆಲ್‌ಗಳು ವಹಿವಾಟು ನಡೆಸಿದವು. ವಾಣಿಜ್ಯ ಚಟುವಟಿಕೆಯ ಕೇಂದ್ರವಾದ ಕೊಪ್ಪಿಕರ್ ರಸ್ತೆ, ಸ್ಟೇಷನ್ ರಸ್ತೆ, ದುರ್ಗದ ಬೈಲ್, ಲಕ್ಷ್ಮಿ ಮಾಲ್ ರಸ್ತೆಗಳಲ್ಲಿ ಅರ್ಧದಷ್ಟು ಅಂಗಡಿಗಳು ತೆರೆದಿದ್ದವು. ಆದರೆ, ಸಾರಿಗೆ ವ್ಯವಸ್ಥೆಯೇ ಬಂದ್ ಆಗಿದ್ದರಿಂದ ಯಾವುದೇ ರಸ್ತೆಯಲ್ಲಿ ಜನ ದಟ್ಟಣೆಯೇ ಇರಲಿಲ್ಲ. ಈ ರಸ್ತೆಗಳು ಬಿಕೋ ಎತ್ತುತ್ತಿದ್ದವು, ಬಾಗಿಲು ತೆರೆದ ಅಂಗಡಿಗಳಲ್ಲಿ ಗಿರಾಕಿಗಳಿರಲಿಲ್ಲ. ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದರೂ ಗ್ರಾಹಕರು ಸಂಖ್ಯೆ ಕಡಿಮೆ ಇತ್ತು. ಚಿತ್ರಮಂದಿರಗಳ ಎದುರು ಎಂದಿನ ಜನಜಂಗುಳಿ ಇರಲಿಲ್ಲ.

ಬಿಎಸ್‌ಎನ್‌ಎಲ್‌ ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಎದುರು ಸಿಐಟಿಯು, ಜೆಸಿಟಿಯು, ಐಎಐಟಿಯುಸಿ, ಟಿಯುಸಿಸಿ, ಬಿಎಸ್‌ಎನ್‌ಎಲ್‌ ನೌಕರರ ಸಂಘ, ಎಪಿಎಂಸಿ ಹಮಾಲರ ಸಂಘ, ಅಂಚೆ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಬಿಸಿಯೂಟ ನೌಕರರ ಸಂಘ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜಮಾಯಿಸಿದರು. ಅಲ್ಲಿಂದ ಚನ್ನಮ್ಮ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ ಕಾರ್ಮಿಕ ಸಂಹಿತೆ ತರಲು ಯತ್ನಿಸುವ ಮೂಲಕ ದುಡಿಯುವ ವರ್ಗವನ್ನು ಮೋದಿ ಸರ್ಕಾರ ದಮನ ಮಾಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT