ಕಡತಕ್ಕೆ ಸಹಿ ಹಾಕದ ಡಿಕೆಶಿ: ಸಿಗದ ಅನುದಾನ

ಭಾನುವಾರ, ಮಾರ್ಚ್ 24, 2019
28 °C
ಬಿಡುಗಡೆಯಾಗದ ₹13 ಕೋಟಿ: 25 ಸಾವಿರಕ್ಕೂ ಹೆಚ್ಚು ಕಲಾವಿದರ ಆತಂಕ

ಕಡತಕ್ಕೆ ಸಹಿ ಹಾಕದ ಡಿಕೆಶಿ: ಸಿಗದ ಅನುದಾನ

Published:
Updated:

ಬೆಂಗಳೂರು: ಆರ್ಥಿಕ ವರ್ಷ ಕೊನೆಗೊಳ್ಳುವ ದಿನ ಹತ್ತಿರ ಬಂದರೂ ಸಾಹಿತ್ಯ, ಕಲೆ, ಸಂಸ್ಕೃತಿಯ ಪರಿಚಾರಿಕೆ ಮಾಡುವ ಸಂಘಟನೆಗಳಿಗೆ ಅನುದಾನ ಬಿಡುಗಡೆ ಮಾಡುವ ಕಡತಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಸಹಿ ಹಾಕದೇ ಸತಾಯಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. 

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದರೆ ಈ ವರ್ಷದ ಅನುದಾನ ‘ಹರೋಹರ’ವಾಗಲಿದೆ. ಒಂದೆರಡು ದಿನಗಳಲ್ಲಿ ಕಡತಕ್ಕೆ ಅನುಮೋದನೆ ನೀಡದೇ ಇದ್ದರೆ 2018–19 ನೇ ಸಾಲಿನಲ್ಲಿ ‘ಕನ್ನಡ ಸಂಸ್ಕೃತಿ ಅನುದಾನ ಯೋಜನೆ’ಗೆ  ಮೀಸಲಿಟ್ಟ ಅನುದಾನ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಅದು ಇಲಾಖೆಯಿಂದ ಸರ್ಕಾರಕ್ಕೆ ವಾಪಸು ಹೋಗಲಿದೆ ಎಂಬ ಆತಂಕ ಸಾಂಸ್ಕೃತಿಕ ವಲಯದಲ್ಲಿ ಮೂಡಿದೆ.

ಅನುದಾನಕ್ಕಾಗಿ ಬಂದಿದ್ದ 6,000 ಅರ್ಜಿಗಳಲ್ಲಿ 2,500 ಅರ್ಜಿಗಳನ್ನು ಅಂತಿಮಗೊಳಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪಟ್ಟಿಯನ್ನು ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸಲ್ಲಿಸಿದೆ. ಈ ಸಾಲಿಗೆ ರಾಜ್ಯ ಸರ್ಕಾರ ₹ 13 ಕೋಟಿ ಅನುದಾನ ಬಿಡುಗಡೆ ಮಾಡಬೇಕಿದೆ. ಇದರಿಂದ 25 ಸಾವಿರಕ್ಕೂ
ಹೆಚ್ಚು ಕಲಾವಿದರಿಗೆ ಅನುಕೂಲವಾಗಲಿದೆ. ಸಂಸ್ಕೃತಿ ಸಚಿವರ ಧೋರಣೆಯಿಂದಾಗಿ ಕನ್ನಡದ ಕೆಲಸ ನಡೆಸುವವರು ಪರಿತಾಪಪಡಬೇಕಾಗಿದೆ ಎಂಬ ದೂರು ಕೇಳಿಬಂದಿದೆ.

ಸಂಗೀತ, ನಾಟಕ, ನೃತ್ಯ, ಶಿಲ್ಪಕಲೆ, ಯಕ್ಷಗಾನ ಕಲೆಗಳಿಗೆ ಸಂಬಂಧಿಸಿದಂತೆ ಪ್ರಖ್ಯಾತ ಸಂಘ ಸಂಸ್ಥೆಗಳು ಕಳೆದ 10 ವರ್ಷಗಳಿಂದಲೂ ಅನುದಾನ ಪಡೆಯುತ್ತಲೇ ಬಂದಿವೆ. ಸಾಂಸ್ಕೃತಿಕ ಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಈ ಅನುದಾನ ಆಸರೆಯಾಗಿದೆ. ಅಲ್ಲದೆ, ಇದರ ನೆರವಿನಿಂದ ಮುಂದಿನ ವರ್ಷದ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತಿದೆ. 

ಅನುದಾನಕ್ಕಾಗಿ ಬಂದ ಅರ್ಜಿಗಳಲ್ಲಿ ಶೇ 10 ರಷ್ಟು ಬೋಗಸ್‌ ಇರಬಹುದು. ಆದರೆ, ಉಳಿದ ಶೇ 80 ರಿಂದ ಶೇ 90 ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ನೈಜ ಸಂಸ್ಥೆಗಳು. ಬೋಗಸ್‌ ಸಂಸ್ಥೆಗಳೂ ತೂರಿವೆ ಎಂಬ ಕಾರಣಕ್ಕೆ ನೀನಾಸಂ, ಗಾಯನ ಸಮಾಜ, ರಾಮಸೇವಾ ಮಂಡಳಿ, ನಟನಾ, ಜಾನಪದ ಲೋಕದಂತಹ ಸಂಸ್ಥೆಗಳಿಗೆ ಶಿಕ್ಷೆ ಏಕೆ ಪ್ರಶ್ನೆ ಸಾಂಸ್ಕೃತಿಕ ವಲಯದ್ದು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡುವ ಸಂಬಂಧ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸುತ್ತದೆ. ವಿವಿಧ ಅಕಾಡೆಮಿಗಳ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿ ಅರ್ಜಿಗಳನ್ನು
ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಅಂತಿಮಪಟ್ಟಿ ತಯಾರಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯೇ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಇಲಾಖೆ ನಿರ್ದೇಶಕರೂ ಸಮಿತಿಯಲ್ಲಿ ಇರುತ್ತಾರೆ. ಇವರಿಂದ ಒಪ್ಪಿಗೆ ಪಡೆದ ಬಳಿಕವೇ ಕಡತ ಸರ್ಕಾರಕ್ಕೆ ಹೋಗುತ್ತದೆ’ ಎಂದು ಪ್ರಕ್ರಿಯೆ ಕುರಿತು ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಮುಚ್ಚಳಿಕೆ ಬರೆಸಿಕೊಳ್ಳಲಿ: ಸರ್ಕಾರ ನೀಡುವ ಹಣದ ಬಳಕೆಯ ಬಗ್ಗೆ ಅನುದಾನ ಪಡೆಯುವ ಸಂಘ– ಸಂಸ್ಥೆಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಿ. ಸರ್ಕಾರ ನೀಡಿದ ಹಣ ಸಮರ್ಪಕವಾಗಿ ಬಳಕೆ ಆಗದೇ ಇದ್ದರೆ ಅಥವಾ ಬೋಗಸ್‌ ಸಂಸ್ಥೆ ಎಂದು ಕಂಡು ಬಂದರೆ ಹಣ ವಾಪಸ್‌ ಮಾಡಬೇಕು ಎಂಬ ಷರತ್ತು ವಿಧಿಸಲಿ ಎಂದು ರಂಗ ಕರ್ಮಿ ಜಿ.ಕಪ್ಪಣ್ಣ ತಿಳಿಸಿದರು.

‘ನೈಜ ಸಂಸ್ಥೆ, ಕಲಾವಿದರಿಗೆ ಹಣ ಸಿಗುತ್ತದೆ’

‘ನೈಜ ಸಂಸ್ಥೆಗಳು, ಕಲಾವಿದರಿಗೆ ಮೋಸ ಆಗುವುದಿಲ್ಲ. ಸರ್ಕಾರದ ಅನುದಾನ ಸಿಗುತ್ತದೆ. ಅನುದಾನದ ಹಣವನ್ನು ಪ್ರತ್ಯೇಕ ಶೀರ್ಷಿಕೆಯಡಿ ಇಡುತ್ತವೆ. ವಾಪಸ್‌ ಹೋಗದಂತೆ ನೋಡಿಕೊಳ್ಳುತ್ತೇನೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

‘ಕೆಲವು ಲೆಟರ್‌ಹೆಡ್‌ ಸಂಸ್ಥೆಗಳು ಸಚಿವರು, ಶಾಸಕರಿಂದ ಪತ್ರ ಬರೆಸಿಕೊಂಡು ಈ ಹಿಂದೆ ಹಣ ಬಿಡುಗಡೆ ಮಾಡಿಸಿಕೊಂಡಿವೆ. ಇವು ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಿಲ್ಲ. ಕೆಲವರು ಬರ್ತ್‌ಡೇ ಹೆಸರಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಮತ್ತೆ ಕೆಲವು ಸಂಘಟನೆಗಳು ₹50 ಲಕ್ಷದಿಂದ ₹1 ಕೋಟಿ ವರೆಗೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಬಿಲ್‌ ಕೂಡಾ ಕೊಟ್ಟಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರುಗಳು ಸಲ್ಲಿಕೆಯಾಗಿವೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದೇ ನನ್ನ ಉದ್ದೇಶ’ ಎಂದರು.

‘ಚುನಾವಣೆಗೂ ಅನುದಾನ ಬಿಡುಗಡೆಗೂ ಸಂಬಂಧ ಇಲ್ಲ. ಹಣ ಲ್ಯಾಪ್ಸ್‌ ಆಗುವುದಿಲ್ಲ. ಸರ್ಕಾರ ಬಿಡುಗಡೆ ಮಾಡುವ ಅನುದಾನ ಸತ್ಪಾತ್ರರಿಗೆ ಸಿಗಬೇಕು. ಸರ್ಕಾರದ ಹಣ ಬಿಡುಗಡೆ ಪಾರದರ್ಶಕವಾಗಿರಲಿದೆ’ ಎಂದು ಶಿವಕುಮಾರ್‌ ಹೇಳಿದರು.

***

ಕನ್ನಡದ ಕೆಲಸ ಮಾಡುತ್ತಿರುವವರಿಗೆ ಅನುದಾನ ಕೊಡಿಸುವುದು ನನ್ನ ಜವಾಬ್ದಾರಿ. ಇದರ ನೆಪದಲ್ಲಿ ಬ್ಲಾಕ್‌ಮೇಲ್‌ ಮಾಡಲು ಮುಂದಾದರೆ ಜಗ್ಗುವುದಿಲ್ಲ 

–ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !