ಸೋಮವಾರ, ಫೆಬ್ರವರಿ 24, 2020
19 °C
ಏಲಕ್ಕಿ ನಾಡಿಗೆ ಆತಿಥ್ಯದ ಭಾಗ್ಯ!

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ: ಮನು ಬಳಿಗಾರ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಆತಿಥ್ಯದ ಭಾಗ್ಯ’ ಏಲಕ್ಕಿ ಕಂಪಿನ ನಾಡು ಹಾವೇರಿಗೆ ಸಿಕ್ಕಿರುವುದು ಜಿಲ್ಲೆಯ ಕನ್ನಡಾಭಿಮಾನಿಗಳ ಸಂತಸವನ್ನು ನೂರ್ಮಡಿಗೊಳಿಸಿದೆ. 

ಅಖಂಡ ಧಾರವಾಡ ಜಿಲ್ಲೆಯಿಂದ 1997ರ ಆಗಸ್ಟ್‌ 24ರಂದು ಹೊರಹೊಮ್ಮಿ ಹಾವೇರಿ ಜಿಲ್ಲೆಯಾಗಿ ರೂಪುಗೊಂಡಿತು. ಹೊಸದಾಗಿ ಜನ್ಮತಳೆದ ಹಾವೇರಿ ಜಿಲ್ಲೆಗೆ ಬರೋಬ್ಬರಿ 23 ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ‘ಕನ್ನಡ ತೇರು’ ಎಳೆಯುವ ಸೌಭಾಗ್ಯ ದಕ್ಕಿದೆ. 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದುವರೆಗೂ 85 ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಚಿತ್ರದುರ್ಗದಲ್ಲಿ 2009ರಲ್ಲಿ ನಡೆದ ಸಮ್ಮೇಳನದಿಂದ ಹಾವೇರಿ ಜಿಲ್ಲೆಯಲ್ಲಿ ‘ಅಕ್ಷರ ಜಾತ್ರೆ’ ನಡೆಸಬೇಕು ಎಂಬ ಕೂಗು ಕೇಳಿಬಂದಿತ್ತು. 2014ರಲ್ಲಿ ಕೊಡಗು ಜಿಲ್ಲೆಯಲ್ಲಿ ಆಯೋಜಿಸಿದ್ದ 80ನೇ ಸಾಹಿತ್ಯ ಸಮ್ಮೇಳನದಲ್ಲಿ ಈ ಕನಕನ ಬೀಡಿಗೆ ಆತಿಥ್ಯ ವಹಿಸುವ ಸುವರ್ಣಾವಕಾಶ ದೊರಕಿತ್ತು. ಆದರೆ, ಹಾವೇರಿ ಮತ್ತು ರಾಣೆಬೆನ್ನೂರು ನಗರಗಳ ನಡುವೆ ಸ್ಥಳ ಗೊಂದಲ, ಕನ್ನಡ ಪರಿಚಾರಕರ ವೈಮನಸ್ಯದಿಂದ ‘ಆತಿಥ್ಯ’ ಕೈತಪ್ಪಿ ಹೋಗಿತ್ತು. 

ಕನ್ನಡದ ತೇರು ಎಳೆದ ಮಹನೀಯರು: ಕುಲದ ಮೂಲವೇನು ಬಲ್ಲಿರೇನಯ್ಯ? ಎಂದು ಕೇಳಿದ ಕನಕದಾಸರು, ಜೀವನದ ತತ್ವ ಮತ್ತು ಭಾವೈಕ್ಯದ ಸಂದೇಶ ಸಾರಿದ ಶಿಶುನಾಳ ಶರೀಫ, ಜನಸಮುದಾಯದ ವಿವೇಕ ತಿದ್ದಿದ ತ್ರಿಪದಿ ಕವಿ ಸರ್ವಜ್ಞ, ಕಾಯಕ ತತ್ವ ಸಾರಿದ ನಿಜಶರಣ ಅಂಬಿಗರ ಚೌಡಯ್ಯ, ಕಾದಂಬರಿ ಪಿತಾಮಹ ಗಳಗನಾಥ, ಹೆಳವನಕಟ್ಟೆ ಗಿರಿಯಮ್ಮ, ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ವಿ.ಕೃ.ಗೋಕಾಕ ಮುಂತಾದ ಜಿಲ್ಲೆಯ ದಾರ್ಶನಿಕರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ್ಯ ಕೊಡುಗೆ ನೀಡಿ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ.  

ಜಗದ ಕಣ್ಣು ತೆರೆಸಿದ ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಕವಿಗವಾಯಿ, ಜಗಕ್ಕೆ ಜೋಗುಳ ಹಾಡಿದ ಅಮ್ಮ ಗಂಗೂಬಾಯಿ ಹಾನಗಲ್‌, ಹಾನಗಲ್‌ ಕುಮಾರೇಶ್ವರ ಸ್ವಾಮೀಜಿ, ದೇಶಕ್ಕಾಗಿ ಜೀವ ಬಲಿದಾನ ಮಾಡಿದ ಮೈಲಾರ ಮಹದೇವಪ್ಪ, ತಿರಕಪ್ಪ ಮಡಿವಾಳರ, ಸಾಹಿತ್ಯ ರತ್ನ ಸು.ರಂ.ಯಕ್ಕುಂಡಿ, ಕರ್ನಾಟಕ ಏಕೀಕರಣದಲ್ಲಿ ಮಹತ್ತರ ಪಾತ್ರ ವಹಿಸಿದ ಹೊಸಮನಿ ಸಿದ್ದಪ್ಪ, ಪಾಟೀಲ ಪುಟ್ಟಪ್ಪ, ಆಧುನಿಕ ವಚನಕಾರ ಮಹಾದೇವ ಬಣಕಾರ ಮುಂತಾದ ಮಹನೀಯರು ಇದೇ ಮಣ್ಣಿನಲ್ಲಿ ಹುಟ್ಟಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಜ್ವಲಗೊಳಿಸಿದ್ದಾರೆ. 

‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎಂದೇ ಕರೆಯುವ ಹಾವೇರಿ ಜಿಲ್ಲೆ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ವೈವಿಧ್ಯಮಯ ಪ್ರವಾಸಿ ತಾಣಗಳನ್ನು ಹೊಂದಿದ್ದು, ‘ಸಾಹಿತ್ಯ ಜಾತ್ರೆ’ ನಡೆಸಲು ಜಿಲ್ಲೆಯ ಕನ್ನಡಾಭಿಮಾನಿಗಳು ಉತ್ಸುಕದಿಂದ ತುದಿಗಾಲಲ್ಲಿ ನಿಂತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು