ಶನಿವಾರ, ಆಗಸ್ಟ್ 8, 2020
24 °C
ಮನೆಯಲ್ಲಿಯೇ ಸರಳವಾಗಿ ಯೋಗ ದಿನಾಚರಣೆ

ಭಗವಂತನನ್ನು ಕಾಣುವ ಪದ್ಧತಿ ಯೋಗ: ನಳಿನ್ ಕುಮಾರ್ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಭಾನುವಾರ ಸರಳವಾಗಿ ಯೋಗ ದಿನ ಆಚರಿಸಲಾಯಿತು. ಕೊರೊನಾ‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲಿಯೇ ಯೋಗ ಮಾಡಿದರು. ಕೆಲವು ಸಂಘ- ಸಂಸ್ಥೆಗಳ ಸದಸ್ಯರು ನಿರ್ದಿಷ್ಟ ಅಂತರ ಕಾಯ್ದುಕೊಂಡು ಉದ್ಯಾನದಲ್ಲಿ ಯೋಗಾಸನ ಮಾಡಿದರು. 

ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆ 6ರಿಂದಲೇ ಸಾರ್ವಜನಿಕರು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗ ದಿನದ ಆಚರಣೆಗೆ ಚಾಲನೆ ನೀಡಲಾಯಿತು. 

ವಿಡಿಯೊದಲ್ಲೇ ಯೋಗ: ವಾಟ್ಸ್‌ಆ್ಯಪ್‌ ಗ್ರೂಪ್ ರಚನೆ ಮಾಡಿದ್ದ ಕೆಲವು ಶಾಲೆಗಳು, ಯೋಗಾಸನ ಮಾಡಿ ಅದನ್ನು ಚಿತ್ರೀಕರಿಸಿ ಗ್ರೂಪ್‌ನಲ್ಲಿ ಹಾಕುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದವು. ಅದರಂತೆ, ವಿದ್ಯಾರ್ಥಿಗಳು ಮತ್ತು ಪೋಷಕರು ವಿಡಿಯೊ ಮಾಡಿ ಗ್ರೂಪ್‌ನಲ್ಲಿ ಹಾಕುವುದು ಸಾಮಾನ್ಯವಾಗಿತ್ತು. 

ಬಿಜೆಪಿ‌ ಕಚೇರಿ: ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿಯೂ ಸರಳವಾಗಿ ಯೋಗ ದಿನ ಆಚರಿಸಲಾಯಿತು. ಸೂಕ್ತ ಅಂತರ ಕಾಯ್ದುಕೊಂಡು ಯೋಗಾಸನಗಳನ್ನು ಪ್ರದರ್ಶಿಸಲಾಯಿತು. 

‘ಯೋಗವು ಭಾರತೀಯ ಸಂಸ್ಕೃತಿಯಲ್ಲಿನ ಮಹತ್ವದ ಪದ್ಧತಿ. ವಿಜ್ಞಾನ, ಗಣಿತದಂತೆಯೇ ಜಗತ್ತಿಗೆ ಭಾರತದ ಪ್ರಮುಖ ಕೊಡುಗೆ ಯೋಗ. ಮನಸ್ಸು ಮತ್ತು ಬುದ್ಧಿಯ ಮೂಲಕ ಭಗವಂತನನ್ನು, ಮೋಕ್ಷವನ್ನು ಕಾಣುವ ಪದ್ಧತಿ ಇದು’ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. 

‘ಸಮಾಜದಲ್ಲಿ ಜನರ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗದ ಕೊಡುಗೆ ದೊಡ್ಡದು’ ಎಂದರು.‌

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತಿತರರು ಇದ್ದರು.‌

ಯೋಗ ದಿನಕ್ಕೂ ಮುನ್ನ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಲಾಯಿತು.


ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಪಟುಗಳು ಭಾನುವಾರ ವಿಧಾನಸೌಧದ ಮುಂಭಾಗ ವಿವಿಧ ಆಸನಗಳನ್ನು ಪ್ರದರ್ಶಿಸಿದರು. -ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು