ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ನೆರೆ ಸಂತ್ರಸ್ತರಿಗೆ ಕೊನೆಗೂ ಸೂರು

2018ರಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪ: 463 ಮನೆಗಳ ಹಸ್ತಾಂತರ
Last Updated 5 ಜೂನ್ 2020, 1:51 IST
ಅಕ್ಷರ ಗಾತ್ರ

ಮಡಿಕೇರಿ: ಶಾಶ್ವತ ಸೂರಿನ ನಿರೀಕ್ಷೆಯಲ್ಲಿದ್ದ, ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಎರಡು ವರ್ಷಗಳ ಬಳಿಕ ಮನೆಗಳು ಲಭಿಸಿದವು. ಮನೆಗಾಗಿ ಚಾತಕ ಪಕ್ಷಿಯಂತೆ ಕಾದಿದ್ದ ಸಂತ್ರಸ್ತರ ಮೊಗದಲ್ಲಿ ಕೊನೆಗೂ ನಗು ಮೂಡಿತು.

ಪ್ರಕೃತಿ ವಿಕೋಪದ ನಂತರ ಮನೆ ಹಾಗೂ ಕೃಷಿ ಜಮೀನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ನಿರಾಶ್ರಿತರು, ಮನೆ ಲಭಿಸಿದ ಖುಷಿಯಲ್ಲಿ ಎಲ್ಲ ನೋವು ಮರೆತರು. ಸಿಹಿ ವಿತರಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 383 ಹಾಗೂ ಮಡಿಕೇರಿ ತಾಲ್ಲೂಕಿನ ಮದೆಯಲ್ಲಿ 80 ಮನೆಗಳನ್ನು ಫಲಾನುಭವಿಗಳಿಗೆ ಗುರುವಾರ ಹಸ್ತಾಂತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್‌.ಅಶೋಕ್‌ ಮನೆಯ ಕೀ ಹಸ್ತಾಂತರಿಸಿ, ಶುಭ ಕೋರಿದರು.

ಮನೆಗಳಿಗೆ ಮಾವಿನ ತೋರಣ ಕಟ್ಟಿ ಹೂವಿನ ಅಲಂಕಾರ ಮಾಡಲಾಗಿತ್ತು. ‘ಶುಕ್ರವಾರವೇ ಗೃಹಪ್ರವೇಶ ಮಾಡಿ ಮನೆಗೆ ಬರುತ್ತೇವೆ’ ಎಂದು ಕೆಲವು ನಿರಾಶ್ರಿತರು ಖುಷಿಯಿಂದ ಹೇಳಿದರು.

‘ಆಧುನಿಕ ತಂತ್ರಜ್ಞಾನ ಬಳಸಿ, ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಲಾಗಿದೆ. ಪ್ರತಿ ಮನೆಗೆ ₹9.85 ಲಕ್ಷ ವೆಚ್ಚವಾಗಿದೆ. ಜಂಬೂರಿನಲ್ಲಿ 300, ಮದೆಯಲ್ಲಿ 80 ಮನೆಗಳಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದ್ದು, ಶುಕ್ರವಾರದಿಂದಲೇ ವಾಸ ಮಾಡಬಹುದು. ಜಂಬೂರಿನಲ್ಲಿ ಉಳಿದ 83 ಮನೆಗಳಲ್ಲಿ ಸಣ್ಣಪುಟ್ಟ ಕೆಲಸವಿದ್ದು, ಇನ್ನೊಂದು ವಾರದಲ್ಲಿ ಪೂರ್ಣವಾಗಲಿದೆ’ ಎಂದು ನಿಗಮದ ಎಂಜಿನಿಯರ್‌ ಚಂದನ್‌ ತಿಳಿಸಿದರು.

‘ಜೋಡುಪಾಲ ವ್ಯಾಪ್ತಿಯಲ್ಲಿ ವಿಪರೀತ ಮಳೆ ಸುರಿದು ಜೀವನ ನಡೆಸುವುದು ಕಷ್ಟಕರವಾಗಿತ್ತು. ಜಂಬೂರಿನ ಪ್ರಶಾಂತ ಸ್ಥಳದಲ್ಲಿ ಶಾಶ್ವತ ನೆಲೆ ಸಿಕ್ಕಿದೆ. ಮನೆಗಳೂ ಸುಂದರ
ವಾಗಿವೆ. ಇದೊಂದು ಸೌಹಾರ್ದದ ಬಡಾವಣೆ ಆಗಲಿದೆ’ ಎಂದು ಸಂತ್ರಸ್ತ ಎಂ.ಪಿ.ವೀರೇಂದ್ರ ಸಂತಸ ಹಂಚಿಕೊಂಡರು.

‘ಇಷ್ಟು ದಿನ ಬಾಡಿಗೆ ಮನೆಯಲ್ಲಿದ್ದೆವು. ಆರಂಭದಲ್ಲಿ ಸರ್ಕಾರವೇ ಬಾಡಿಗೆ ಪಾವತಿಸುತ್ತಿತ್ತು. ಕ್ರಮೇಣ ಬಾಡಿಗೆ ಹಣ ಸಿಗಲಿಲ್ಲ. ಈಗ ಹೊಸ ಮನೆ ಸಿಕ್ಕಿದೆ. ಆದರೆ, ಇನ್ನೂ ಸಣ್ಣಪುಟ್ಟ ಕೆಲಸಗಳಿವೆ. ಅವುಗಳನ್ನು ಪೂರ್ಣಗೊಳಿಸಿಯೇ ನೀಡಬೇಕು’ ಎಂದು ಹೆಬ್ಬಟ್ಟಗೇರಿ ನಿವಾಸಿ ಸುಹಾಸಿನಿ ಕೋರಿದರು.

ಎಚ್‌ಡಿಕೆಗೆ ಸಿಗದ ಆಹ್ವಾನ: ಆಕ್ರೋಶ
ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿಗೆ 2018ರಲ್ಲಿ ಚಾಲನೆ ನೀಡಿದ್ದ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದನ್ನು ಖಂಡಿಸಿ, ಪ್ರತಿಭಟನೆಗೆ ಮುಂದಾದ 60ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

*
ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೆವು. ಈಗ ಮನೆ ಸಿಕ್ಕಿದ್ದು ಸಂತಸ ತಂದಿದೆ.
-ಎನ್‌.ಆರ್‌.ಸತ್ಯನಾರಾಯಣ, ಫಲಾನುಭವಿ, ಜೋಡುಪಾಲ

*
ಯಾರೂ ಮನೆಗಳನ್ನು ಮಾರಾಟ ಮಾಡಬಾರದು. ಫಲಾನುಭವಿಗಳೇ ಈ ಮನೆಗಳಲ್ಲಿ ವಾಸ ಮಾಡಬೇಕು.
-ವಿ.ಸೋಮಣ್ಣ, ಸಚಿವ

*
ಮಳೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಕೊಡಗಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಶಾಶ್ವತ ಭವನ ನಿರ್ಮಿಸಲಾಗುವುದು.
-ಆರ್‌.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT