ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಯಲ್ಲಿ ₹175 ಕೋಟಿ ಅಕ್ರಮ: ಆರೋಪ

ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್‌ಗೆ ದೂರು: ಎನ್‌.ಆರ್.ರಮೇಶ್‌
Last Updated 20 ಜೂನ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಬನ್ನೇರುಘಟ್ಟ ರಸ್ತೆಯ ಜೆ.ಡಿ.ಮರ ಜಂಕ್ಷನ್‌ನಿಂದ ಕೋಳಿ ಫಾರಂವರೆಗಿನ ರಸ್ತೆ (7.4 ಕಿ.ಮೀ) ಹಾಗೂ ಸರ್ಜಾಪುರ ರಸ್ತೆಯ ಇಬ್ಬಲೂರು ಜಂಕ್ಷನ್‌ನಿಂದ ಚಿಕ್ಕಕನ್ನಹಳ್ಳಿ ಆರ್‌ಒಬಿ ವರೆಗಿನ (4.7 ಕಿ.ಮೀ) ರಸ್ತೆ ವಿಸ್ತರಣೆಯಲ್ಲಿ ₹175 ಕೋಟಿ ಭ್ರಷ್ಟಾಚಾರ ನಡೆದಿದೆ’ ಎಂದು ಬಿಜೆಪಿ ನಗರ ಘಟಕದ ವಕ್ತಾರ ಎನ್‌.ಆರ್.ರಮೇಶ್‌ ಆರೋಪಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಸೇರಿದಂತೆ ಪಾಲಿಕೆಯ ಅಧಿಕಾರಿಗಳ ವಿರುದ್ಧ ಎಸಿಬಿ, ಬಿಎಂಟಿಎಫ್‌, ಲೋಕಾಯುಕ್ತ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಗುತ್ತಿಗೆ ವಹಿಸಿಕೊಂಡಿರುವ ಆರ್‌.ಕೆ.ಇನ್ಫ್ರಾ ಕಾರ್ಪ್‌ ಹಾಗೂ ಎನ್‌.ಎಸ್‌.ನಾಯಕ್‌ ಆ್ಯಂಡ್‌ ಸನ್ಸ್‌ ಸಂಸ್ಥೆಗಳ ವಿರುದ್ಧವೂ ದೂರು ನೀಡಲಾಗಿದೆ’ ಎಂದರು.

‘‌ಬನ್ನೇರುಘಟ್ಟ ರಸ್ತೆ ವಿಸ್ತರಣೆಯ ಗುತ್ತಿಗೆಯನ್ನು ಆರ್‌.ಕೆ.ಇನ್ಫ್ರಾ ಕಾರ್ಪ್‌ ಸಂಸ್ಥೆಗೆ (₹ 157.44 ಕೋಟಿ) ಹಾಗೂ ಸರ್ಜಾಪುರ ರಸ್ತೆಯ ಗುತ್ತಿಗೆಯನ್ನು ನಾಯಕ್‌ ಸಂಸ್ಥೆಗೆ (₹100 ಕೋಟಿ) ವಹಿಸಲಾಗಿದೆ. ಈ ವೇಳೆ ಪ್ರಹ್ಲಾದ್‌ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿದ್ದರು. ಈ ರಸ್ತೆಗಳನ್ನು 45 ಮೀಟರ್‌ಗಳಷ್ಟು (150 ಅಡಿಗಳು) ವಿಸ್ತರಣೆ ಮಾಡಬೇಕಿದೆ’ ಎಂದರು.

‘4 ಪಥಗಳ 25 ಮೀಟರ್‌ಗಳಷ್ಟು ಅಗಲದ ವಾಹನಗಳ ಸಂಚಾರ ರಸ್ತೆ, ರಸ್ತೆಯ ಎರಡೂ ಬದಿಗಳಲ್ಲಿ ತಲಾ 7.5 ಮೀಟರ್ ಅಗಲದ ಸರ್ವಿಸ್ ರಸ್ತೆ, ಎರಡೂ ಬದಿಗಳಲ್ಲಿ ತಲಾ 1.5 ಮೀಟರ್ ಅಗಲದ ಪಾದಚಾರಿ ಮಾರ್ಗ ಮತ್ತು 1 ಮೀಟರ್ ಅಗಲದ ಚರಂಡಿಗಳನ್ನು ನಿರ್ಮಿಸಬೇಕಿದೆ. ಆದರೆ, ಈ ಎರಡು ರಸ್ತೆಗಳಲ್ಲಿ ವಿಸ್ತರಣೆ ಮಾಡಿರುವುದು ಕೇವಲ 100 ಅಡಿಗಳಿಗಿಂತಲೂ ಕಡಿಮೆ. ಈ ಎರಡೂ ರಸ್ತೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ಯಾವ ಲಕ್ಷಣಗಳೂ ಇಲ್ಲ. ಹಳೆಯ ಚರಂಡಿ ದುರಸ್ತಿ ಮಾಡಿ, ಹೊಸದು ಎಂಬಂತೆ ಬಿಂಬಿಸಲಾಗುತ್ತಿದೆ. ಕಳಪೆ ಗುಣಮಟ್ಟದ ಕಾರ್ಯ ಮಾಡಲಾಗುತ್ತಿದೆ’ ಎಂದು ದೂರಿದರು.

‘ಅರ್ಹತೆಯೇ ಇಲ್ಲದ ಆಂಧ್ರದ ಆರ್‌.ಕೆ.ಇನ್ಫ್ರಾ ಸಂಸ್ಥೆಗೆ ಕಾನೂನುಬಾಹಿರವಾಗಿ ಗುತ್ತಿಗೆ ನೀಡಲಾಗಿದೆ. ರಸ್ತೆ ವಿಸ್ತರಣೆಗೆ ಟಿಡಿಆರ್/ಡಿಸಿಆರ್‌ ನೀಡುವ ವಿಚಾರದಲ್ಲೂ ಸಾಕಷ್ಟು ಅವ್ಯವಹಾರಗಳು ನಡೆದಿವೆ’ ಎಂದು ಆರೋಪಿಸಿದರು.

‘ರಸ್ತೆಯಲ್ಲಿ 253 ಖಾಸಗಿ ಆಸ್ತಿ ಹಾಗೂ ಸರ್ಜಾಪುರ ರಸ್ತೆಯಲ್ಲಿ 270 ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸ್ವಾಧೀನ ಸ್ವತ್ತುಗಳ ಪ್ರಮಾಣಕ್ಕೂ, ರಸ್ತೆಗಳ ವಿಸ್ತರಣೆಗೆ ಬಳಸಿಕೊಂಡಿರುವ ಸ್ವತ್ತುಗಳ ಪ್ರಮಾಣಕ್ಕೂ ಅಜಗಜಾಂತರ ಇದೆ’ ಎಂದರು.

‘2009-2011ರ ಅವಧಿಯಲ್ಲಿ ಯಲಹಂಕ ವಲಯದ 26 ರಸ್ತೆಗಳ ವಿಸ್ತರಣೆಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳು ನಡೆದಿತ್ತು. ಈ ಅವಧಿಯಲ್ಲಿ ಬಿ.ಎಸ್‌. ಪ್ರಹ್ಲಾದ್ ಯಲಹಂಕ ವಲಯ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದರು. 157 ಕಾಮಗಾರಿಗಳಲ್ಲಿ ₹314 ಕೋಟಿಗಳಷ್ಟು ಅವ್ಯವಹಾರ ನಡೆದಿದೆ ಎಂದು ಟಿವಿಸಿಸಿ ವರದಿ ನೀಡಿತ್ತು. ಪ್ರಹ್ಲಾದ್ ಅವರನ್ನು ಅಂದಿನ ಆಯುಕ್ತ ಸಿದ್ಧಯ್ಯ ಅಮಾನತು ಮಾಡಿ ಕಾರ್ಯನಿರ್ವಾಹಕ ಹುದ್ದೆಗೆ ನಿಯೋಜನೆ ಮಾಡುವಂತಿಲ್ಲ ಎಂದು ಆದೇಶಿಸಿದ್ದರು. ಆದರೂ, ರಾಜಕೀಯ ಪ್ರಭಾವ ಬಳಸಿ ಆಯಕಟ್ಟಿನ ಎರಡು ಹುದ್ದೆಗಳನ್ನು ಏಕಕಾಲಕ್ಕೆ ಹೊಂದಿದ್ದಾರೆ’ ಎಂದರು.

ಸಿಬಿಐಗೆ ಒಪ್ಪಿಸಲು ಆಗ್ರಹ
‘ಈ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕು. ಜತೆಗೆ ಎರಡು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಪ್ರಹ್ಲಾದ್ ಹಾಗೂ ಇತರ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಬೇಕು’ ಎಂದು ರಮೇಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT