ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಅಂತರ ಜಿಲ್ಲಾ ಸುಲಿಗೆಕೋರರ ಸೆರೆ

ಲಾಂಗ್‌ ತೋರಿಸಿ ಹಣ ದರೋಡೆ, ಪೊಲೀಸರ ಯಶಸ್ವಿ ಕಾರ್ಯಾಚರಣೆ
Last Updated 1 ಜುಲೈ 2019, 14:11 IST
ಅಕ್ಷರ ಗಾತ್ರ

ಮಡಿಕೇರಿ: ಪೆಟ್ರೋಲ್‌ ಬಂಕ್‌ ಸೇರಿದಂತೆ ಒಂಟಿ ಮನೆಗಳಲ್ಲಿ ಲಾಂಗ್‌ ತೋರಿಸಿ ಸುಲಿಗೆ ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಭಾನುವಾರ ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಜಗದಾಪುರ ಗ್ರಾಮದ ಪ್ರವೀಣ್‌ (25), ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಕೋಟೆಬೀದಿಯ ಬಿ.ಗಣೇಶ್‌ (30), ಹುಣಸೂರು ಆರ್‌ಟಿಒ ಕಚೇರಿ ಬಳಿಯ ನಿವಾಸಿ ಕುಮಾರ (33), ಮೈಸೂರು ಹೂಟಗಳ್ಳಿ ಹೌಸಿಂಗ್‌ ಬೋರ್ಡ್‌ನ ಆರ್‌.ಜೆ.ಅಭಿಷೇಕ್‌ (23) ಬಂಧಿತ ಆರೋಪಿಗಳು.

ಬಂಧಿತರಿಂದ ₹ 2.50 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಆರೋಪಿಗಳು ಪೆಟ್ರೋಲ್‌ ಬಂಕ್‌ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

ಜೂನ್‌ 16ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದ ಎ.ಆರ್. ಸರ್ವಿಸ್‌ ಸ್ಟೇಷನ್‌ಗೆ ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ಲಾಂಗ್‌ ತೋರಿಸಿ ಬೆದರಿಸಿ, ಹಣ ಹಾಗು ಮೊಬೈಲ್‌ ದೋಚಿ ಪರಾರಿಯಾಗಿದ್ದರು. ಆರೋಪಿಗಳ ಯಾವುದೇ ಸುಳಿವು ಲಭಿಸದೇ ಇದ್ದರೂ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತಂಡವನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ತಿಳಿಸಿದರು.

ಅಲ್ಲದೇ ಪ್ರಮುಖ ಆರೋಪಿ ಪ್ರವೀಣ್‌ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣ, ಮಹಾಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ, ಚೆನ್ನಪಟ್ಟಣದ ಅಕ್ಕೂರು ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣ, ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಡಕಾಯಿತಿ ಪ್ರಕರಣ, ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲೂ ಸುಲಿಗೆ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ಈ ಎಲ್ಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದರು.

ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಡಿವೈಎಸ್‌ಪಿ ಪಿ.ಕೆ.ಮುರಳೀಧರ್‌, ಸಿಪಿಐ ಬಿ.ಎಸ್‌.ದಿನೇಶ್‌ ಕುಮಾರ್‌, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ನಂದೀಶ್‌ ಕುಮಾರ್‌, ಪಿಎಸ್‌ಐ ಸದಾಶಿವ, ಪ್ರೊಬೇಷನರಿ ಪಿಎಸ್‌ಐ ಅರ್ಚನಾ ಹಾಗೂ ಪೊಲೀಸ್‌ ಸಿಬ್ಬಂದಿಗಳಾದ ಟಿ.ಎಸ್.ಸಜಿ, ಕೆ.ಎಸ್‌.ಸುಧೀರ್‌ಕುಮಾರ್‌, ದಯಾನಂದ, ಸಂದೇಶ್‌, ಜೋಸೆಫ್‌, ಎ.ಮಂಜುನಾಥ್‌, ಎನ್‌.ಆರ್‌.ರಮೇಶ್‌, ವೈ.ಎಸ್‌.ನಾಗರಾಜ್‌, ಪ್ರಕಾಶ್‌, ಸಂಪತ್‌ ರೈ, ಸುಧೀಶ್‌ಕುಮಾರ್‌, ಅಭಿಷೇಕ್‌, ಮಣಿಕಂಠ, ಚಂದ್ರು, ವಿವೇಕ ಮತ್ತಿತರರು ಪಾಲ್ಗೊಂಡಿದ್ದರು. ಈ ತಂಡವನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT