ಗುರುವಾರ , ನವೆಂಬರ್ 14, 2019
27 °C

ಕಾಫಿ ಡೇ ಸಿದ್ದಾರ್ಥಗೆ ಕಿರುಕುಳ ಕೊಟ್ಟಿಲ್ಲ: ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ

Published:
Updated:

ಬೆಂಗಳೂರು: ‘ಕೆಫೆ ಕಾಫಿ ಡೇ ಕಂಪನಿಯ ಮಾಲೀಕ ಸಿದ್ದಾರ್ಥ ಹೆಗಡೆ ಅವರ ಆಸ್ತಿ ತಪಾಸಣೆ ನಡೆಸಿ ದಂಡ ವಿಧಿಸಿದ್ದು ನಿಜ. ಆದರೆ ಯಾವುದೇ ಕಿರುಕುಳ ನೀಡಿಲ್ಲ’ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿವೆ.

ಇದನ್ನೂ ಓದಿ: ಆರ್ಥಿಕ ಮುಗ್ಗಟ್ಟಿನಿಂದ ಎಸ್‌.ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ಆತ್ಮಹತ್ಯೆ?

‘ಸಿದ್ದಾರ್ಥ ಅವರು ದೊಡ್ಡಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಸಿದ್ದಾರ್ಥ ಅವರು ಘೋಷಿಸಿಕೊಂಡಿದ್ದ ಆಸ್ತಿಯ ಒಟ್ಟು ಮೊತ್ತ ಮತ್ತು ನಾವು ವಿಧಿಸಿದ್ದ ದಂಡದ ಮೊತ್ತವನ್ನು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ. ಆದರೆ ಸಿದ್ದಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖಿಸಿರುವಂತೆ ಆದಾಯ ತೆರಿಗೆ ಇಲಾಖೆ ಯಾವುದೇ ಕಿರುಕುಳ ನೀಡಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಆದಾಯ ತೆರಿಗೆ ಇಲಾಖೆಯ ಉನ್ನತ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ದಾರಿಯುದ್ದಕ್ಕೂ 'ಕ್ಷಮಿಸಿ' ಎನ್ನುತ್ತಿದ್ದ ಸಿದ್ದಾರ್ಥ್

‘ಈ ಪತ್ರವನ್ನು ನಿಜವಾಗಿಯೂ ಅವರೇ ಬರೆದಿದ್ದ ಎನ್ನುವ ಬಗ್ಗೆ ತನಿಖೆ ನಡೆಯಬೇಕಿದೆ. ಅವರ ಸಹಿ ತಾಳೆಯಾಗುತ್ತಾ ಪರಿಶೀಲಿಸಬೇಕು. ನಂತರವಷ್ಟೇ ನಾವು ಅಧಿಕೃತ ಪ್ರತಿಕ್ರಿಯೆ ನೀಡಲು ಸಾಧ್ಯ’ ಎಂದು ಅವರು ಹೇಳಿದರು.

‘ಮೈಂಡ್‌ಟ್ರೀ ವಹಿವಾಟಿನಲ್ಲಿ ಅಕ್ರಮ ನಡೆದಿರುವ ಸಂಬಂಧ ಆ ಷೇರುಗಳನ್ನು ಜಪ್ತಿ ಮಾಡಿದ್ದೆವು. ಅವರು ಮೈಂಡ್‌ಟ್ರೀ ಷೇರುಗಳನ್ನು ಮಾರಬೇಕು ಎಂದಾಗ ಅದನ್ನು ಬಿಡುಗಡೆ ಮಾಡಿ, ಅವರು ಸೂಚಿಸಿದ ಬೇರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡೆವು ಕಾನೂನಿನ ವ್ಯಾಪ್ತಿಯಲ್ಲಿ ಆದಾಯ ತೆರಿಗೆ ಇಲಾಖೆಯು ಸಿದ್ದಾರ್ಥ ಅವರಿಗೆ ಎಲ್ಲ ರೀತಿಯಲ್ಲಿಯೂ ಸಹಕರಿಸಿತ್ತು’ ಎಂದು ಅಧಿಕಾರಿ ನುಡಿದರು.

ಇದನ್ನೂ ಓದಿ: ಹಾಸನ, ಚಿಕ್ಕಮಗಳೂರಿನ ಕಾಫಿ ಡೇ ಗ್ಲೊಬಲ್ ಲಿಮಿಟೆಡ್‌ ಬಂದ್

ಪ್ರತಿಕ್ರಿಯಿಸಿ (+)