ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ನ.24ರಂದು ಪ್ರತಿಭಟನೆ: ವಾಟಾಳ್

Last Updated 28 ಅಕ್ಟೋಬರ್ 2018, 10:20 IST
ಅಕ್ಷರ ಗಾತ್ರ

ಕಾರವಾರ: ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ನ.24ರ ಬೆಳಿಗ್ಗೆ 11ಕ್ಕೆ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ಮೆರವಣಿಗೆ, ಸತ್ಯಾಗ್ರಹ, ಹೋರಾಟ ನಡೆಸಲಾಗುವುದು. ಇದು ಮುಂದೆ ಇತರ ಜಿಲ್ಲೆಗಳಲ್ಲೂ ನಡೆಯಲಿದೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರವಾರವನ್ನು ಅಭಿವೃದ್ಧಿ ಮಾಡಿ ಅದ್ಭುತವಾಗಿ ಬೆಳೆಸಬಹುದಿತ್ತು. ಆದರೆ, ರಾಜ್ಯ ಏಕೀಕರಣಗೊಂಡು 62 ವರ್ಷಗಳಾದರೂ ಇಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿಲ್ಲ. ಸಾವಿರಾರು ಜನರು ಕೆಲಸ ಮಾಡುವಂಥ ಕಾರ್ಖಾನೆಗಳು ಇಲ್ಲಿ ನಿರ್ಮಾಣವಾಗಿಲ್ಲ. ಇಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಇಲ್ಲಿಂದ ಶುರುವಾಗುವ ಹೋರಾಟವನ್ನು ರಾಜ್ಯದ ಉದ್ದಗಲ್ಲಕ್ಕೂ ಮುಂದುವರಿಸಲಾಗುವುದು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ತೀವ್ರವಾದ ಒತ್ತಾಯ ಮಾಡಲಾಗುವುದು’ ಎಂದರು.

2 ಕೋಟಿ ಕನ್ನಡಿಗರು ಹೊರಗೆ: ‘ರಾಜ್ಯದ ಏಕೀಕರಣ ಸಂದರ್ಭದಲ್ಲಿ ತಾಂತ್ರಿಕವಾಗಿ 2 ಕೋಟಿ ಜನರು ಹೊರಗುಳಿದರು. ಕಾಸರಗೋಡು, ವಯನಾಡು, ಸೊಲ್ಲಾಪುರ, ಹೊಸೂರು ಸೇರಿದಂತೆ ಹೊರನಾಡಿನಲ್ಲಿರುವವರ ಬಗ್ಗೆ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಅವರ ಶಾಲೆಗಳು, ಕನ್ನಡ ಭಾಷೆ, ಅವರ ಬೆಳವಣಿಗೆ, ಸಾಹಿತ್ಯ- ಸಂಸ್ಕೃತಿಯ ಪರಿಸ್ಥಿತಿಯ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಅವರು ಹೋರಾಟ ಮಾಡಿ ಮಾಡಿ ಕೊನೆಗೆ ಕರ್ನಾಟಕಕ್ಕೆ ಸೇರಲು ಆಗಿಲ್ಲವೆಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ’ ಎಂದು ಹೇಳಿದರು.

‘ನ.1ಕ್ಕೆ ರಾಜ್ಯದ ಏಕೀಕರಣಗೊಂಡು 62 ವರ್ಷಗಳಾಗುತ್ತಿವೆ. ಆದರೆ, ಸರ್ಕಾರದ ಕಣ್ಣಿಗೆ ಕಾಣುತ್ತಿರೋದು ಬೆಂಗಳೂರು, ಮೈಸೂರು ಮಾತ್ರ. ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಕೇರಳ ಸರ್ಕಾರ ಒತ್ತಡ ಹೇರುವ ಮೂಲಕ ಅಲ್ಲಿ ಕನ್ನಡಕ್ಕೆ ಇತಿಶ್ರೀ ಹಾಡಲಾಗಿದೆ. ಇದರ ವಿಚಾರದಲ್ಲಿ ಕರ್ನಾಟಕ ಸರ್ಕಾರ ಗಮನ ಹರಿಸಿಲ್ಲ' ಎಂದು ದೂರಿದರು.

ಸಂಸದರು ಮಾತೇ ಆಡಲ್ಲ: ‘ಐದು ವರ್ಷಗಳಿಗೊಮ್ಮೆ ಆಯ್ಕೆಯಾಗಿ ಲೋಕಸಭೆಗೆ ಪ್ರವೇಶಿಸುವ ರಾಜ್ಯದ ಸಂಸದರಿಗೆ ಮಾತು ಬರುತ್ತೋ ಇಲ್ವೋ ಗೊತ್ತಾಗ್ತಿಲ್ಲ. ದೇಶದ ವಿವಿಧೆಡೆಯ ಸಂಸದರು ತಮಗಾದ ಅನ್ಯಾಯದ ಬಗ್ಗೆ ಇಡೀ ದೇಶವೇ ನೋಡುವ ಹಾಗೇ ಸಂಸತ್‍ನ ಒಳಗೆ ಹೋರಾಟ ಮಾಡುತ್ತಾರೆ. ಆದರೆ, ಕೇಂದ್ರದಿಂದ ಸಿಗಬೇಕಾದ ಸೌಲಭ್ಯಗಳ ಬಗ್ಗೆ, ರಾಜ್ಯದ ಅಭಿವೃದ್ಧಿಯ ಬಗ್ಗೆ ನಮ್ಮ ರಾಜ್ಯದಿಂದ ಆಯ್ಕೆಯಾದ ಒಬ್ಬ ಸದಸ್ಯರೂ ಮಾತನಾಡುತ್ತಿಲ್ಲ. ಚುನಾವಣೆಗೆ ನಿಲ್ಲುತ್ತಾರೆ, ಹೋಗುತ್ತಾರೆಯಷ್ಟೆ. ಇದು ನಮಗೆ ದೊಡ್ಡ ನಷ್ಟ. ಅಲ್ಲಿ ರಾಜ್ಯದ ಬಗ್ಗೆ ಧ್ವನಿ ಎತ್ತೋದಿಲ್ಲ. ಇದು ಗಂಭೀರ ಪರಿಸ್ಥಿತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ವೇತ ಪತ್ರ ಹೊರಡಿಸಿ: ‘ಗಡಿನಾಡು ಅಭಿವೃದ್ಧಿಯ ಬಗ್ಗೆ ಸರ್ಕಾರ ಏನು ಮಾಡಿದೆ. ಅವರು ಅಭಿವೃದ್ಧಿ ಮಾಡಿದ್ದರೆ ಶ್ವೇತಪತ್ರ ಹೊರಡಿಸಲಿ’ ಎಂದು ಸವಾಲು ಹಾಕಿದರು.

‘ಬೆಳಗಾವಿಯ ಸುವರ್ಣಸೌಧದಲ್ಲಿ ವರ್ಷಕ್ಕೆ ಒಂದು ಬಾರಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ, ಅಧಿಕಾರಿಗಳ ಸಭೆ ನಡೆಸುತ್ತಾರೆ. ಅವರು ಹೋದ ನಂತರದ 11 ತಿಂಗಳು ಸೌಧಕ್ಕೆ ಜೀವವೇ ಇರುವುದಿಲ್ಲ. ಅದು ಕೋಮಾದಲ್ಲಿ ಇರುತ್ತದೆ. ರೂ 400 ಕೋಟಿ ವೆಚ್ಚ ಮಾಡಿ ಅದನ್ನು ಕಟ್ಟಿಸಿರುವ ಉದ್ದೇಶವಾದರೂ ಏನು? ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದು ಅದನ್ನ ನಿರ್ಮಾಣ ಮಾಡಲಾಗಿದೆ. ಆದರೆ, ಅತಿಥಿಗಳು ಬಂದಂತೆ ಬಂದು ಕೂಗಾಡಿ ಹೋಗ್ತಾರೆ ಹೊರತು ಅದರ ಲಾಭ ಆಗುತ್ತಿಲ್ಲ’ ಎಂದರು.

ಉಪಮುಖ್ಯಮಂತ್ರಿ ಸ್ಥಾನ ಕೊಡಿ: ‘ಮಂತ್ರಿ ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡಿದ್ದೀರಿ. ಆದರೆ, ಗಡಿ ಪ್ರದೇಶದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು. ಸುವರ್ಣ ಸೌಧದಲ್ಲಿ ಅವರ ಆಡಳಿತ ನಡೆಯಬೇಕು. ಆ ಮೂಲಕ ಸೌಧ ಬಳಕೆಗೆ ಬಂದು, ಜನರ ಸಮಸ್ಯೆಗಳಿಗೆ ಅಲ್ಲಿ ಪರಿಹಾರ ಸಿಗುವಂತಾಗಬೇಕು. ಉತ್ತಮ, ಪ್ರಾಮಾಣಿಕ, ದಕ್ಷ ಪ್ರತಿನಿಧಿಗೆ ಆ ಸ್ಥಾನ ನೀಡಬೇಕು’ ಎಂದು ವಾಟಾಳ್ ನಾಗರಾಜ್ ಬೇಡಿಕೆ ಇಟ್ಟರು.

‘15 ವರ್ಷಗಳಿಂದ ಈಚೆಗಿನ ರಾಜಕಾರಣಿಗಳು ಕೆಟ್ಟ ಬಾಯಿ, ಕೆಟ್ಟ ನಾಲಿಗೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಎಲ್ಲಿ ಏನು ಮಾತನಾಡಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ. ರಾಜ್ಯದ ರಾಜಕಾರಣಿಗಳ ಪರಿಸ್ಥಿತಿಯು ಸಾಮಾನ್ಯ ಜನರು ಕೂಡ ಕೆಳಮಟ್ಟದಲ್ಲಿ ಟೀಕಿಸುವಂಥಾಗಿದೆ’ ಎಂದರು.

ಕನ್ನಡಿಗರಿಗೆ ಉದ್ಯೋಗ ಕೊಡ್ತಿಲ್ಲ: ‘ರಾಜ್ಯದಲ್ಲಿ ಹೊರಗಿನವರ ದಾಂಧಲೆ ಹೆಚ್ಚಾಗಿದೆ. ಶಾಸನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಸರ್ಕಾರದಲ್ಲೇ ಕನ್ನಡಿಗರಿಗೆ ಮೀಸಲಾತಿ ಕೊಡುತ್ತಿಲ್ಲ. ಇನ್ಫೋಸಿಸ್‍ನ ಸುಧಾ ಮೂರ್ತಿ ಅವರು ಭಾರಿ ಮೆರವಣಿಗೆ ನಡೆಸಿದ್ದನ್ನು ಕಂಡಿದ್ದೀರಿ. ಅವರಿಗೆ ಸಾವಿರಾರು ಎಕರೆ ಕೊಟ್ಟಿದ್ದೀರಿ. ಆದರೆ, ಐಟಿ ಬಿಟಿಯಂಥ ಕಂಪನಿಗಳೇ ಕನ್ನಡಿಗರಿಗೆ ಉದ್ಯೋಗ ಕೊಡುತ್ತಿಲ್ಲ. ಈ ಬಗ್ಗೆ ಕಡ್ಡಾಯ ತೀರ್ಮಾನವೊಂದು ಆಗಬೇಕು’ ಎಂದು ಆಗ್ರಹಿಸಿದರು.

ಮೂರು ತಿಂಗಳು ಕನ್ನಡ ಸಿನಿಮಾ ಕಡ್ಡಾಯ ಮಾಡಿ: ‘ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಕನಿಷ್ಠ ಮೂರು ತಿಂಗಳು ಕನ್ನಡ ಚಿತ್ರ ಪ್ರದರ್ಶನ ಮಾಡಬೇಕು. ಆ ಚಿತ್ರಕ್ಕೆ ಆದಾಯ ಬರಲಿ, ಬಿಡಲಿ ಪ್ರದರ್ಶನ ಮಾಡಲೇಬೇಕು. ಇಲ್ಲದಿದ್ದರೆ ಪರಭಾಷೆಗಳ ಚಿತ್ರಗಳನ್ನು ನಮ್ಮ ರಾಜ್ಯದಲ್ಲಿ ಪ್ರದರ್ಶನ ಮಾಡುವುದ ಲ ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕರಾಳ ದಿನಕ್ಕೆ ಕರೆಕೊಟ್ಟವರನ್ನು ಗಡಿಪಾರು ಮಾಡಿ: ‘ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ರಾಜ್ಯೋತ್ಸವವನ್ನು ವಿರೋಧಿಸಿ ಕರಾಳ ದಿನಾಚರಣೆ ಮಾಡಲು ಕರೆ ಕೊಟ್ಟಿದೆ. ಸರ್ಕಾರ ಅವರನ್ನು ಗಡಿಪಾರು ಮಾಡಬೇಕು. ಇದರಲ್ಲಿ ಮತ್ತೆ ಬೇರೆ ಮಾತೇ ಇಲ್ಲ. ಏನೇ ಆದರೂ ಚಿಂತೆ ಇಲ್ಲ, ಅವರನ್ನು ಬಂಧನ ಮಾಡಬೇಕು. ಸರ್ಕಾರ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು’ ಎಂದು ವಾಟಾಳ್ ನಾಗರಾಜ್ ಹೇಳಿದರು.

‘ರಾಜ್ಯ ಸರ್ಕಾರವೇ ಅದ್ಧೂರಿಯಾಗಿ ಅಲ್ಲಿ ಕನ್ನಡ ದಿನಾಚರಣೆಯನ್ನು ಮಾಡ್ಬೇಕು. ಅವಾಗ ಅವರಿಗೆ ಬುದ್ಧಿ ಬರುತ್ತೆ. ಅವರ ಜತೆ ಸರಸ ಆಡುವಂಥ ನಮ್ಮ ಜನಪ್ರತಿನಿಧಿಗಳು, ಮತಕ್ಕಾಗಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯದಲ್ಲ’ ಎಂದರು.

ಮೀಟೂ ಅಂದ್ರೆ ಏನು?: ‘ಕನ್ನಡ ಚಿತ್ರರಂಗದಲ್ಲಿ ಮೀಟೂ ಬಹಳ ಅಲೆಯನ್ನು ಎಬ್ಬಿಸಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ‘ಮೀಟೂ ನಿಜ. ಆದರೆ, ಹಂಗಂದ್ರೆ ಏನು? ಅದನ್ನ ವಿಶ್ಲೇಷಣೆ ಮಾಡುತ್ತಾ ಕುಳಿತುಕೊಂಡರೆ ಜಾಸ್ತಿ ಆಗುತ್ತೆ. ಅದರ ಬಗ್ಗೆ ಚರ್ಚೆ ಮಾಡೋದಕ್ಕೆ ಬೇಕಾದಷ್ಟಿದೆ. ನಾವು ನೀವು ಮೀಟೂ ಅಷ್ಟೇ’ ಎಂದು ಹೇಳಿದಾಗ ಸುದ್ದಿಗೋಷ್ಠಿಯು ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT