ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪನ್ನದ ಖಾತರಿಗೆ ನ್ಯಾನೊ ತಂತ್ರಜ್ಞಾನ

Last Updated 19 ನವೆಂಬರ್ 2019, 2:24 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದಾದರೂ ನಿರ್ದಿಷ್ಟ ಉತ್ಪನ್ನವನ್ನು ಇಂತಹದೇ ಕಂಪನಿ ತಯಾರಿಸಿತ್ತು, ಅದನ್ನು ಯಾವ ಗ್ರಾಹಕನಿಗೆ ಮಾರಾಟ ಮಾಡಲಾಗಿತ್ತು ಎಂಬುದನ್ನು ಖಾತರಿಪಡಿಸಿಕೊಳ್ಳಲು ನ್ಯಾನೊ ತಂತ್ರಜ್ಞಾನ ನೆರವಿಗೆ ಬರಲಿದೆ.

ಪ್ರತಿಯೊಂದು ಉತ್ಪನ್ನಕ್ಕೂ ಪ್ರತ್ಯೇಕ ಸಂಕೇತಗಳನ್ನು ಜೋಡಿಸುವ ಮೂಲಕ ಅದರ ಬಗ್ಗೆ ಮತ್ತಷ್ಟು ಖಾತರಿಯನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ನವೋದ್ಯಮ ಗೆಲಿಲಿಯೊ ಇನೋವೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಜ್ಜೆ ಇಟ್ಟಿದೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ವಸ್ತುಪ್ರದರ್ಶನದಲ್ಲಿ ಈ ಸಂಸ್ಥೆ ತನ್ನ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದೆ.

‘ನೀವು ಯಾವುದಾದರೂ ಕಾರು ಖರೀದಿಸುತ್ತೀರಿ. ಆ ಕಾರು ಕಳವಾಗುತ್ತದೆ. ಕದ್ದವರು ಅದರ ಬಿಡಿಭಾಗಗಳನ್ನೆಲ್ಲ ಬಿಚ್ಚಿ ಇನ್ಯಾರಿಗೋ ಮಾರಾಟ ಮಾಡುತ್ತಾರೆ ಎಂದಿಟ್ಟುಕೊಳ್ಳಿ. ಆ ಬಿಡಿಭಾಗ ಸಿಕ್ಕರೆ ಅದು ನಿರ್ದಿಷ್ಟ ಕಾರಿನದ್ದೇ ಎಂಬುದನ್ನು ಸಾಬೀತುಪಡಿಸಲು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಆದರೆ, ನ್ಯಾನೊ ತಂತ್ರಜ್ಞಾನ ಬಳಸಿ ಅದನ್ನು ಖಾತರಿಪಡಿಸಬಹುದು‌’ ಎನ್ನುತ್ತಾರೆ ಸಂಸ್ಥೆಯ ವಿಶೇಷ ಯೋಜನೆ ವಿಭಾಗದ ಮುಖ್ಯಸ್ಥ ಬಿ.ಆರ್‌.ಬದ್ರಿನಾಥ್‌.

‘ಕಾರಿನ ಎಲ್ಲ ಭಾಗಗಳಿಗೆ ನ್ಯಾನೊ ಕಣಗಳನ್ನು ಸಿಂಪಡಿಸುತ್ತೇವೆ. ನಿರ್ದಿಷ್ಟ ಕಂಪನಿಯ ನಿರ್ದಿಷ್ಟ ಮಾದರಿಯ ನಿರ್ದಿಷ್ಟ ಕಾರನ್ನೂ ನ್ಯಾನೊ ಕಣಗಳ ನೆರವಿನಿಂದ ಪತ್ತೆ ಹಚ್ಚಬಹುದು. ಕದ್ದ ಕಾರಿನ ನಂಬರ್‌ ಪ್ಲೇಟ್‌ ಬದಲಾಯಿಸಿ ಮಾರಾಟ ಮಾಡಿದ್ದರೂ ತಪ್ಪಿತಸ್ಥರು ಸುಲಭದಲ್ಲಿ ಸಿಕ್ಕಿಬೀಳುತ್ತಾರೆ. ವಾಹನ ಆಕಸ್ಮಿಕವಾಗಿ ಸುಟ್ಟುಹೋದರೂ ಅದನ್ನು ಗುರುತಿಸಲು ಈ ತಂತ್ರಜ್ಞಾನ ನೆರವಾಗುತ್ತದೆ’ ಎಂದರು.

‘ಈ ನ್ಯಾನೊಕಣಗಳನ್ನು ನಾವು ಅಭಿವೃದ್ಧಿಪಡಿಸಿದ ಆ್ಯಪ್‌ ಮೂಲಕ ಸ್ಕ್ಯಾನ್‌ ಮಾಡಿದಾಗ ಅದರ ವಿವರ ಮೊಬೈಲ್‌ನಲ್ಲಿ ತೆರೆದುಕೊಳ್ಳಲಿದೆ. ಉತ್ಪನ್ನ ತಯಾರಿಸಿದ ಸಂಸ್ಥೆ ಹಾಗೂ ಗ್ರಾಹಕರ ನಡುವಿನ ನಂಟನ್ನು ಇನ್ನಷ್ಟು ಬಲಪಡಿಸುವಲ್ಲಿ ನಮ್ಮ ಉತ್ಪನ್ನಗಳು ನೆರವಾಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT