ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಹಣ: ಬೆನ್ನತ್ತಿದ ಎನ್‌ಐಎ

ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಿ ಚಟುವಟಿಕೆ ಆತಂಕ l ಜೆಎಂಬಿ ಸಂಘಟನೆ ಉಗ್ರರಿಂದ ಎಬಿಟಿ ರಚನೆ
Last Updated 23 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಜಮಾತ್‌–ಉಲ್‌–ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಮತ್ತು ಅನ್ಸಾರುಲ್ಲಾ ಬಾಂಗ್ಲಾ (ಎಬಿಟಿ) ಉಗ್ರ ಸಂಘಟನೆಗಳಿಗೆ ಹರಿದು ಬರುತ್ತಿರುವ ಹಣದ ಮೂಲವನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ನಿರತರಾಗಿದ್ದಾರೆ.

ಜೆಎಂಬಿಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಶಂಕಿತ ಉಗ್ರರು ಈಗ ಹೊಸದಾಗಿ ಎಬಿಟಿ ಹುಟ್ಟುಹಾಕಿದ್ದಾರೆ. ಈ ಸಂಘಟನೆದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಿಕೊಂಡು ಚಟುವಟಿಕೆ ನಡೆಸುತ್ತಿರುವ ಆತಂಕಕಾರಿ ಸಂಗತಿ ತನಿಖೆಯಿಂದ ಬಯಲಿಗೆ ಬಂದಿದೆ.

ಜೆಎಂಬಿ ಸಂಘಟನೆ ಶಂಕಿತ ಉಗ್ರರು ಬೆಂಗಳೂರೂ ಸೇರಿದಂತೆ ಕೆಲವೆಡೆ ಡಕಾಯತಿ ಮಾಡಿದ್ದಾರೆ ಎಂದು ಗೊತ್ತಾಗಿದ್ದು, ದೋಚಿದ ಚಿನ್ನಾಭರಣಗಳನ್ನು ಮಾರಾಟ ಮಾಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಬಿಹಾರದ ಬೋಧಗಯಾ, ಪಶ್ಚಿಮ ಬಂಗಾಳದ ಬರ್ದ್ವಾನ್‌ ಸ್ಫೋಟ ಹಾಗೂ ಬೆಂಗಳೂರಿನ ಸೋಲದೇವನಹಳ್ಳಿ ಮನೆಯಲ್ಲಿ ಪತ್ತೆಯಾಗಿರುವ ಸ್ಫೋಟಕ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರು ನೀಡಿರುವ ಮಾಹಿತಿ ಅನುಸರಿಸಿ ಎನ್‌ಐಎ ಅಧಿಕಾರಿ
ಗಳು ಬೆಂಗಳೂರು, ಹೊಸೂರು, ಅರಕೋಣಂ, ಅಂಬೂರ್‌, ಪಾಲಕ್ಕಾಡ್‌, ಮಲಪುರಂ ಸೇರಿದಂತೆ ಅನೇಕ ಕಡೆಗಳಲ್ಲಿ ಶೋಧ ನಡೆಸಿದ್ದಾರೆ.

ಶಂಕಿತರು ಹೊಸೂರು ಸೇರಿ ವಿವಿಧೆಡೆ ಮನೆ ಬಾಡಿಗೆಗೆ ಪಡೆದಿದ್ದರು. ಸೋಲದೇವನಹಳ್ಳಿಯಲ್ಲಿ ತಯಾರಿಸಿದ್ದ ರಾಕೆಟ್‌ ಲಾಂಚರ್‌ಗಳನ್ನು ಕೃಷ್ಣಗಿರಿಯಲ್ಲಿ ಪರೀಕ್ಷಿಸಿದ್ದರು. ಬಂಧಿತರಾದ ನಜರುಲ್‌ ಇಸ್ಲಾಂ, ಜಹಿದುಲ್‌ ಇಸ್ಲಾಂನನ್ನು ಕೃಷ್ಣಗಿರಿಗೂ ಕರೆದೊಯ್ದು ಪರಿಶೀಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಎನ್‌ಐಎ ಅಧಿಕಾರಿಗಳು ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಪೊಲೀಸರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಉಗ್ರರ ನೆಲೆಗಳು ಹಾಗೂ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳ ಜೊತೆ ಎನ್‌ಐಎ ಅಧಿಕಾರಿಗಳು ಚರ್ಚೆ ನಡೆಸಿದರು. ಸೋಲದೇವನಹಳ್ಳಿ ಪ್ರಕರಣದಲ್ಲಿ ಬಂಧಿಸಲಾಗಿರುವ ಆಸಿಫ್‌ ಇಕ್ಬಾಲ್‌, ದಿಲಾವರ್‌ ಹುಸೇನ್‌, ಮುಸ್ತಾಫಿಜುರ್‌ ರೆಹಮಾನ್‌, ಆದಿಲ್‌ ಶೇಖ್‌ ಮತ್ತು ಅಬ್ದುಲ್‌ ಕರೀಂನನ್ನು ಶುಕ್ರವಾರ ಇಲ್ಲಿನ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ನಜಿರುಲ್‌ ಇಸ್ಲಾಂ ಮತ್ತು ಜಹಿದುಲ್‌ ಇಸ್ಲಾಂ ಅವರನ್ನು ತಿಂಗಳ ಹಿಂದೆಯೇ ಬೆಂಗಳೂರಿಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಲಾಯಿತು. ಈಗ ಅವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಸಿಫ್‌ ಇಕ್ಬಾಲ್‌, ದಿಲಾವರ್‌ ಹುಸೇನ್‌, ಮುಸ್ತಾಫಿಜುರ್‌ ರೆಹಮಾನ್‌, ಆದಿಲ್‌ ಶೇಖ್‌ ಮತ್ತು ಅಬ್ದುಲ್‌ ಕರೀಂ ಅವರನ್ನು 10 ದಿನಗಳ ಹಿಂದೆ ವಿವಿಧ ಜೈಲುಗಳಿಂದ ಬಾಡಿ ವಾರೆಂಟ್‌ ಪಡೆದು ಕರೆತರಲಾಗಿತ್ತು.

ಪ್ರಕರಣದ ನಾಲ್ಕನೇ ಆರೋಪಿ ಆರಿಫ್‌ ಪರಾರಿಯಾಗಿದ್ದು, ಬಾಂಗ್ಲಾದಲ್ಲಿ ತಲೆ ಮರೆಸಿಕೊಂಡಿರಬಹುದು ಎನ್ನಲಾಗಿದೆ. ಆರನೇ ಆರೋಪಿ ಖಾದರ್‌ ಖಾಜಿ, ಏಳನೇ ಆರೋಪಿ ಹಬೀಬುರ್‌ ರೆಹಮಾನ್‌ ತಿಹಾರ್‌ ಜೈಲಿನಲ್ಲಿದ್ದಾರೆ.

ಶೇಖ್‌ ಬಂಧನ ಅವಧಿ ವಿಸ್ತರಣೆ

ಸೋಲದೇವನಹಳ್ಳಿ ಮನೆಯಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ನಾಜೀರ್‌ ಶೇಖ್‌ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೂ 90 ದಿನಗಳ ಕಾಲ ವಿಸ್ತರಿಸಲಾಗಿದೆ.

ಸಾಮಾನ್ಯ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಿದ 90 ದಿನದೊಳಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆದರೆ, ಎನ್‌ಐಎ ಪ್ರಕರಣದಲ್ಲಿ 180 ದಿನಗಳವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ. ಈ ಪ್ರಕರಣದ ತನಿಖೆ ಇನ್ನೂ ನಡೆಯಬೇಕಿರುವುದರಿಂದ ಬಂಧನ ಅವಧಿಯನ್ನು ವಿಸ್ತರಿಸುವಂತೆ ಎನ್‌ಐಎ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಎನ್‌ಐಎ ಕೋರ್ಟ್‌ ಮಾನ್ಯ ಮಾಡಿತು.

ಅಲ್ಲದೆ, ಮನೆಯಲ್ಲಿ ವಶಪಡಿಸಿಕೊಳ್ಳಲಾದ ಬಾಂಬ್ ತಯಾರಿಕೆ ಸೂತ್ರವಿದೆ ಎನ್ನಲಾದ ಹಸ್ತಪ್ರತಿ ಬಾಂಗ್ಲಾ ಭಾಷೆಯಲ್ಲಿದ್ದು, ಆರೋಪಿಗಳ ಹಸ್ತಾಕ್ಷರ ಮಾದರಿ ಪರೀಕ್ಷೆಗೂ ಕೋರ್ಟ್‌ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ. ಎನ್‌ಐಎ ಪರವಾಗಿ ಪಿ. ಪ್ರಸನ್ನ ಕುಮಾರ್‌ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT