ಮಂಗನ ಕಾಯಿಲೆ: ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಆತಂಕದಿಂದ ಗುಳೆ ಹೊರಟ ಕುಟುಂಬ

7
ಜೀಪ್‌ ಇದ್ದರೂ ಕಾಯಂ ಚಾಲಕ ಇಲ್ಲ–ಮೆಡಿಕಲ್‌ ಆಫೀಸರ್‌ ಹುದ್ದೆಯೂ ಖಾಲಿ; ಆರೋಗ್ಯ ಇಲಾಖೆ ನಿರ್ಲಕ್ಷ್ಯ

ಮಂಗನ ಕಾಯಿಲೆ: ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಆತಂಕದಿಂದ ಗುಳೆ ಹೊರಟ ಕುಟುಂಬ

Published:
Updated:

ಸಾಗರ: ‘ಮಂಗನ ಕಾಯಿಲೆ ಕ್ಷೇತ್ರ ಕಚೇರಿ ಇದ್ದೂ ಇಲ್ಲದಂತಾಗಿದೆ’ ಈ ಮಾತನ್ನು ಹೇಳಿದ್ದು ಸ್ವತಃ ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರಕಾಶ್ ಭೋಸ್ಲೆ.

ಕಾಯಿಲೆ ನಿಯಂತ್ರಣ ಕುರಿತು ಶನಿವಾರ ಕರೆದಿದ್ದ ತಾಲ್ಲೂಕು ಪಂಚಾಯಿತಿಯ ವಿಶೇಷ ಸಭೆಯಲ್ಲಿ ಅವರು, ಸಿಬ್ಬಂದಿ ಕೊರತೆಯಿಂದ ನರಳುತ್ತಿರುವ ಇಲ್ಲಿನ ಮಂಗನ ಕಾಯಿಲೆ ಕ್ಷೇತ್ರ ಕಚೇರಿ ಕುರಿತ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಆಡಳಿತ ವೈದ್ಯಾಧಿಕಾರಿಗಳ ಈ ಮಾತಿನ ಜಾಡು ಹಿಡಿದು ನಗರದ ಗಾಂಧಿನಗರ ಬಡಾವಣೆಯಲ್ಲಿರುವ ಮಂಗನ ಕಾಯಿಲೆ ಕ್ಷೇತ್ರ ಕಚೇರಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಭೂತ ಬಂಗಲೆಯೊಂದನ್ನು ಹೊಕ್ಕಿದ ಅನುಭವವಾಯಿತು.

ಕಾಯಿಲೆ ಕುರಿತು ಕ್ಷೇತ್ರ ಕಾರ್ಯ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಹೆಸರಿಗೊಂದು ಕಚೇರಿ ಇಲ್ಲಿದೆ. ಶಿವಮೊಗ್ಗ, ಚಿಕ್ಕಮಗಳೂರು  ಜಿಲ್ಲೆಗಳಲ್ಲಿ ಕಾಯಿಲೆಗೆ ಸಂಬಂಧಿಸಿ ನಿಗಾ ವಹಿಸಬೇಕಾದ ಈ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಯೇ ಇಲ್ಲ.

ಈ ಕಚೇರಿಯ ಚುಕ್ಕಾಣಿ ಹಿಡಿಯಬೇಕಾದ ಮೆಡಿಕಲ್ ಆಫೀಸರ್ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ರಾಜು ಹಿಂದೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅದಕ್ಕೂ ಮುನ್ನ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆಗಾಗಿ ಅವರು ರಜೆಯಲ್ಲಿದ್ದರು.

ಈಗ ಕಚೇರಿಯ ಮೆಡಿಕಲ್ ಆಫೀಸರ್ ಹುದ್ದೆಯನ್ನು ನಿರ್ವಹಿಸುತ್ತಿರುವವರು ತೀರ್ಥಹಳ್ಳಿ ತಾಲ್ಲೂಕಿನ ವೈದ್ಯಾಧಿಕಾರಿಯಾಗಿರುವ ಡಾ. ಕಿರಣ್. ಆ ತಾಲ್ಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುತ್ತಲೇ ಇಲ್ಲಿನ ಕಚೇರಿಯನ್ನು ನೋಡಿಕೊಳ್ಳಬೇಕಾದ ಹೆಚ್ಚುವರಿ ಜವಾಬ್ದಾರಿ ಅವರದು.

ಹಾಲಿ ಕಚೇರಿಯಲ್ಲಿ ಒಬ್ಬರು ಗುಮಾಸ್ತ ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿ ಹೊರತುಪಡಿಸಿದರೆ ಬೇರೆ ಯಾರೂ ಇಲ್ಲ. ಕಚೇರಿ ಬಳಕೆಗಾಗಿ ಒಂದು ಜೀಪ್ ಇದ್ದರೂ ಕಾಯಂ ಚಾಲಕರಿಲ್ಲ. ಕಾಯಿಲೆ ಹಾವಳಿ ಹೆಚ್ಚಾದ ನಂತರ ಬೇರೆ ಇಲಾಖೆಯಿಂದ ವಾಹನಕ್ಕೆ ಚಾಲಕರೊಬ್ಬರನ್ನು ಎರವಲು ಪಡೆಯಲಾಗಿದೆ.

ಏಳು ಸಿಬ್ಬಂದಿ ಇರಬೇಕಾದ ಕಚೇರಿಯಲ್ಲಿ ಇರುವುದು ಇಬ್ಬರು ಮಾತ್ರ. ಕಾಯಿಲೆ ಬಾಧಿತ ಪ್ರದೇಶಕ್ಕೆ ತೆರಳಿ ರೋಗ ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಈ ಕಚೇರಿಯ ಕೆಲಸ. ಸಿಬ್ಬಂದಿ ಕೊರತೆಯಿಂದ ಈ ವರ್ಷ ಈ ಕೆಲಸ ನಡೆದಿಲ್ಲ.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋಟಗಳಿಗೆ ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕೆ ವಿಷವುಣಿಸಿ ಮಂಗಗಳನ್ನು ಕೊಲ್ಲುವ ಪ್ರವೃತ್ತಿ ಅಲ್ಲಲ್ಲಿ ಕಾಣುತ್ತಿದೆ. ಮಂಗ ಸತ್ತ್ತತಾಗ ಅರಣ್ಯ ಇಲಾಖೆ ಅನುಮತಿ ಪಡೆದು ಪಶು ವೈದ್ಯಕೀಯ ಇಲಾಖೆ ಮೂಲಕ ತಪಾಸಣೆ ನಡೆಸಬೇಕಾದದ್ದು ಈ ಕಚೇರಿಯ ಜವಾಬ್ದಾರಿಯಾಗಿದೆ.

ಸತ್ತ ಮಂಗಗಳಿಂದ ರೋಗ ಹರಡಬಹುದೇ ಎಂದು ಪ್ರಯೋಗಾಲಯದಿಂದ ವರದಿ ಪಡೆದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದು ಈ ಕಚೇರಿಯ ಕರ್ತವ್ಯ. ಇರುವ ಇಬ್ಬರು ಸಿಬ್ಬಂದಿ ಇಷ್ಟೆಲ್ಲ ಕೆಲಸ ಮಾಡುವುದು ಅಸಾಧ್ಯ ಎಂಬುದು ಎದ್ದು ಕಾಣುತ್ತಿದೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದೇ ಕಾಯಿಲೆ ಉಲ್ಬಣಗೊಳ್ಳಲು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಭಾನುವಾರ ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ‘ಸಿಬ್ಬಂದಿ ಕೊರತೆ ನೀಗಿಸುತ್ತೇವೆ’ ಎಂದು ಭರವಸೆ ನೀಡಿದರು.

ಆತಂಕದಿಂದ ಗುಳೆ ಹೊರಟ ಕುಟುಂಬ

ಕಾರ್ಗಲ್‌: ಮಂಗನಕಾಯಿಲೆಗೆ ಹೆದರಿ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡವಳ್ಳಿ ಮಜಿರೆಯಲ್ಲಿ ವಾಸವಿದ್ದ ಬಾಲಚಂದ್ರ ಅವರ ಕುಟುಂಬ ಶಿರಸಿಯ ನೆಂಟರ ಮನೆಗೆ ಗುಳೆ ಹೊರಟಿದ್ದು, ಶರಾವತಿ ಅಭಯಾರಣ್ಯ ನಿವಾಸಿಗಳು ಅಭದ್ರತೆಯ ಕರಿನೆರಳಿನಲ್ಲಿ ಬದುಕುತ್ತಿದ್ದಾರೆ.

ಸೂತಕದ ಛಾಯೆ: ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಅರಲಗೋಡು ಗ್ರಾಮ ಪಂಚಾಯಿತಿಯಲ್ಲಿ ಮಾರಕ ಮಂಗನ ಕಾಯಿಲೆಗೆ 15 ದಿನಗಳಲ್ಲಿ 6 ಜೀವಗಳು ಬಲಿಯಾಗಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ವಿದ್ಯಾರ್ಥಿನಿ ಶ್ವೇತಾ ಜೈನ್ ಸಾವಿಗೆ ಇಡೀ ಗ್ರಾಮ ದುಃಖತಪ್ತವಾಗಿತ್ತು. ಸಾಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಶ್ವೇತಾ  ಕ್ರಿಸ್‌ಮಸ್ ಹಬ್ಬ ಮತ್ತು ವರ್ಷಾಂತ್ಯದ ರಜೆ ದೊರೆತ ಕಾರಣ 2 ದಿನಗಳ ಮಟ್ಟಿಗೆ ಹುಟ್ಟೂರು ಅರಲಗೋಡು ವಾಟೇಮಕ್ಕಿಗೆ ಬಂದಿದ್ದಳು.


ಶ್ವೇತಾ ಜೈನ್

ತಂದೆ ತಾಯಂದಿರಿಗೆ ಸಹಾಯ ಮಾಡುವ ಉದ್ದೇಶದಿಂದ ತೋಟದಲ್ಲಿ ಬಿದ್ದ ಅಡಿಕೆ ಸಂಗ್ರಹಿಸುವ ಕೆಲಸದಲ್ಲಿ ಜೊತೆಗೂಡಿದ್ದಳು. ಧುತ್ತೆಂದು ಬಂದೆರಗಿದ್ದು ಶಂಕಿತ ಮಂಗನ ಕಾಯಿಲೆಯ ಜ್ವರ.

ಸಾಗರ ಉಪವಿಭಾಗೀಯ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು. ಶನಿವಾರ ಮಧ್ಯಾಹ್ನ ‘ಶ್ವೇತಾ ಇನ್ನಿಲ್ಲ’ ಎಂಬ ಸುದ್ದಿ ಕೇಳಿ ಜನರು ಬೆಚ್ಚಿಬಿದ್ದಿದ್ದರು.

ಜ್ವರದಲ್ಲೇ ಮಗಳ ಶವಕ್ಕೆ ಕೊಳ್ಳಿ ಇಟ್ಟ ತಂದೆ

ಶ್ವೇತಾಳ ಮೃತ ದೇಹವನ್ನು ಸ್ವಂತ ಊರಾದ ವಾಟೇಮಕ್ಕಿಗೆ ತಂದಾಗ, ತಂದೆ ದೇವರಾಜ್ ಜೈನ್ ಕೂಡ ಶಂಕಿತ ಮಂಗನ ಕಾಯಿಲೆ ಜ್ವರದಿಂದ ಬಳಲಿ ಬೆಂಡಾಗಿದ್ದರು. ಮಗಳ ಮೃತದೇಹವನ್ನು ಕೊನೆಯ ಬಾರಿಗೆ ನೋಡಲು ಕುರ್ಚಿಯ ಮೇಲೆ ಕೂರಿಸಿ ಗ್ರಾಮಸ್ಥರು ಹೊತ್ತು ತಂದಾಗ ಕಣ್ತೆರೆದು ನೋಡಲೂ ಸಾಧ್ಯವಾಗದಂತೆ ಜ್ವರ ಅವರನ್ನು ಕಾಡುತ್ತಿತ್ತು.

ಮಗಳ ನಿಸ್ತೇಜ ದೇಹಕ್ಕೆ ಕೊಳ್ಳಿಯಿಟ್ಟ ತಂದೆ ದೇವರಾಜ್ ಮರುಕ್ಷಣ ಹಾಗೆಯೇ ಆಂಬುಲೆನ್ಸ್‌ನಲ್ಲಿ ಮಣಿಪಾಲ ಆಸ್ಪತ್ರೆಗೆ ಹೊರಡಬೇಕಾಗಿ ಬಂದ ಸನ್ನಿವೇಶ ಅಂತ್ಯಕ್ರಿಯೆಗೆ ಬಂದಿದ್ದ ಜನರನ್ನು ಕಣ್ಣೀರ ಕಡಲಿನಲ್ಲಿ ತೇಲಿಸಿತ್ತು.

**

ಮಂಗನ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.
–ಶಿವಾನಂದ್ ಎಸ್. ಪಾಟೀಲ್, ಆರೋಗ್ಯ ಸಚಿವ

**

ಮಂಗನ ಕಾಯಿಲೆ ಕ್ಷೇತ್ರ ಕಚೇರಿಯ ಸಿಬ್ಬಂದಿ ವಿಷಯದಲ್ಲಿ ಮೊದಲೇ ಎಚ್ಚರ ವಹಿಸಬೇಕಿತ್ತು. ಈಗಲಾದರೂ ಆಗಿರುವ ತಪ್ಪನ್ನು ಸರಿಪಡಿಸಬೇಕು.

–ಮ.ಸ. ನಂಜುಂಡಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ, ಆರೋಗ್ಯ ಇಲಾಖೆ ನೌಕರರ ಸಂಘ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !