ಸೋಮವಾರ, ನವೆಂಬರ್ 18, 2019
26 °C
ಪಕ್ಷದ ಚಟುವಟಿಕೆಗಳಿಂದ ಜಿ.ಟಿ.ದೇವೇಗೌಡ ದೂರ

ಮೈಸೂರು ಉಪಚುನಾವಣೆ ಸನಿಹದಲ್ಲೇ ಒಡಕು: ಜೆಡಿಎಸ್‌ ಬಿಕ್ಕಟ್ಟು ತಾರಕಕ್ಕೆ

Published:
Updated:
Prajavani

ಮೈಸೂರು: ಸಾಕಷ್ಟು ಪ್ರಾಬಲ್ಯ ಹೊಂದಿರುವ ಮೈಸೂರು ಜಿಲ್ಲೆಯಲ್ಲಿಯೇ ಜೆಡಿಎಸ್‌ ಬಿಕ್ಕಟ್ಟು ತಾರಕಕ್ಕೇರಿದ್ದು, ಉಪಚುನಾವಣೆಯ ಸನಿಹದಲ್ಲಿ ಪ್ರಮುಖ ನಾಯಕರಲ್ಲಿ ಒಡಕು ಉಂಟಾಗಿದೆ.

ಜಿಲ್ಲೆಯಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರನ್ನು ಮುಂಚೂಣಿ ನಾಯಕರನ್ನಾಗಿ ಬೆಳೆಸುತ್ತಿರುವುದು ಹಿರಿಯ ನಾಯಕ ಜಿ.ಟಿ.ದೇವೇಗೌಡ, ಪ್ರೊ.ಕೆ.ಎಸ್‌.ರಂಗಪ್ಪ ಸೇರಿದಂತೆ ಪಕ್ಷದ ಕೆಲ ಮುಖಂಡರಿಗೆ ಇರಿಸುಮುರಿಸು ಉಂಟು ಮಾಡಿದೆ. ಹೀಗಾಗಿ ಅವರು ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ.

ಶನಿವಾರ ಮೈಸೂರಿನಲ್ಲಿ ನಡೆದ ಚಿಂತನ–ಮಂಥನ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರೂ ಜಿ.ಟಿ.ದೇವೇಗೌಡರು ಅತ್ತ ಸುಳಿಯಲಿಲ್ಲ. ಬದಲಾಗಿ ಬಿಜೆಪಿ ಜೊತೆಗಿನ ಅವರ ಒಡನಾಟ ದಿನೇದಿನೇ ಹೆಚ್ಚುತ್ತಿದೆ.

‘ನಾನು ಚುರುಕಾಗಿದ್ದರೆ ಸಾ.ರಾ.ಮಹೇಶ್‌ ಅವರನ್ನು ಈ ಭಾಗದಲ್ಲಿ ನಾಯಕರನ್ನಾಗಿ ಬೆಳೆಸಲು ಸಾಧ್ಯವಿಲ್ಲವೆಂದು ಕುಮಾರಸ್ವಾಮಿ ನನ್ನನ್ನು ದೂರವಿಡುತ್ತಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ ನನ್ನ ಭಾವಚಿತ್ರವನ್ನೂ ಹಾಕಿಲ್ಲ’ ಎಂದು ಜಿ.ಟಿ.ದೇವೇಗೌಡ ‘ಪ್ರಜಾವಾಣಿ’ ಜೊತೆ ಅಸಮಾಧಾನ ತೋಡಿಕೊಂಡರು.

ಎಚ್‌.ವಿಶ್ವನಾಥ್‌ ಅನರ್ಹಗೊಂಡಿರುವುದರಿಂದ ನಡೆಯುತ್ತಿರುವ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ತಟಸ್ಥವಾಗಿರಲು ಅವರು ನಿರ್ಧರಿಸಿದ್ದಾರೆ. ಅಲ್ಲದೇ, ಪುತ್ರ ಜಿ.ಡಿ.ಹರೀಶ್‌ ಗೌಡ ಅವರನ್ನೂ ಕಣಕ್ಕಿಳಿಸದಿರಲು ತೀರ್ಮಾನಿಸಿದ್ದಾರೆ.

ಈ ಕ್ಷೇತ್ರಲ್ಲಿ ಜೆಡಿಎಸ್‌ ಸೋಲುತ್ತದೆ ಎಂದು ಅವರು ಹೇಳಿರುವುದು ಹಾಗೂ ಬಿಜೆಪಿ ನಾಯಕರೊಂದಿಗೆ ಓಡಾಡುತ್ತಿರುವುದು ಕುಮಾರಸ್ವಾಮಿ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ, ಈ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವುದಾಗಿ ಘೋಷಿಸಿದ್ದಾರೆ. ಆದರೆ, ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಅವರನ್ನು ಕಾಡುತ್ತಿದೆ.

‘2018ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ನನ್ನ ಪುತ್ರನಿಗೆ ಟಿಕೆಟ್‌ ತಪ್ಪಿಸುವ ಉದ್ದೇಶದಿಂದ ಸಾ.ರಾ.ಮಹೇಶ್‌ ಏನೆಲ್ಲಾ ತಂತ್ರ ರೂಪಿಸಿದ್ದರು ಎಂಬುದನ್ನು ನಾನು ಮರೆತಿಲ್ಲ. ಆರಂಭದಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು ಹರಿಬಿಟ್ಟರು. ಬಳಿಕ ವಿಶ್ವನಾಥ್ ಅವರನ್ನು ಕಣಕ್ಕಿಳಿಸಿದರು’ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಬಿಜೆಪಿಯಿಂದ ಆಹ್ವಾನ: ಪಕ್ಷ ತೊರೆದು ಬಂದರೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ದೇವೇಗೌಡರಿಗೆ ಬಿಜೆಪಿ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದೆ ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲುವು ಕಷ್ಟವಾಗಬಹುದೆಂಬ ಕಾರಣಕ್ಕೆ ಸಮಯ ಕೋರಿದ್ದಾರೆ ಎನ್ನಲಾಗಿದೆ. ವಿಶ್ವನಾಥ್‌ ಕಣಕ್ಕಿಳಿಯಲು ಸಾಧ್ಯವಾಗದಿದ್ದರೆ ಹರೀಶ್‌ ಗೌಡಗೆ ಟಿಕೆಟ್‌ ನೀಡಲು ಬಿಜೆಪಿ ಪ್ರಯತ್ನಿಸುತ್ತಿದೆ. 

ಒಕ್ಕಲಿಗ ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಜೆಡಿಎಸ್‌ ಗೆಲುವು ಸಾಧಿಸಿತ್ತು.

ಪ್ರತಿಕ್ರಿಯಿಸಿ (+)