ಶುಕ್ರವಾರ, ಜುಲೈ 30, 2021
28 °C
ಬಾಡಿಗೆ, ಸಂಬಂಧಿಕರ ಮನೆ ಬಿಟ್ಟು ಹೊಸ ಸೂರು ಸೇರುತ್ತಿರುವ 2018ರ ಸಂತ್ರಸ್ತರು

ಕೊಡಗು: ಸಂತ್ರಸ್ತರ ಬಡಾವಣೆಯಲ್ಲಿ ಗೃಹ ಪ್ರವೇಶದ ಸಂಭ್ರಮ

ಅದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕಳೆದ ವಾರವಷ್ಟೆ ತಾಲ್ಲೂಕಿನ ಮದೆಯಲ್ಲಿ 2018ರ 80 ಮಂದಿ ನೆರೆ ಸಂತ್ರಸ್ತರಿಗೆ ಸರ್ಕಾರವು ಮನೆ ಹಸ್ತಾಂತರಿಸಿತ್ತು. ಇದೀಗ ಆ ನೂತನ ಬಡಾವಣೆಯಲ್ಲಿ ಗೃಹಪ್ರವೇಶದ ಸಂಭ್ರಮ, ಎಲ್ಲೆಲ್ಲೂ ಸಡಗರದ ವಾತಾವರಣ.

ಮಡಿಕೇರಿ–ಮಂಗಳೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಮದೆಯಿಂದ 5 ಕಿ.ಮೀ ಒಳಕ್ಕೆ ತೆರಳಿದರೆ ಗೌಳಿಕಟ್ಟೆ ಎಂಬಲ್ಲಿ ಮನೆ ನಿರ್ಮಿಸಲಾಗಿದೆ. ಅಲ್ಲಿ ಈ ಸಂಭ್ರಮದ ವಾತಾವರಣ ಕಾಣಬಹುದಾಗಿದೆ.

ಕೆಲವರು ಈಗಾಗಲೇ ನೂತನ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಹಾಲು ಉಕ್ಕಿಸಿ ಗೃಹಪ್ರವೇಶ ಮಾಡಿದ್ದಾರೆ. ಹೊಸ ಮನೆಯಲ್ಲಿ ವಾಸ್ತವ್ಯ ಸಹ ಆರಂಭಿಸಿದ್ದಾರೆ. ಇನ್ನು ಕೆಲವರು ಶುಕ್ರವಾರ ಶುಭದಿನವೆಂದು ಗೃಹಪ್ರವೇಶ ಮಾಡಿದರು. 20ಕ್ಕೂ ಹೆಚ್ಚು ಮನೆಗಳ ಗೃಹಪ್ರವೇಶ ನಡೆದಿದೆ. ಮುಂದಿನ ವಾರ ಉಳಿದ ಮನೆಯ ಮಾಲೀಕರು ಮನೆ ಸೇರಿಕೊಳ್ಳಲಿದ್ದಾರೆ.

ಕಳೆದೆರಡು ವರ್ಷಗಳಿಂದ ಬಾಡಿಗೆ ಮನೆ, ಸಂಬಂಧಿಕರ ಮನೆ ಹಾಗೂ ಕಾಫಿ ತೋಟದ ಲೈನ್‌ಮನೆಗಳಲ್ಲಿ ವಾಸ್ತವ್ಯ ಮಾಡಿದ್ದ ಕುಟುಂಬಗಳು, ಆ ಸ್ಥಳವನ್ನು ಬಿಟ್ಟು ಹೊಸ ಮನೆಯನ್ನು ಸಂಭ್ರಮದಿಂದ ಬಂದು ಸೇರುತ್ತಿದ್ದಾರೆ.

ಇನ್ನು ಕೆಲವರು ಕೀ ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂತು.

ಚಿಗುರಿದ ಕನಸು:

ಮದೆನಾಡು, ಮೊಣ್ಣಂಗೇರಿ, ಸಂಪಾಜೆ ಹಾಗೂ ಜೋಡುಪಾಲದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನೀಡಲಾಗಿದೆ. ಎರಡು ವರ್ಷಗಳಿಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ಸಂತ್ರಸ್ತರಲ್ಲಿ ಈಗ ಹೊಸ ಆಸೆ ಚಿಗುರಿದೆ. ಮನೆ ಸಿಕ್ಕಿದೆ; ಹೇಗೆ ಭವಿಷ್ಯ ರೂಪಿಸಿಕೊಳ್ಳುತ್ತೇವೆ ಎಂದು ಖುಷಿಯಿಂದ ಹೇಳಿದರು.

ಹೆಚ್ಚುವರಿ ಕೊಠಡಿ ನಿರ್ಮಾಣ:

ಎರಡು ಮಲಗುವ ಕೋಣೆಯುಳ್ಳ ಮನೆಯನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಎಲ್ಲರಿಗೂ ಮನೆಯ ಕೀಗಳನ್ನು ಕೊಡಗು ಜಿಲ್ಲಾಡಳಿತ ಹಸ್ತಾಂತರಿಸಿದೆ. ಅವರಲ್ಲಿ ಕೆಲವರು ಹಿಂಬದಿಯ ಜಾಗವನ್ನೇ ಬಳಕೆ ಮಾಡಿಕೊಂಡು ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚುವರಿ ಕೋಣೆಗಳನ್ನು ಮಳೆಗಾಲದ ಬಳಸಲು ಸೌಧೆ ದಾಸ್ತಾನು ಮಾಡಲು ಹಾಗೂ ಕೃಷಿ ಪರಿಕರ ಇಡಲು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಸಂತ್ರಸ್ತರೊಬ್ಬರು ಹೇಳಿದರು.

ಮೈದಾನ ಅಗತ್ಯ:

ಗೌಳಿಕಟ್ಟೆಯಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಲಾಗಿದೆ. ಆದರೆ, ದಿನಸಿ ಅಂಗಡಿ ಹಾಗೂ ಮೈದಾನದ ಕೊರತೆಯಿದೆ. ಆದಷ್ಟು ಬೇಗ ಮೈದಾನ ನಿರ್ಮಿಸಿಕೊಟ್ಟರೆ ಅನುಕೂಲ ಎಂದು ಲೋಕೇಶ್‌ ಕಾಟಕೇರಿ ಆಗ್ರಹಿಸುತ್ತಾರೆ. 

ರಸ್ತೆ ಸಮಸ್ಯೆ

ಸಂತ್ರಸ್ತರಿಗೆ ಮನೆ ನಿರ್ಮಿಸಿರುವ ಜಾಗಕ್ಕೆ ತೆರಳಲು ಸಹಾಸವನ್ನೇ ಪಡಬೇಕಿದೆ. ಗೌಳಿಕಟ್ಟೆ ರಸ್ತೆಯಲ್ಲಿ ಗುಂಡಿಗಳು ಹಾಳಿ ಮಿತಿಮೀರಿದೆ. ಪಾದಚಾರಿಗಳೂ ಸಹ ಮನೆಗೆ ತೆರಳಲು ಕಷ್ಟಪಡಬೇಕಿದೆ. ಶೀಘ್ರವೇ ರಸ್ತೆ ದುರಸ್ತಿ ಪಡಿಸಿಕೊಡಿ ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ಇನ್ನು ಮುಂದೆ ಕೂಲಿಯಾದರು ಮಾಡಿ ಜೀವನ ಮಾಡುವೆ

2ನೇ ಮೊಣ್ಣಂಗೇರಿಯಲ್ಲಿ ₹ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಮನೆ ಮಹಾಮಳೆಗೆ ಕೊಚ್ಚಿ ಹೋಗಿತ್ತು. ಸರ್ಕಾರವು ಕಟ್ಟಿಸಿಕೊಟ್ಟಿರುವ ಮನೆ ಸುಂದರವಾಗಿದೆ. ಇನ್ಮುಂದೆ ಕೂಲಿಯಾದರೂ ಮಾಡಿ ಜೀವನ ಸಾಗಿಸುತ್ತೇವೆ ಎಂದು ಮೊಣ್ಣಂಗೇರಿ ಮುತ್ತಪ್ಪ ಹೇಳಿದ್ದಾರೆ.

ಹೆಚ್ಚುವರಿ ಕೊಠಡಿ ನಿರ್ಮಿಸಿಕೊಳ್ಳುತ್ತೇನೆ

2018ರ ಮಳೆಗಾಲದಲ್ಲಿ ನಮ್ಮ ಮನೆ ಸಂಪೂರ್ಣ ಕುಸಿದಿತ್ತು. ಈಗ ನೀಡಿರುವ ಮನೆ ಸುಂದರವಾಗಿದೆ. ಹೆಚ್ಚುವರಿ ಕೊಠಡಿ ನಿರ್ಮಿಸಿಕೊಳ್ಳುತ್ತೇನೆ ಕಾಟಕೇರಿ ನಿವಾಸಿ ಲೋಕೇಶ್ ಹೇಳುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.