ಶುಕ್ರವಾರ, ಡಿಸೆಂಬರ್ 6, 2019
20 °C

ವಿಜಯದಶಮಿಯಿಂದ ತಂತ್ರಜ್ಞಾನಾಧಾರಿತ ತೆರಿಗೆ ಪ್ರಕ್ರಿಯೆ ಜಾರಿಗೆ: ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತೆರಿಗೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಇನ್ನು ಮುಂದೆ ತಂತ್ರಜ್ಞಾನ ಆಧಾರಿತವಾಗಿಯೇ ನಡೆಯಲಿದ್ದು, ಈ ವ್ಯವಸ್ಥೆ ವಿಜಯದಶಮಿಯಿಂದ ಪೂರ್ಣಪ್ರಮಾಣದಲ್ಲಿ ಜಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ತೆರಿಗೆ ಇಲಾಖೆಯಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಲಾಗುವುದು. ಎಲ್ಲ ರೀತಿಯ ತೆರಿಗೆ ವಿವರಗಳ ಪರಿಶೀಲನೆ ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ನಡೆಯಲಿದೆ. ಇದರಿಂದ‌ ತೆರಿಗೆ ಅಧಿಕಾರಿ ಮತ್ತು ತೆರಿಗೆದಾರರು ಮುಖತಃ ಭೇಟಿಯಾಗುವ ಅಗತ್ಯವಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೆರಿಗೆದಾರರು, ವರ್ತಕರು  ಹಾಗೂ ಉದ್ದಿಮೆದಾರರಲ್ಲಿ ಯಾವುದೇ ಗೊಂದಲ, ಅನುಮಾನಗಳು ಇದ್ದರೆ ಎಸ್‌ಎಂಎಸ್‌, ಇ–ಮೇಲ್‌ ಅಥವಾ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಸಂವಹನ ನಡೆಸಿ, ಅದನ್ನು ಬಗೆಹರಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

ತೆರಿಗೆ ಸಂಗ್ರಹ ಗುರಿ ಸಾಧ್ಯ: ಈ ಬಾರಿಯ ಬಜೆಟ್‌ನಲ್ಲಿ ನಿಗದಿಪಡಿಸಿದ ನೇರ ತೆರಿಗೆ ಸಂಗ್ರಹ ಗುರಿ ಅಸಾಧ್ಯವಾದುದೇನೂ ಅಲ್ಲ. ಹಣಕಾಸು ಸಚಿವಾಲಯ ಸಾಕಷ್ಟು ಸಮಾಲೋಚನೆ ನಡೆಸಿ ಗುರಿ ನಿಗದಿಪಡಿಸಿದೆ. ತೆರಿಗೆ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಈ ಗುರಿ ಈಡೇರಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.

ಸರಣಿ ಸಭೆ: ‘ವ್ಯಾಪಾರ, ಕೈಗಾರಿಕೆ ಮತ್ತು ಉದ್ಯಮದ ವಿವಿಧ ವಲಯಗಳ ಪ್ರತಿನಿಧಿಗಳ ಜತೆ ಸರಣಿ ಸಭೆಗಳನ್ನು ನಡೆಸುತ್ತಿದ್ದೇನೆ. ಅಹಮದಾಬಾದ್‌ ಮತ್ತು ವಾರಾಣಸಿ ಬಳಿಕ ಮೂರನೇ ಸಭೆಯನ್ನು ಮೈಸೂರಿನಲ್ಲಿ ನಡೆಸುತ್ತಿದ್ದು, ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ವಾಣಿಜ್ಯೋದ್ಯಮ ಸಂಘಟನೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆದಿದೆ’ ಎಂದು ತಿಳಿಸಿದರು. ಎಂದು ತಿಳಿಸಿದರು.

ಎಲ್ಲೆಡೆ ಆರ್ಥಿಕ ಹಿಂಜರಿತ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಆರ್ಥಿಕ ಹಿಂಜರಿತ ಜಗತ್ತಿನ ಹಲವು ದೇಶಗಳನ್ನು ಕಾಡುತ್ತಿದೆ. ಚೀನಾದಲ್ಲೂ ವಿವಿಧ ಉತ್ಪನ್ನಗಳ ಮಾರಾಟ ಇಳಿ ಮುಖವಾಗಿದೆ. ಯೂರೋಪ್ ಮತ್ತು ದಕ್ಷಿಣ ಅಮೆರಿಕದ ದೇಶಗಳೂ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿವೆ’ ಎಂದರು.

ಕೇಂದ್ರ ತಂಡದ ಭೇಟಿ ಬಳಿಕ ಪರಿಹಾರ
‘ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಾನು ಅವಲೋಕಿಸಿದ್ದೇನೆ. ಕೇಂದ್ರದ ನಿಯೋಗವು ಪ್ರವಾಹದಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲಿದೆ. ಆ ಬಳಿಕ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಲಿದೆ’ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

‘ಕಾಂಗ್ರೆಸ್ ಕಾನೂನನ್ನು ಗೌರವಿಸಲಿ’
‘ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ ಪಕ್ಷ ಕಾನೂನನ್ನು ಗೌರವಿಸಲಿ. ತನಿಖಾ ಸಂಸ್ಥೆಗಳ ಜತೆ ಸಹಕರಿಸುವುದನ್ನು ಕಲಿಯಲಿ. ಜವಾಬ್ದಾರಿಯುತ ಪಕ್ಷವಾಗಿ ವರ್ತಿಸಲಿ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಹೇಳಿದರು. ಪಿ.ಚಿದಂಬರಂ ಅವರ ವಿಷಯದಲ್ಲಿ ಬಿಜೆಪಿಯು ‘ದ್ವೇಷ ರಾಜಕಾರಣ’ ಮಾಡುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಅವರು ತಿರುಗೇಟು ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು