ಬುಧವಾರ, ಮಾರ್ಚ್ 3, 2021
19 °C
ಕೊಡಗು ಜನಪ್ರತಿನಿಧಿಗಳಿಗೆ ಬೆಳೆಗಾರರ ಒಕ್ಕೂಟದಿಂದ ಮನವಿ ಸಲ್ಲಿಕೆ

ಮಡಿಕೇರಿ | ಕಾಫಿ ಉದ್ಯಮ: ವಿಶೇಷ ಪ್ಯಾಕೇಜ್‌ಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೋವಿಡ್– 19 ಲಾಕ್‍ಡೌನ್‌ನಿಂದ ಕಾಫಿ ಬೆಳೆಗಾರ ಸಮುದಾಯ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರವು ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಜಿಲ್ಲೆಯ ಕಾಫಿ ಬೆಳೆಗಾರರು ಒತ್ತಾಯಿಸಿದರು.

ಬೆಳೆಗಾರರ ಒಕ್ಕೂಟದ ಸದಸ್ಯರು, ಜಿಲ್ಲೆಯ ಶಾಸಕರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದು, ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಅವರು ಕಾಫಿ ಬೆಳೆಗಾರರ ರಕ್ಷಣೆಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆ ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ್ದು, ಈ ಹೊಡೆತ ನೇರವಾಗಿ ಜಿಲ್ಲೆಯ ಬೆಳೆಗಾರ ಸಮುದಾಯದ ಮೇಲಾಗಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ವರ್ಷಗಳೇ ಬೇಕು. ಇಂತಹ ಸಮಯದಲ್ಲೇ ಕೋವಿಡ್– 19 ಲಾಕ್‌ಡೌನ್‌ನಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಕಾಫಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆಗಳೇನು?: ಬಹಳಷ್ಟು ಬೆಳೆಗಾರರ ಕಾಫಿ, ಕಾಳುಮೆಣಸು ಕಟಾವು ಸ್ಥಗಿತಗೊಂಡು ಪ್ರಸಕ್ತ ಬೆಳೆ ನಷ್ಟವಾಗಿದೆ. ಕಾಫಿ, ಕಾಳುಮೆಣಸು ಬೆಳೆಗೆ ವ್ಯವಸ್ಥೆ ಇರುವಲ್ಲಿ ಸ್ಪಿಂಕ್ಲರ್ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಸಕಾಲದಲ್ಲಿ ಮಳೆಯು ಆಗದೇ ಮುಂದಿನ ವರ್ಷದ ಕೃಷಿ ಫಸಲು ಕುಂಠಿತಗೊಳ್ಳುವ ಸಾಧ್ಯತೆಯಿದೆ. ಕೃಷಿ ಉತ್ಪನ್ನ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ತೋಟದಲ್ಲಿ ಮತ್ತು ಮಿಶ್ರ ಬೆಳೆಗಳಲ್ಲಿ ಮುಂದಿನ ಫಸಲಿನ ಮೇಲೆ ದುಷ್ಪರಿಣಾಮ ಬೀರಿದೆ.

ಬೇಡಿಕೆಗಳು: ಕೋವಿಡ್ -19ರ ದುಷ್ಪರಿಣಾಮದಿಂದ ತಕ್ಷಣ ಕೊಡಗಿನ ಕಾಫಿ ಮತ್ತು ಇತರ ಎಲ್ಲಾ ಕೃಷಿ ಉತ್ತೇಜಿಸುವ ಪ್ಯಾಕೇಜ್‌ಗೆ ನೀಡಬೇಕು. ಕೊಡಗಿನ ಎಲ್ಲಾ ಬೆಳೆಗಾರರು, ಎಲ್ಲಾ ಬ್ಯಾಂಕ್‌ಗಳ ಹಣಕಾಸು ಸಂಸ್ಥೆಗಳು ಹಾಗೂ ಖಾಸಗಿಯಾಗಿ ಪಡೆದಿರುವ ಎಲ್ಲ ರೀತಿಯ ಸಾಲಗಳ ಬಡ್ಡಿ ಮನ್ನಾ ಮಾಡಿ ಮುಂದೆ ಬಡ್ಡಿ ರಹಿತವಾಗಿ ವಿಸ್ತರಿಸಬೇಕು.ಸಾಲ ಮರು ಪಾವತಿಗೆ ಯಾವುದೇ ಒತ್ತಡವನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು.

ಕೊಡಗಿನಲ್ಲಿ ಪಾಳುಬಿಟ್ಟ ಕೃಷಿ ಭೂಮಿಗಳಲ್ಲಿ ಮರುಕೃಷಿಗೆ ಎಲ್ಲ ಬೆಳೆಗಾರರು ಉತ್ಸಾಹ ತೋರುತ್ತಿದ್ದಾರೆ. ಆದರೆ, ಹಲವಾರು ಕಾರಣಗಳಿಂದ ಕೃಷಿ ಭೂಮಿಯನ್ನು ಪಾಳುಬಿಡುವಂತಾಗಿದೆ. ಇದಕ್ಕೆ ರೈತರು ತಮ್ಮ ಸರ್ಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ ನೈಜ ಕಾರಣ ಪರಿಶೀಲನೆ ಮಾಡಬೇಕು. ಅದಕ್ಕೂ ಪ್ರೋತ್ಸಾಹಧನ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಕಾಫಿ ಮತ್ತು ಎಲ್ಲ ಕೃಷಿ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕು.

ಬೇಡಿಕೆ ಈಡೇರಿಸಲು ಆಗ್ರಹಿಸಿ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರಿಗೆ ಮನವಿ ಸಲ್ಲಿಸಿದರು.

ಕೊಡಗಿನ ವಿವಿಧ ಬೆಳೆಗಾರರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ನಂದಾ ಬೆಳ್ಯಪ್ಪ, ಕೆ.ಕೆ. ವಿಶ್ವನಾಥ್, ಎಂ.ಸಿ. ಕಾರ್ಯಪ್ಪ, ಎನ್.ಎಂ. ದಿನೇಶ್, ಸೋಮಶೇಖರ್‌, ಬಿ.ಎಸ್.ಅನಂತರಾಮ್, ಮೋಹನ್ ಬೋಪಣ್ಣ, ಕೆ.ಎಸ್.ಅಪ್ಪಯ್ಯ, ಹರೀಶ್‌ ಅಪ್ಪಯ್ಯ, ಅಣ್ಣೀರ ಹರೀಶ್ ಮಾದಪ್ಪ, ಮಾಣೀರ ವಿಜಯ್ ನಂಜಪ್ಪ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು