ಬುಧವಾರ, ಏಪ್ರಿಲ್ 1, 2020
19 °C
ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಪ್ರಸ್ತಾಪ

ಕೈಕೊಟ್ಟ ಕೇಂದ್ರ, ರಾಜ್ಯಕ್ಕೆ ಆರ್ಥಿಕ ಆಘಾತ: ಎರಡು ವರ್ಷಗಳಲ್ಲಿಅಭಿವೃದ್ಧಿ ಬಂದ್

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇನ್ನೆರಡು ವರ್ಷಗಳಲ್ಲಿ, ರಾಜ್ಯದಲ್ಲಿ ಸಂಗ್ರಹವಾಗುವ ಸಂಪನ್ಮೂಲದಿಂದ ಸಚಿವರು, ಶಾಸಕರು, ನೌಕರರ ವೇತನ, ಆಡಳಿತ ವೆಚ್ಚ ಹಾಗೂ ಸಹಾಯಧನಗಳನ್ನು ಮಾತ್ರ ನೀಡಲು ಸಾಧ್ಯವಾಗಲಿದ್ದು, ರಾಜ್ಯದ ಅಭಿವೃದ್ಧಿಗೆ ಗರ ಬಡಿಯಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೇ 5ರಂದು ವಿಧಾನಮಂಡಲದಲ್ಲಿ ಮಂಡಿಸಿರುವ ‘ಮಧ್ಯಮಾವಧಿ ವಿತ್ತೀಯ ಯೋಜನೆ; 2020–24’ರಲ್ಲಿ ಇಂತಹ ಮುನ್ಸೂಚನೆಯೊಂದನ್ನು ಸರ್ಕಾರವೇ ನೀಡಿದೆ.

2017ರಲ್ಲಿ ಜಿಎಸ್‌ಟಿ ಜಾರಿಮಾಡಿದಾಗ ರಾಜ್ಯದ ಪಾಲು ಹಾಗೂ ಮುಂದಿನ ಐದು ವರ್ಷ ಜಿಎಸ್‌ಟಿ ನಷ್ಟ ಪರಿಹಾರ ಕೊಡುವುದಾಗಿ ಕೇಂದ್ರ ಸರ್ಕಾರ ವಾಗ್ದಾನ ಮಾಡಿತ್ತು. ಆದರೆ, ಜಿಎಸ್‌ಟಿ ಪಾಲು ಹಾಗೂ ಪರಿಹಾರ ಮೊತ್ತದಲ್ಲಿ ಕಡಿತ ಮಾಡಲು 2019ರಿಂದಲೇ ಕೇಂದ್ರ ಆರಂಭಿಸಿದೆ. 2020–21ರಲ್ಲಿ ಜಿಎಸ್‌ಟಿ ಪಾಲಿನಲ್ಲಿ ₹11,215 ಕೋಟಿ ಕಡಿತವಾಗಲಿದೆ ಎಂಬ ಸೂಚನೆಯನ್ನು ಕೇಂದ್ರ ಈಗಾಗಲೇ ರವಾನಿಸಿದೆ. 

2022ರಿಂದ ಜಿಎಸ್‌ಟಿ ಪರಿಹಾರ ಮೊತ್ತ ಸಂಪೂರ್ಣ ನಿಲ್ಲಲಿದೆ. ಹೀಗಾದಲ್ಲಿ, ನೀರಾವರಿ ಯೋಜನೆಗಳು, ರಸ್ತೆ, ಶಾಲೆ, ಕಟ್ಟಡಗಳು, ಸೇತುವೆ, ಕೈಗಾರಿಕೆಗಳಿಗೆ ಬೇಕಾದ ಮೂಲಸೌಕರ್ಯ ಕಲ್ಪಿಸಲು ಅನುದಾನದ ಕೊರತೆಯನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ. ‘ರಾಜಸ್ವ ಹೆಚ್ಚುವರಿಯು ಅಲ್ಪ ಮೊತ್ತವಾಗಿದ್ದು, ಬಂಡವಾಳ ವೆಚ್ಚಕ್ಕಾಗಿ ಸಾಲವನ್ನು ಅವಲಂಬಿಸಬೇಕಾಗುತ್ತದೆ’ (ಪುಟ–14) ಎಂದು ವಿತ್ತೀಯ ಯೋಜನೆ ಪ್ರತಿಪಾದಿಸಿದೆ.

ಬಂಡವಾಳ ವೆಚ್ಚ ಇಳಿಕೆ: ರಾಜ್ಯ ಸರ್ಕಾರವು ಮಾಡುವ ವೆಚ್ಚದಲ್ಲಿ ರಾಜಸ್ವ ಹಾಗೂ ಬಂಡವಾಳ ವೆಚ್ಚ ಎಂಬ ಎರಡು ವಿಧಗಳಿವೆ. ರಾಜಸ್ವ ಎಂದರೆ ಸರ್ಕಾರ ನಡೆಸಲು, ಸಂಬಳ–ಸಾರಿಗೆ ಕೊಡಲು, ಜನರ ಅಭಿವೃದ್ಧಿ ಉದ್ದೇಶದ ಯೋಜನೆಗಳಿಗೆ ಮಾಡುವ ವೆಚ್ಚ. ಬಂಡವಾಳ ವೆಚ್ಚವೆಂದರೆ ರಾಜ್ಯದ ಪ್ರಗತಿಗೆ ನೆರವಾಗುವ ದೀರ್ಘಕಾಲದ ದೂರದೃಷ್ಟಿಯಿಟ್ಟುಕೊಂಡು ಮಾಡುವ ವೆಚ್ಚ. ನೀರಾವರಿ, ಮೂಲಸೌಕರ್ಯದಂತಹ ಯೋಜನೆಗಳು ಇದರಲ್ಲಿ ಸೇರುತ್ತವೆ.
 

ರಾಜಸ್ವ/ಆಡಳಿತ ವೆಚ್ಚವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುವುದು ಅಥವಾ ಯಥಾಸ್ಥಿತಿಯಲ್ಲಿರುವುದು ಹಾಗೂ ಬಂಡವಾಳ ವೆಚ್ಚವು ಏರುಗತಿಯಲ್ಲಿ ಸಾಗಿದರೆ ಉತ್ತಮ ಆಡಳಿತ ಸಾಧ್ಯವಾಗುತ್ತದೆ ಹಾಗೂ ಆರ್ಥಿಕ ಶಿಸ್ತಿನ ಪಾಲನೆಯಾಗುತ್ತಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಮಧ್ಯಮಾವಧಿ ವಿತ್ತೀಯ ಯೋಜನೆ ಅನುಸಾರ 2021–22ರವರೆಗೆ ಈ ಮೊತ್ತ ಹೆಚ್ಚುತ್ತಾ ಹೋಗಲಿದೆ. ಈ ವರ್ಷ ₹42,512 ಕೋಟಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಬಾಬ್ತಿಗೆ ಮೀಸಲಿಟ್ಟಿದ್ದಾರೆ. 2021–22ರಲ್ಲಿ (ಮುಂದಿನ ವರ್ಷ) ಈ ಮೊತ್ತ ₹59,645 ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, 2022ರ ಏಪ್ರಿಲ್‌ನಿಂದ ಶುರುವಾಗುವ ಆರ್ಥಿಕ ವರ್ಷದಲ್ಲಿ ಈ ಮೊತ್ತ ಏರುಗತಿ ಕಾಣುವ ಬದಲು ದಿಢೀರನೇ ಇಳಿಕೆಯತ್ತ ಸಾಗಲಿದೆ. ಆ ವರ್ಷ ಈ ಮೊತ್ತ ₹35,410 ಕೋಟಿಗೆ, ಅದರ ಮುಂದಿನ ವರ್ಷ ₹26,038ಕ್ಕೆ ಕುಸಿಯಲಿದೆ ಎಂದು ವಿತ್ತೀಯ ಯೋಜನೆ ಅಂದಾಜು ಮಾಡಿದೆ. 

2019–20ರಲ್ಲಿ ₹42,584 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕೃತ ಅಂದಾಜಿನ ಪ್ರಕಾರ ಈ ಮೊತ್ತ ₹39,380 ಕೋಟಿ. ಅಂದರೆ, ₹3,204 ಕೋಟಿ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷ ₹46,512 ಕೋಟಿ ಎಂದು ಯಡಿಯೂರಪ್ಪ ಬಜೆಟ್‌ನಲ್ಲಿ ಹೇಳಿದ್ದಾರೆ. ಆದರೆ, ಕೇಂದ್ರದ ಅನುದಾನ ಕೈಕೊಟ್ಟರೆ ಅದು ಕೂಡ ಇಳಿಕೆಯಾಗಲಿದೆ.

ಪ್ರಗತಿ ಕುಂಠಿತ: ಕಳೆದ ಐದು ವರ್ಷದಲ್ಲಿ ರಾಜ್ಯದ ಸಂಪನ್ಮೂಲ ಸಂಗ್ರಹದ ಪ್ರಮಾಣ ಕೂಡ ಇಳಿಕೆಯತ್ತಲೇ ಸಾಗಿದೆ. 2018–19ನೇ ವರ್ಷಕ್ಕೆ ಹೋಲಿಸಿದರೆ, ಮೋಟಾರು ವಾಹನ ತೆರಿಗೆ ಸಂಗ್ರಹ ಪ್ರಮಾಣ ಏರಿಕೆ ಕಂಡಿದೆ. ಆದರೆ, 2017–18ಕ್ಕೆ ಹೋಲಿಸಿದರೆ ಶೇ 3ರಷ್ಟು ಕುಸಿತ ದಾಖಲಿಸಿದೆ.

ಬದ್ಧವೆಚ್ಚ ಹೆಚ್ಚಳ: ಸರ್ಕಾರವೊಂದು ಮಾಡಲೇಬೇಕಾದ ವೆಚ್ಚ ಇಳಿಕೆಯಾಗಬೇಕು. ಅಂದರೆ ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಅಲ್ಪ ಪ್ರಮಾಣದ ಹಣವಾದರೂ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗುವಂತಿರಬೇಕು. ಕಳೆದ ಐದು ವರ್ಷದ ಕೋಷ್ಟಕ ನೋಡಿದರೆ ಆದಾಯದಲ್ಲಿ ಹೆಚ್ಚಿನ ಪ್ರಮಾಣ ಬದ್ಧವೆಚ್ಚಕ್ಕೆ ಹೋಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಆರಂಭದ ವರ್ಷದಲ್ಲಿ ಶೇ88ರ ಪ್ರಮಾಣಕ್ಕೆ ಹೋಗಿತ್ತು. ಬಳಿಕ ಇಳಿಕೆಯತ್ತ ಸಾಗಿ, 2016ರಲ್ಲಿ ಶೇ 78ಕ್ಕೆ ಇಳಿದಿತ್ತು. ಕಳೆದ ಮೂರು ವರ್ಷದಲ್ಲಿ ಈ ಪ್ರಮಾಣ ಏರಿಕೆಯತ್ತ ಸಾಗಿ, 2020ರಲ್ಲಿ ಇದು ಶೇ 90 ಮುಟ್ಟಬಹುದು ಎಂದು ಅಂದಾಜಿಸಲಾಗಿದೆ.

ಹೊರಗುತ್ತಿಗೆ ಭಾರ!
ರಾಜ್ಯ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ಕೈಬಿಟ್ಟು ಎಲ್ಲ ಕಚೇರಿಗಳಲ್ಲೂ ಹೊರಗುತ್ತಿಗೆ ಅಥವಾ ಬಾಹ್ಯ ಮೂಲದಿಂದ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ಚಾಲ್ತಿಗೆ ತಂದಿದೆ. ವರ್ಷದಿಂದ ವರ್ಷಕ್ಕೆ ಈ ಸಿಬ್ಬಂದಿಗೆ ಮಾಡುವ ವೆಚ್ಚದ ಪ್ರಮಾಣ ಹೆಚ್ಚುತ್ತಿರುವು
ದನ್ನು ಮಧ್ಯಮಾವಧಿ ವಿತ್ತೀಯ ಯೋಜನೆ ವಿವರಿಸಿದೆ. 2017ರಲ್ಲಿ ಈ ಮೊತ್ತ ₹452 ಕೋಟಿ ಇದ್ದರೆ, 2018ರಲ್ಲಿ ₹571 ಕೋಟಿ, 2019ರಲ್ಲಿ ₹845 ಕೋಟಿಗೆ ಏರಿಕೆಯಾಗಿದೆ. ಆದರೆ, ದಿನಗೂಲಿ ನೌಕರರ ವೇತನಕ್ಕೆ ನೀಡುತ್ತಿದ್ದ ಮೊತ್ತ ಇದೇ ವರ್ಷಗಳಲ್ಲಿ ಕ್ರಮವಾಗಿ ₹110 ಕೋಟಿಯಿಂದ 2018ರಲ್ಲಿ ₹138 ಕೋಟಿಗೆ ಏರಿಕೆಯಾಗಿದೆ. 2019ರಲ್ಲಿ ಇದು ₹189 ಕೋಟಿಗೆ ಮುಟ್ಟಿದೆ. ದಿನಗೂಲಿ ಬದಲು ಹೊರಗುತ್ತಿಗೆಯವರನ್ನು ನೆಚ್ಚಿಕೊಂಡಿದ್ದು ಇದಕ್ಕೆ ಕಾರಣ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು