ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿವೆ ಹೊಸ ವಿನ್ಯಾಸದ ಬಸ್

3500 ಬಸ್ ಖರೀದಿಗೆ ಕೆಎಸ್‌ಆರ್‌ಟಿಸಿ ತಯಾರಿ
Last Updated 20 ಮೇ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳ ವಿನ್ಯಾಸ ಶೀಘ್ರ ಬದಲಾಗಲಿದ್ದು, ಹೊಸ ಮಾದರಿಯ ಬಸ್‌ಗಳು ರಸ್ತೆಗೆ ಇಳಿಯಲಿವೆ.

3500 ಬಸ್‌ಗಳ ಖರೀದಿಗೆ ಸಿದ್ಧತೆಗಳು ನಡೆದಿವೆ. ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಹೊರ ಹಾಗೂ ಒಳಾಂಗಣ ವಿನ್ಯಾಸ, ಬಣ್ಣ ಬದಲಿಸಲಾಗುತ್ತದೆ.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಮಂಗಳೂರು ಹಾಗೂ ಇತರೆಡೆ ಖಾಸಗಿ ಬಸ್‌ಗಳಲ್ಲಿ ಸಂಚಾರ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆ ನಂತರವೇ ಬಸ್‌ಗಳ ವಿನ್ಯಾಸ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಲ್ದಾಣಗಳಲ್ಲೇ ಸರ್ಕಾರಿ ಕಚೇರಿ:

ಇನ್ನು ಮುಂದೆ ತಾಲ್ಲೂಕು ಕೇಂದ್ರಗಳಲ್ಲಿ ಹೈಟೆಕ್ ಬಸ್ ನಿಲ್ದಾಣಗಳು ತಲೆಎತ್ತಲಿವೆ. ನಿಲ್ದಾಣದಲ್ಲಿ ನಿರ್ಮಿಸುವ ಕಟ್ಟಡದ ಮೇಲು ಭಾಗದಲ್ಲಿ ಸರ್ಕಾರಿ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಸಾಕಷ್ಟು ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತವೆ. ಇಂತಹ ಕಚೇರಿಗಳಿಗೆ ಜಾಗ ನೀಡಿದರೆ ಸಂಸ್ಥೆಯ ಆದಾಯವೂ ಹೆಚ್ಚಳವಾಗುತ್ತದೆ. ಗ್ರಾಮೀಣ ಭಾಗದಿಂದ ಬರುವ ಜನರೂ ಕಚೇರಿಗಳಿಗೆ ಸುತ್ತಾಟನಡೆಸುವುದು ತಪ್ಪಲಿದೆ. ಬಸ್ ಇಳಿದು, ಅಲ್ಲೇ ಕಚೇರಿಗಳಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ವಾಪಸ್ ಹೋಗಬಹುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಹೊಸದಾಗಿ ತಾಲ್ಲೂಕು ಕೇಂದ್ರ ರಚನೆಯಾಗಿರುವ ಕಡೆಗಳಲ್ಲಿ ಇಂಥ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ 50 ಕಡೆಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಮುಂದಿನ ದಿನಗಳಲ್ಲಿಇತರೆಡೆಗೂ ವಿಸ್ತರಿಸಲಾಗುವುದು. ಇದಕ್ಕಾಗಿ ₹250 ಕೋಟಿ ನೆರವು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕಾರ್ಮಿಕರಿಗೆ ಬಸ್ ಪಾಸ್:

ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಒದಗಿಸಲಾಗುವುದು. ಮೂರು ತಿಂಗಳಿಗೆ ಒಮ್ಮೆ ಪಾಸ್ ನವೀಕರಿಸಲಾಗುತ್ತದೆ. ಇದರ ಯಶಸ್ಸು ನೋಡಿಕೊಂಡು ಬಿಪಿಎಲ್ ಕಾರ್ಡ್ ಹೊಂದಿದವರಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಯಾಣ ದರ ಏರಿಕೆ: ಮುಖ್ಯಮಂತ್ರಿ ಅಂಗಳದಲ್ಲಿ

ಬೆಂಗಳೂರು: ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಕೈಗೊಳ್ಳಬೇಕಿದೆ.

‘ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಕೋರಿ ಮನವಿ ಸಲ್ಲಿಸಿದ್ದೇನೆ. ಅವರೇ ನಿರ್ಧರಿಸಬೇಕಿದೆ. ದರ ಹೆಚ್ಚಳ ಮಾಡದಿದ್ದರೆ ನಷ್ಟದಲ್ಲಿರುವ ಸಂಸ್ಥೆ ನಡೆಸಲು ಆರ್ಥಿಕ ನೆರವು ನೀಡುವಂತೆ ಕೇಳಿದ್ದೇನೆ’ ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಬಿಎಂಟಿಸಿಗೆ ₹200 ಕೋಟಿ ನಷ್ಟ

ಬಿಎಂಟಿಸಿ ಪ್ರತಿ ವರ್ಷ ₹200 ಕೋಟಿ ನಷ್ಟ ಅನುಭವಿಸುತ್ತಿದೆ. ಆಡಳಿತದಲ್ಲಿನ ನ್ಯೂನತೆಗಳು, ಅವ್ಯವಹಾರದಿಂದಾಗಿ ನಿಗಮ ನಷ್ಟದ ಹಾದಿ ಹಿಡಿದಿದೆ. ಅದನ್ನು ಸರಿ ದಾರಿಗೆ ತರುವ ಪ್ರಯತ್ನ ಸಾಗಿದೆ ಎಂದು ಸಚಿವ ತಮ್ಮಣ್ಣ ಹೇಳಿದರು.

ಬಿಡಿ ಭಾಗಗಳ ಖರೀದಿ ಸೇರಿದಂತೆ ಅಕ್ರಮ ನಡೆಸಿರುವ ಸಂಸ್ಥೆಯ 75 ನೌಕರರು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸಂಬಂಧಿಸಿದ ಕಂಪನಿಯಿಂದ ನೇರವಾಗಿ ಬಿಡಿ ಭಾಗಗಳ ಖರೀದಿ, ಡೀಸೆಲ್ ಸರಬರಾಜು ಮಾಡುವ ಟ್ಯಾಂಕರ್‌ಗಳು ಹಾಗೂ ಬಸ್‌ಗಳಿಗೆ ಡಿಜಿಟಲ್ ಲಾಕರ್ ಅಳವಡಿಕೆ ಮತ್ತಿತರ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ದಿವಾಳಿಯಾಗಿರುವ ಕಂಪನಿಗೆ ಐ.ಟಿ ಗುತ್ತಿಗೆ ನೀಡಿದವರ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೆಲಸದಿಂದ ವಜಾ ಮಾಡಲಾಗುವುದು. ಬಸ್ ಡಿಪೋಗಳಲ್ಲೇ ವೀಲ್ ಅಲೈನ್‌ಮೆಂಟ್ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT