ನಾಮಪತ್ರ ಸಲ್ಲಿಸಿದ ದೇವೇಗೌಡ, ಮುದ್ದಹನುಮೇಗೌಡ

ಗುರುವಾರ , ಏಪ್ರಿಲ್ 25, 2019
33 °C

ನಾಮಪತ್ರ ಸಲ್ಲಿಸಿದ ದೇವೇಗೌಡ, ಮುದ್ದಹನುಮೇಗೌಡ

Published:
Updated:
Prajavani

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್‌ನ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಜೆಡಿಎಸ್ ಮುಖಂಡ ಡಿ.ನಾಗರಾಜಯ್ಯ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬಿಜಿಎಸ್ ವೃತ್ತದಿಂದ ಕಾಂಗ್ರೆಸ್ ಬಾವುಟ, ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸಿದರು.

‘ಯಾರನ್ನೊ ಮೆಚ್ಚಿಸಲು ಹಾಲಿ ಸಂಸದನಾದ ನನಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿದರೆ ಸಹಿಸಲು ಆಗುವುದಿಲ್ಲ. ಹೀಗಾಗಿ, ನಾನು ಸ್ಪರ್ಧಿಸಿದ್ದು, ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲ್ಲ’ ಎಂದು ಬೆಂಬಲಿಗರ ನಡುವೆ ಘೋಷಣೆ ಕೂಗಿದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ‘ಮುದ್ದಹನುಮೇಗೌಡರಿಗೆ ಯಾಕೆ ಟಿಕೆಟ್ ತಪ್ಪಿಸಲಾಯಿತು ಎಂಬುದಕ್ಕೆ ಪಕ್ಷದ ವರಿಷ್ಠರ ಕಾರಣ ಹೇಳಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಪಕ್ಷ ಉಳಿಸಲು ನಾನು ಮತ್ತು ಮುದ್ದಹನುಮೇಗೌಡ ಹೋರಾಟ ಮಾಡುತ್ತೇವೆ’ ಎಂದರು.

ಮಧ್ಯಾಹ್ನ 1.30ಕ್ಕೆ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಿಂದ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ನಾಮಪತ್ರ ಸಲ್ಲಿಸಲು ಹೊರಟರು. ಎಂ.ಜಿ. ರಸ್ತೆಗೆ ಬರುತ್ತಿದ್ದಂತೆಯೇ ಮಧ್ಯಾಹ್ನ 2 ಗಂಟೆಯಾಗಿದ್ದರಿಂದ ಮೆರವಣಿಗೆ ಮೊಟಕುಗೊಳಿಸಿದರು.

ಕಾರಿನಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಕಾರಿನಿಂದ ಬರಿಗಾಲಿನಲ್ಲೇ ತೆರಳಿ ನಾಮಪತ್ರ ಸಲ್ಲಿಸಿದ್ದು ವಿಶೇಷ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಡಾ.ರಫೀಕ್ ಅಹಮ್ಮದ್, ಜೆಡಿಎಸ್ ಮುಖಂಡ ರಮೇಶ್‌ ಬಾಬು ನಾಮಪತ್ರ ಸಲ್ಲಿಸುವ ವೇಳೆ ಇದ್ದರು. ಮೆರವಣಿಗೆಯ ಉದ್ಧಕ್ಕೂ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್, ಮಾಜಿ ಶಾಸಕ ಸುರೇಶ್‌ ಬಾಬು, ಶಾಸಕರಾದ ಡಿ.ಸಿ.ಗೌರಿಶಂಕರ್, ಎಂ.ವಿ. ವೀರಭದ್ರಯ್ಯ ಇತರರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !