ಸೋಮವಾರ, ಸೆಪ್ಟೆಂಬರ್ 16, 2019
21 °C

ಮಂಗನ ಕಾಯಿಲೆ: ಮತ್ತೊಂದು ಬಲಿ

Published:
Updated:

ಕಾರ್ಗಲ್: ಇಲ್ಲಿಗೆ ಸಮೀಪದ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ವ್ಯಕ್ತಿಯೊಬ್ಬರು ಬುಧವಾರ ಮೃತಪಟ್ಟಿದ್ದಾರೆ.

ನಂದೋಡಿ ಮಜಿರೆ ನಿವಾಸಿ ಕೆರಿಯಪ್ಪ (50) ಮೃತಪಟ್ಟವರು. ಜ್ವರ ಪೀಡಿತರಾಗಿ ಅರಲಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮತದಾನದ ದಿವಸ ಮತ ಹಾಕಿ ನಂತರ ಆಸ್ಪತ್ರೆಗೆ ಬಂದಾಗ ರಕ್ತ ಪರೀಕ್ಷಾ ವರದಿಯಲ್ಲಿ ಮಂಗನ ಕಾಯಿಲೆ ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗುವಂತೆ ಆರೋಗ್ಯ ಕಾರ್ಯಕರ್ತೆಯರು ಸಲಹೆ ನೀಡಿದ್ದರು.

ಮಣಿಪಾಲಕ್ಕೆ ಹೋಗಲು ಕೆರಿಯಪ್ಪ ನಿರಾಕರಿಸಿದಾಗ ಗ್ರಾಮಸ್ಥರು ಒತ್ತಾಯಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದರೊಂದಿಗೆ ಅರಲಗೋಡು ಮತ್ತು ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿದೆ.

Post Comments (+)