ಶನಿವಾರ, ಜೂಲೈ 4, 2020
26 °C
ರಾತ್ರಿ ವೇಳೆ ಕೀಟನಾಶಕ ಸಿಂಪಡಿಸಿದರೆ ಮಾತ್ರ ಮಿಡತೆ ನಾಶ

ಮಿಡತೆ ನಿಗ್ರಹಕ್ಕೆ ಆಧುನಿಕ ಯುದ್ಧ ತಂತ್ರ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾರಾಷ್ಟ್ರದ ಅಮರಾವತಿ, ಭಂಡಾರಾದತ್ತ ಬಂದಿರುವ ಮಿಡತೆಗಳ ಸಮೂಹ ಒಂದು ವೇಳೆ ರಾಜ್ಯಕ್ಕೂ ಬಂದರೆ ಆಧುನಿಕ ಯುದ್ಧ ತಂತ್ರ ಅಂದರೆ ರಾತ್ರಿ ವೇಳೆ ಕೀಟನಾಶಕ ಸಿಂಪಡಿಸುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ.


ಡಾ.ಎ.ಆರ್.ವಿ.ಕುಮಾರ್‌

ಮರುಭೂಮಿ ಪ್ರದೇಶಗಳಲ್ಲಿ ವೃದ್ಧಿಗೊಳ್ಳುವ ಮಿಡತೆ ಇದಾಗಿದ್ದು, ಕಳೆದ ವರ್ಷ ರಾಜಸ್ಥಾನದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಮಿಡತೆಗಳ ಸಂತಾನ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಆಹಾರ ಅರಸಿ ವಲಸೆ ಹೊರಟಿರುವ ‌ಈ ಮಿಡತೆಗಳು ಮೂರು ವರ್ಷ ಸಂಚಾರದಲ್ಲಿದ್ದು, ಬಳಿಕ ಮತ್ತೆ ಮರುಭೂಮಿಗೇ ಹೋಗುತ್ತವೆ. ವಲಸೆ ದಾರಿಯಲ್ಲಿ ಅವುಗಳ ಪ್ರಮಾಣ ಕ್ಷೀಣಿಸಿದರೆ ತಮ್ಮ ಊರು ಸೇರದೆಯೂ ಇರಬಹುದು ಎನ್ನುತ್ತಾರೆ ಕೀಟ ತಜ್ಞರು.

‘ಕ್ಲೊರೊಪೈರಿಪಾಸ್ ಮತ್ತು ಲಾಮ್ಡಾಸಹಲೋಥ್ರಿನ್‌ ಕೀಟನಾಶಕಗಳು ಈ ಮಿಡತೆ ಸಂಹಾರಕ್ಕೆ ಪರಿಣಾಮಕಾರಿ. ಈ ಕೀಟನಾಶಕಗಳಿಂದ ಇತರ ಜೀವಿಗಳಿಗೆ ಅಂತಹ ಅಪಾಯ ಇಲ್ಲ ಎಂಬುದು ಗೊತ್ತಾಗಿದೆ. ರಾತ್ರಿ ಹೊತ್ತು ಮರಗಳ ಮೇಲೆ ಇವುಗಳನ್ನು ಸಿಂಪಡಿಸಿದರೆ ಮಿಡತೆಗಳು ಅಲ್ಲೇ ಸಾಯುತ್ತವೆ. ಮಹಾರಾಷ್ಟ್ರದಲ್ಲಿ ಇದು ಸಾಬೀತಾಗಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಎ.ಆರ್.ವಿ.ಕುಮಾರ್‌ ಹೇಳಿದರು.

ವಿಶ್ರಾಂತಿ ಸಮಯದಲ್ಲೇ ಪ್ರಹಾರ: ಹಗಲು ಹೊತ್ತಲ್ಲಿ ಅದರಲ್ಲೂ ಮುಖ್ಯವಾಗಿ ಸಂಜೆ 4ರಿಂದ 7 ಗಂಟೆಯ ಅವಧಿಯಲ್ಲಿ ಮಿಡತೆಗಳು ಹೊಲ, ಗದ್ದೆಗಳಿಗೆ ದಾಳಿ ಮಾಡಿ ಹಸಿರು ಎಲೆ ತಿನ್ನುತ್ತವೆ. 7ರ ಬಳಿಕ ಮರಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತವೆ. ಅವುಗಳನ್ನು ಕೊಲ್ಲಬೇಕಿದ್ದರೆ ರಾತ್ರಿಯೇ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಡ್ರೋನ್‌, ಟ್ರಾಕ್ಟರ್‌ನಲ್ಲಿ ಅಳವಡಿಸಲಾದ ಜೆಟ್‌ ಸ್ಟ್ರೇಯರ್‌ಗಳ ಮೂಲಕ ಮರಗಳ ಮೇಲೆ ಕೀಟನಾಶಕ ಸಿಂಪ‍ಡಿಸಬೇಕಾಗುತ್ತದೆ.

‘ಆರಂಭದಲ್ಲಿ 10 ಕಿ.ಮೀ. ಉದ್ದ, 2 ಕಿ.ಮೀ. ಅಗಲವಾಗಿ ಮಿಡತೆಗಳ ವಲಸೆ ಇತ್ತು. ಇದೀಗ ಅವುಗಳ ಸಂಖ್ಯೆ ಕ್ಷೀಣಿಸಿದೆ. ಹವಾಮಾನ ವೈಪರೀತ್ಯದಿಂದ ದಕ್ಷಿಣದತ್ತ ಗಾಳಿ ಬೀಸಿದರೆ ಅವುಗಳು ರಾಜ್ಯಕ್ಕೂ ಬರಲಾರವು ಎಂದು ಹೇಳಲಾಗದು. ಆದರೆ ಸದ್ಯ ಅಂತಹ ಸಾಧ್ಯತೆ ಕಡಿಮೆ ಇದೆ. ಪ್ರತಿಯೊಂದು ರಾಜ್ಯವೂ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಮಿಡತೆಗಳ ಸಂತಾನವನ್ನು ಬೇಗ ನಾಶಪಡಿಸುವುದು ಸಾಧ್ಯವಿದೆ’ ಎಂದು ಕುಮಾರ್ ವಿವರಿಸಿದರು.

ರಾಜಸ್ಥಾನದ ಮರುಭೂಮಿಯ ಮಿಡತೆಗಳು 1812, 1923 ಮತ್ತು 1997ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿದ್ದವು. ಮಿಡತೆಗಳು ಲಕ್ಷಾಂತರ ವರ್ಷಗಳಿಂದಲೂ ಮರುಭೂಮಿ ಪ್ರದೇಶಗಳಲ್ಲಿವೆ. ಉತ್ತಮ ಮಳೆ ಬಿದ್ದು ಅವುಗಳ ಸಂತಾನ ಜಾಸ್ತಿಯಾದಾಗ ಆಹಾರ ಅರಸಿ ವಲಸೆ ಹೊರಡುತ್ತವೆ ಎನ್ನುತ್ತಾರೆ ಅವರು.

ಭಾರತ–ಪಾಕಿಸ್ತಾನ ಬಿಕ್ಕಟ್ಟಿನ ಫಲ

‘ಮಿಡತೆಗಳ ಹಾವಳಿ ನಿಯಂತ್ರಣಕ್ಕಾಗಿ ರಾಜಸ್ಥಾನದ ಜೋಧಪುರ ಮತ್ತು ಪಾಕಿಸ್ತಾನದ ಕರಾಚಿಗಳಲ್ಲಿ ಸಮನ್ವಯ ಕೇಂದ್ರಗಳಿವೆ. ಮಿಡತೆಗಳ ಸಂತಾನ ಹೆಚ್ಚಾದಾಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕೆಲಸ ನಡೆಯುತ್ತದೆ. ಆದರೆ ಈ ಬಾರಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ನೆಲೆಸಿರುವುದರಿಂದ ಮಿಡತೆ ಸಮನ್ವಯ ಸಮರ್ಪಕವಾಗಿ ಆಗಲಿಲ್ಲ. ವೃದ್ಧಿಸಿದ ಮಿಡತೆಗಳ ಸಂಹಾರ ಸಾಧ್ಯವಾಗಲಿಲ್ಲ. ಇವುಗಳು ಇದೀಗ ಎರಡೂ ದೇಶಗಳತ್ತ ವಲಸೆ ಹೋಗಿ ಬೆಳೆ ನಾಶ ಮಾಡತೊಡಗಿವೆ’ ಎನ್ನುತ್ತಾರೆ ಡಾ.ಎ.ಆರ್‌.ವಿ.ಕುಮಾರ್

ಗಾಳಿಯೇ ನಿರ್ಣಾಯಕ

ಕೇವಲ ಎರಡು ಗ್ರಾಂ ತೂಕದ ಮಿಡತೆಗಳು ಗಾಳಿಯ ವಿರುದ್ಧ ಸಂಚರಿಸುವ ತಾಕತ್ತು ಪಡೆದಿಲ್ಲ. ಗಾಳಿ ಬೀಸಿದತ್ತ ಚಲಿಸುವ ಸ್ವಭಾವ ಇವುಗಳದ್ದು. ಮುಂಗಾರು ಮಳೆಯ ಆರಂಭದಲ್ಲಿ ಇವುಗಳು ದಕ್ಷಿಣ ಭಾರತದತ್ತ ವಲಸೆ ಬರಲು ಹೊರಟಿವೆ. ಇದೀಗ ನೈರುತ್ಯ ಮುಂಗಾರು ಮಾರುತಗಳು ಈಶಾನ್ಯ ದಿಕ್ಕಿನತ್ತ ಬೀಸುವ ಸಮಯವಾಗಿದ್ದು, ಕರ್ನಾಟಕದ ಮಟ್ಟಿಗೆ ಪ್ರಕೃತಿಯೇ ಮಿಡತೆಗಳಿಗೆ ತಡೆಗೋಡೆಯಾಗುವ ಆಶಾಭಾವನೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು