ರಾಜ್ಯದತ್ತ ನಕ್ಸಲರ ತಂಡ?

ಶನಿವಾರ, ಮಾರ್ಚ್ 23, 2019
34 °C
ಕೇರಳದ ವಯನಾಡು ಭಾಗದಿಂದ ಚದುರಿರುವ ತಂಡ

ರಾಜ್ಯದತ್ತ ನಕ್ಸಲರ ತಂಡ?

Published:
Updated:

ಮೈಸೂರು: ಕೇರಳದ ವಯನಾಡು ಭಾಗದಿಂದ ಚದುರಿರುವ ನಕ್ಸಲರ ತಂಡವು ರಾಜ್ಯದ ಕಡೆಗೆ ಬರುತ್ತಿದ್ದು, ಸದ್ಯ ಗಡಿಯಿಂದ 30 ಕಿ.ಮೀ ದೂರದಲ್ಲಿದೆ. ರಾಜ್ಯದ ಮೂಲಕ ತಮಿಳುನಾಡು ಅರಣ್ಯಕ್ಕೆ ನುಸುಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೇರಳ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 35ರಿಂದ 40 ಮಂದಿ ಇರುವ ನಕ್ಸಲರ ತಂಡವು ಸಣ್ಣ ಸಣ್ಣ ಗುಂಪುಗಳಾಗಿ ವಿಭಜಿಸಿಕೊಂಡು ಅರಣ್ಯದಲ್ಲಿ ಹೆಜ್ಜೆ ಹಾಕುತ್ತಿದೆ. ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು, ರಸ್ತೆ ತಲುಪಿ ಅಲ್ಲಿಂದ ಬಸ್‌ ಅಥವಾ ಇತರೆ ವಾಹನಗಳ ಮೂಲಕ ರಾಜ್ಯದ ಕಡೆಗೆ ಬರುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.‌ ಹೀಗಾಗಿ, ಕೇರಳದ ಚೆಕ್‌ಪೋಸ್ಟ್‌ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

ಕರ್ನಾಟಕ, ತಮಿಳುನಾಡು, ಕೇರಳ ಗಡಿಗಳು ಸಂಧಿಸುವ ಭಾಗದಲ್ಲಿ ನಕ್ಸಲರ ಚಟುವಟಿಕೆ ಬಿರುಸುಗೊಂಡಿದೆ. ರಾಜ್ಯದ ಬಿ.ಜಿ.ಕೃಷ್ಣಮೂರ್ತಿ ನೇತೃತ್ವದ ಒಂದು ತಂಡ ಹಾಗೂ ಪೀಪಲ್ಸ್ ಲಿಬರೇಷನ್ ಆರ್ಮಿಯ ಉಸ್ತುವಾರಿ ವಿಕ್ರಂಗೌಡ ನೇತೃತ್ವದ ಎರಡು ತಂಡಗಳು ಇವೆ ಎಂದು ಅಂದಾಜು ಮಾಡಲಾಗಿದೆ.

ರಾಜ್ಯದ ಯುವಕ, ಯುವತಿಯರೇ ಹೆಚ್ಚಾಗಿ ಇರುವ ಶಸ್ತ್ರ ಸಜ್ಜಿತ ಪೀಪಲ್ಸ್ ಲಿಬರೇಷನ್ ಆರ್ಮಿಗೆ ರಾಜ್ಯದ ಗಡಿ ಭಾಗದ ಅರಣ್ಯವಾಸಿಗಳಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಆದರೆ, ಕೇರಳದ ವಯನಾಡು ಭಾಗದ ಅರಣ್ಯವಾಸಿಗಳಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಅಲ್ಲಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸೇರಿಸಿಕೊಂಡು ತಂಡವನ್ನು ಶಕ್ತಗೊಳಿಸುವುದು ನಕ್ಸಲರ ಕಾರ್ಯತಂತ್ರ
ವಾಗಿದೆ ಎಂದು ಮೂಲಗಳು ತಿಳಿಸಿವೆ.

ನಕ್ಸಲ್‌ ನಿಗ್ರಹ ದಳ, ಜಿಲ್ಲಾ ಪೊಲೀಸ್‌ ಕಮಾಂಡೊಗಳು, ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಸೇರಿದಂತೆ ಗಡಿಭಾಗಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !