ಮಂಗಳವಾರ, ಅಕ್ಟೋಬರ್ 20, 2020
22 °C
ಮುಂಗಾರು ಮಳೆ ವೇಳೆ ಸ್ಥಳಾಂತರಗೊಂಡರೆ ಬಾಡಿಗೆ ಪಾವತಿಸಲು ಚಿಂತನೆ

ಕೊಡಗು: ಅಪಾಯ ಸಾಧ್ಯತೆಯ 13 ಪ್ರದೇಶ ಗುರುತು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ವಿಸ್ತೃತ ಅಧ್ಯಯನ ನಡೆಸಿದ್ದ ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ಭೂವಿಜ್ಞಾನಿಗಳ ತಂಡವು, ಮತ್ತೊಂದು ಮಧ್ಯಂತರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ವರದಿ ಆಧರಿಸಿ ಅಪಾಯ ಸಾಧ್ಯತೆಯ ಪ್ರದೇಶಗಳನ್ನು ಗುರುತಿಸಲಾಗಿದೆ. 

ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 32 ಗ್ರಾಮಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ವರದಿ ಆಧರಿಸಿ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರವು ಜಿಲ್ಲೆಯ 13 ಸ್ಥಳಗಳನ್ನು ಸೂಕ್ಷ್ಮ ಪ್ರದೇಶ ಪಟ್ಟಿಗೆ ಸೇರಿಸಿದೆ.

ಇಲ್ಲಿ 2019ರ ಮುಂಗಾರು ಮಳೆಯಲ್ಲೂ ಭೂಕುಸಿತದ ಸಾಧ್ಯತೆ ಇದೆ ಎಂದು ಎಚ್ಚರಿಕೆ ರವಾನಿಸಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟು ನಿರ್ದೇಶನ ನೀಡಲಾಗಿದೆ.

ಅಪಾಯಕಾರಿ ಹಾಗೂ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ನೋಡಲ್‌ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ. ಮಳೆಗಾಲದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದರೆ ಪರಿಹಾರ ಕಾರ್ಯ ಕೈಗೊಳ್ಳಲು ಪೊಲೀಸ್‌ ಇಲಾಖೆ, ಅಗ್ನಿ ಶಾಮಕ ದಳದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಸನ್ನದ್ಧ ಆಗಿರುವಂತೆಯೂ ಜಿಲ್ಲಾಡಳಿತ ಸೂಚಿಸಿದೆ.

ಇನ್ನೂ ಸೂಕ್ಷ್ಮ ಪ್ರದೇಶದಲ್ಲಿರುವ ಕೆಲವು ಗ್ರಾಮದ ನಿವಾಸಿಗಳು ಮಳೆಗಾಲದ ಮೂರು ತಿಂಗಳ (ಜೂನ್‌, ಜುಲೈ ಹಾಗೂ ಆಗಸ್ಟ್‌) ಮಟ್ಟಿಗೆ ಬಾಡಿಗೆ ಮನೆಗಳಿಗೆ ತೆರಳಲು ಸ್ವಯಂ ಪ್ರೇರಣೆಯಿಂದ ಮುಂದಾಗಿದ್ದಾರೆ. ಮಳೆಗೂ ಮೊದಲೇ ಇಲ್ಲಿಂದ ಸ್ಥಳಾಂತರವಾದರೆ ಮೂರು ತಿಂಗಳ ಮಟ್ಟಿಗೆ ಬಾಡಿಗೆ ಹಣ ಪಾವತಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಇಂಥದ್ದೊಂದು ಪ್ರಸ್ತಾವವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ. ಸರ್ಕಾರ ಒಪ್ಪಿದಲ್ಲಿ ಗುಡ್ಡಗಾಡು, ಇಳಿಜಾರು ಪ್ರದೇಶದ ಕುಟುಂಬಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

2ನೇ ಮೊಣ್ಣಂಗೇರಿ, ಕರ್ತೋಜಿ, ರಾಮಕೊಲ್ಲಿ, ಜೋಡುಪಾಲ, ಮದೆ ಭಾಗದಲ್ಲಿ ಇಳಿಜಾರು ಪ್ರದೇಶದ ನಿವಾಸಿಗಳು ತಾತ್ಕಾಲಿಕವಾಗಿ ಬಾಡಿಗೆ ಮನೆಗಳಿಗೆ ತೆರಳಲು ಆಸಕ್ತಿ ತೋರಿದ್ದಾರೆ. ಕಳೆದ ವರ್ಷದ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೂ ಪ್ರತಿ ತಿಂಗಳು ₹ 10 ಸಾವಿರ ಬಾಡಿಗೆ ಪಾವತಿಸಲಾಗುತ್ತಿದೆ.

‘ಭೂಕುಸಿತದ 2ನೇ ಮೊಣ್ಣಂಗೇರಿಯ ಸ್ಥಿತಿ ಅವಲೋಕಿಸಿರುವೆ. ಅಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಮೊದಲ ಪಟ್ಟಿಯಲ್ಲೇ ಮನೆ ಹಸ್ತಾಂತರ ಮಾಡಲಾಗುವುದು. ಕೆಲವು ಮನೆಗೆ ಹಾನಿ ಆಗದಿದ್ದರೂ ಈ ವರ್ಷವೂ ರಸ್ತೆ ಸಮಸ್ಯೆ ಎದುರಾಗಬಹುದು. ಬೆಟ್ಟದಲ್ಲಿನ ಮಣ್ಣು ಸಡಿಲಗೊಂಡಿದ್ದು ಗ್ರಾಮಸ್ಥರೂ ಆತಂಕ ತೋಡಿಕೊಂಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

ಪೊಲೀಸ್‌ ತಂಡಕ್ಕೆ ತರಬೇತಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಯ ಒಂದು ತಂಡವು ತಿಂಗಳ ಅಂತ್ಯಕ್ಕೆ ಮಡಿಕೇರಿಗೆ ಬರಲಿದ್ದು ಮೂರು ತಿಂಗಳು ಕೇಂದ್ರ ಸ್ಥಾನದಲ್ಲೇ ಇರಲಿದೆ.

60 ಮಂದಿ ಜಿಲ್ಲಾ ಪೊಲೀಸರ ನಾಲ್ಕು ತಂಡಗಳನ್ನು ರಚಿಸಿದ್ದು ಅವರಿಗೆ ಭೂಕುಸಿತವಾಗಿದ್ದ ಉದಯಗಿರಿ ಮತ್ತಿತರ ಸ್ಥಳಗಳಲ್ಲಿ ತರಬೇತಿ ಕೊಡಲಾಗುತ್ತಿದೆ. ವಿಪತ್ತು ಘಟಿಸಿದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಹೇಗೆ ಕರೆ ತರಬೇಕೆಂದು ಬೆಂಗಳೂರಿನ ಟೀಂಸೃಷ್ಟಿ ಅಡ್ವೆಂಚರ್ಸ್‌, ಪುಣೆಯ ಆರ್‌ಟಿ ಜಿಯೋ ಮತ್ತು ಪರಿಸರ ಸಮನ್ವಯ ಸಮಿತಿ ಸದಸ್ಯರು ತರಬೇತಿ ನೀಡುತ್ತಿದ್ದಾರೆ.

ಅಪಾಯದ ಸೂಚನೆ ಹೇಗಿರಲಿದೆ?

ಮನೆಯ ಗೋಡೆಗಳಲ್ಲಿ ದಿಢೀರ್‌ ಬಿರುಕು ಕಾಣಿಸಿಕೊಳ್ಳಬಹುದು, ರಸ್ತೆ– ಬೆಟ್ಟ ಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡು ವಿಸ್ತಾರಗೊಳ್ಳುತ್ತಲೇ ಸಾಗಬಹುದು, ಮರ ಹಾಗೂ ಬೇಲಿ ಬದಿಯಲ್ಲಿ ಸಸ್ಯಗಳು ಅಲುಗಾಡುವ ರೀತಿಯ ಲಕ್ಷಣ ಕಂಡುಬಂದರೆ ಎಚ್ಚರಿಕೆ ತೆಗೆದುಕೊಳ್ಳುವುದು ಒಳಿತು. ಇಂಥ ಸೂಚನೆ ಸಿಕ್ಕರೆ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಭೂವಿಜ್ಞಾನಿಗಳು ಹೇಳಿದ್ದಾರೆ.

ಮುನ್ಸೂಚನೆ ಸಿಕ್ಕರೆ ಸ್ಥಳಾಂತರ ಅಗತ್ಯ

‘ಕೆಲವು ಪ್ರದೇಶದಲ್ಲಿ ಬೆಟ್ಟಗಳು ಸಡಿಲಗೊಂಡಿದ್ದರೆ, ಹಲವೆಡೆ ದೊಡ್ಡದಾದ ಬಿರುಕು ಉಳಿದಿವೆ. ಭೂಕುಸಿತ ಪ್ರದೇಶ ಅತ್ಯಂತ ಅಪಾಯಕಾರಿ ಎನಿಸಿದೆ. ಹವಾಮಾನ ಇಲಾಖೆ, ಭಾರಿ ಮಳೆ ಮುನ್ಸೂಚನೆ ನೀಡಿದರೆ ಅಪಾಯದಲ್ಲಿರುವ ಜನರನ್ನು ಮೊದಲೇ ಸ್ಥಳಾಂತರಿಸಬೇಕು’ ಎಂದು ಭೂವಿಜ್ಞಾನಿಗಳು ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರದಲ್ಲೂ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ಹಿರಿಯ ಭೂವಿಜ್ಞಾನಿಗಳಾದ ಕೆ.ವಿ. ಮಾರುತಿ, ಸುನಂದನ್ ಬಸು, ಅಮರ್ ಜ್ಯೋತಿ ಅವರು ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿದ್ದರು. 

ಸೂಕ್ಷ್ಮ ಪ್ರದೇಶಗಳು

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ 13 ಜನವಸತಿ ಪ್ರದೇಶಗಳೇ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿವೆ. ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೊಡ್ಲು ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ (ಜೋಡುಪಾಲ), 2ನೇ ಮೊಣ್ಣಂಗೇರಿ ಸೂಕ್ಷ್ಮ ಪ್ರದೇಶಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು