ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕಂಟೈನ್‌ಮೆಂಟ್‌ ವಲಯದ ನಿವಾಸಿಗಳ ಅಳಲು

ಬಾಗಿಲು ಮುಚ್ಚಿದ ಅಂಗಡಿಗಳು, ಮತ್ತೆ ವ್ಯಾಪಾರಿಗಳಿಗೆ ನಷ್ಟ
Last Updated 28 ಜೂನ್ 2020, 15:26 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಕೊರೊನಾ ಸೋಂಕು ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.

ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಟ್ರಾವೆಲ್‌ ಹಿಸ್ಟರಿ ಇಲ್ಲದಿದ್ದರೂ ಕೊರೊನಾ ಸೋಂಕು ತಗುಲಿರುವ ಪ್ರಕರಣಗಳು ವರದಿ ಆಗುತ್ತಿರುವುದು ಆತಂಕ ತಂದೊಡ್ಡಿದೆ. ಮತ್ತೊಂದೆಡೆ ಕಂಟೈನ್‌ಮೆಂಟ್‌ ವಲಯದ ನಿವಾಸಿಗಳು ಸಂಪಾದನೆಯೂ ಇಲ್ಲದೇ ಆಹಾರ ಸಾಮಗ್ರಿಯೂ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.

‘ಸೋಂಕಿತ ವ್ಯಕ್ತಿಗಳ ಮನೆಯ ಸುತ್ತಮುತ್ತ ಮಾತ್ರ ಕಂಟೈನ್‌ಮೆಂಟ್‌ ವಲಯ ಪ್ರದೇಶವೆಂದು ಘೋಷಣೆ ಮಾಡಬೇಕು. ಇಡೀ ರಸ್ತೆ, ಬಡಾವಣೆಯನ್ನೇ ನಿಯಂತ್ರಿತ ಪ್ರದೇಶದ ವ್ಯಾಪ್ತಿಗೆ ಒಳಪಡಿಸಿರುವುದು ತಪ್ಪು’ ಎಂದು ಕಂಟೈನ್‌ಮೆಂಟ್‌ ವಲಯದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಕಂಟೈನ್‌ಮೆಂಟ್‌ ವಲಯದ ನಿವಾಸಿಗಳಿಗೆ ಜಿಲ್ಲಾಡಳಿತವೇ ಅಗತ್ಯ ಸಾಮಗ್ರಿ ಪೂರೈಕೆ ಮಾಡಲಿದೆ ಎಂದು ಆರಂಭದಲ್ಲಿ ಭರವಸೆ ನೀಡಲಾಗಿತ್ತು. ಆದರೆ, ಗೌಳಿಬೀದಿ ಸೇರಿದಂತೆ ಜಿಲ್ಲೆಯ ನಿಯಂತ್ರಿತ ವಲಯದ ನಿವಾಸಿಗಳಿಗೆ ಅಗತ್ಯ ಸಾಮಗ್ರಿ ಪೂರೈಕೆ ಆಗುತ್ತಿಲ್ಲ. ಕಂಟೈನ್‌ಮೆಂಟ್‌ ವಲಯದ ನಿವಾಸಿಗಳಿಗೆ ಮೊಬೈಲ್‌ ಸಂಖ್ಯೆ ನೀಡಿ ಅಂಗಡಿಯಿಂದ ನೀವೇ ಸಾಮಗ್ರಿ ಖರೀದಿಸಿ ಎಂದು ಅಧಿಕಾರಿಗಳು ಹೇಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆಕ್ರೋಶ ಹೆಚ್ಚಾದ ಮೇಲೆ ಭಾನುವಾರ ಜಿಲ್ಲೆಯ ಕೆಲವು ಭಾಗಕ್ಕೆ ಮಾತ್ರ ಆಹಾರ ಕಿಟ್‌ ವಿತರಣೆ ಮಾಡಲಾಗಿದೆ.

‘ಕೊರೊನಾದಿಂದ ಮೊದಲೇ ದುಡಿಮೆ ಇರಲಿಲ್ಲ. ಅನ್‌ಲಾಕ್‌ ಆದ ಮೇಲೆ ಜೀವನಕ್ಕೇ ಏನೋ ಮಾಡುತ್ತಿದ್ದೆವು. ಈಗ ನಿಯಂತ್ರಿತ ವಲಯದಿಂದ ಸಂಪಾದನೆಯೂ ಇಲ್ಲವಾಗಿದೆ. ಪ್ರತಿನಿತ್ಯ ಹಾಲು, ಮಕ್ಕಳಿಗೆ ಬಿಸ್ಕತ್‌ ಹಾಗೂ ಆಹಾರ ಕಿಟ್‌ ನೀಡಬೇಕು’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ವ್ಯಾಪಾರೋದ್ಯಮ ಬಂದ್‌:ಗೌಳಿಬೀದಿಯಲ್ಲಿ ಮೀನು ಮಾರಾಟ ಮಳಿಗೆ, ಗ್ಯಾರೇಜ್‌, ದಿನಸಿಗಳು ಅಂಗಡಿಗಳಿವೆ. ಹಾಗೆಯೇ ಓಂಕಾರೇಶ್ವರ ದೇಗುಲ ರಸ್ತೆಯಲ್ಲೂ ಸ್ಟುಡಿಯೊ, ಜೆರಾಕ್ಸ್‌ ಅಂಗಡಿ, ಹೋಟೆಲ್‌... ಹೀಗೆ ಹಲವು ಮಾರಾಟ ಮಳಿಗೆಗಳಿವೆ. ಖಾಸಗಿ ಕ್ಲಿನಿಕ್‌ ಇದೇ ರಸ್ತೆಯಲ್ಲಿರುವ ಕಾರಣಕ್ಕೆ ಎಲ್ಲ ಮಳಿಗೆಗಳೂ ಐದು ದಿನದಿಂದ ಮುಚ್ಚಿವೆ. ವ್ಯಾಪಾರಿಗಳು ಮತ್ತೆ ಕಂಗಾಲಾಗುವ ಸ್ಥಿತಿ ಎದುರಾಗಿದೆ. ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಮಳೆ ಭಯ, ಆನೆ ಕಾಟ:ಇನ್ನು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದೆ. ಕಂಟೈನ್‌ಮೆಂಟ್‌ ವಲಯದ ಜನರು ಯಾರೂ ಹೊರಬಾರದಂತೆ ಎರಡು ಪಾಳಿಯಲ್ಲಿ ಪೊಲೀಸರ ಕಾವಲಿದೆ. ಮಳೆಯ ಕಾರಣಕ್ಕೆ ಅವರಿಗೂ ಕಾವಲು ಕಾಯುವುದು ಸಮಸ್ಯೆಯಾಗಿದೆ. ಜತೆಗೆ ಅವರಿಗೂ ಆತಂಕವಿದೆ. ಇನ್ನು ಪಾಲಿಬೆಟ್ಟ, ಬಿಟ್ಟಂಗಾಲದಲ್ಲೂ ನಿಯಂತ್ರಿತ ವಲಯಗಳಿವೆ. ಅಲ್ಲಿ ಕಾಡಾನೆಗಳ ಕಾಟವಿದೆ. ಸಂಜೆಯಾದ ಮೇಲೆ ರಸ್ತೆಯಲ್ಲಿ ನಿಂತು ಹೇಗೆ ಕೆಲಸ ಮಾಡುವುದು ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಸಿಬ್ಬಂದಿ ಅಳಲು ತೋಡಿಕೊಂಡರು.

ಮಡಿಕೇರಿಯಲ್ಲಿ ‘ಲಾಕ್‌ಡೌನ್’‌ ಯಶಸ್ವಿ
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು, ಮುಂದಿನ ಭಾನುವಾರದಿಂದ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದರೆ, ಕೊಡಗು ಜಿಲ್ಲೆಯಲ್ಲಿ ನಿನ್ನೆಯೇ (ಜೂನ್‌ 18) ಪೂರ್ಣ ಪ್ರಮಾಣ ಲಾಕ್‌ಡೌನ್‌ ನಡೆಯಿತು.

ಅದಕ್ಕೆ ಮಡಿಕೇರಿಯಲ್ಲಿ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಯಿತು. ‘ಮಂಜಿನ ನಗರಿ’ಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿತ್ತು. ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌ ಪದಾಧಿಕಾರಿಗಳು, ಜುಲೈ 4ರ ತನಕ ಮಧ್ಯಾಹ್ನ ಬಳಿಕ ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್‌ ಮಾಡಲು ಕರೆ ನೀಡಿದ್ದಾರೆ. ಜನರೂ ಸಹ ಆತಂಕಗೊಂಡು ರಸ್ತೆಗೆ ಇಳಿಯುತ್ತಿಲ್ಲ.

**

ಇನ್ನೂ 900 ಮಾದರಿಗಳ ವೈದ್ಯಕೀಯ ವರದಿ ಬರಬೇಕಿದೆ. ನಿತ್ಯ ಪ್ರಯೋಗಾಲಯದಲ್ಲಿ 300 ಮಂದಿ ಗಂಟಲು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿಯಂತ್ರಿತ ವಲಯದ ಎಲ್ಲ ನಿವಾಸಿಗಳನ್ನೂ ತಪಾಸಣೆ ನಡೆಸುತ್ತಿದ್ದೇವೆ
– ಡಾ.ಕೆ.ಮೋಹನ್‌, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT