ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!

Last Updated 22 ಡಿಸೆಂಬರ್ 2018, 20:33 IST
ಅಕ್ಷರ ಗಾತ್ರ

ಕಾರವಾರ: ‘ಅಮ್ಮಾ.. ಇಲ್ಲಿ ನೀರಿನ ಸಮಸ್ಯೆ ಹೇಗಿದೆ.. ಸ್ವಲ್ಪ ಹೇಳ್ತೀರಾ..?’ ‘ಏ.. ತಡೀರಿ ಸಾ... ಈಗ ಬಿಟ್ಟಾರಂತೆ.. ಒಂದು ಕೊಡ ಹಿಡ್ಕಂಡ್‌ ಬರ್ತೀನಿ. ಆಮೇಲೆ ಮಾತಾಡೋಣ.. ಕಲ್ಲು ಮುಳ್ಳಿನ್ ದಾರೀಲಿ ಜೋರಾಗಿ ಹೋಗಾಕೂ ಆಗಲ್ಲ!’

–ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಸೂಪಾ ಅಣೆಕಟ್ಟೆಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ ಕಾಲೊನಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ನಡೆದ ಸಂಭಾಷಣೆ ಇದು. ಇಲ್ಲಿ 10ರಿಂದ 15 ದಿನಗಳಿಗೊಮ್ಮೆ ನಲ್ಲಿಗಳಲ್ಲಿ ನೀರು ಹರಿಯುತ್ತದೆ ಎನ್ನುತ್ತಾರೆ ಸಿದ್ದೇಶ್ವರ ಗಲ್ಲಿಯ ದೀಪಾ.

ಈ ಕಾಲೊನಿಯ ನಿವಾಸಿಗಳು ಏಷ್ಯಾದ ಎರಡನೇ ಅತಿದೊಡ್ಡ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಲು ಜಮೀನು ತ್ಯಾಗ ಮಾಡಿದವರು. ಅವರು ಇಂದು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಸಮೀಪದಲ್ಲಿರುವ ಪಾಂಡರಿ ನದಿಯಿಂದ ಕಾಲೊನಿಗೆ ನೀರು ಪೂರೈಕೆಯಾಗುತ್ತಿದೆ. ಆದರೆ, ಬಿರು ಬೇಸಿಗೆಯಲ್ಲಿ ಜೀವಸೆಲೆ ಬತ್ತಿ ಹೋಗುತ್ತಿದೆ. ಸುಮಾರು 10 ಕಿ.ಮೀ ದೂರದಲ್ಲಿರುವ ಕಾಳಿ ನದಿ ವರ್ಷಪೂರ್ತಿ ಮೈದುಂಬಿರುತ್ತದೆ. ಅದರಿಂದ ದೂರದ ಅಳ್ನಾವರ, ಹಳಿಯಾಳ, ದಾಂಡೇಲಿಗೂ ನೀರು ಪೂರೈಕೆಯಾಗುತ್ತದೆ. ಆದರೆ, ರಾಮನಗರಕ್ಕೆ ಆ ಭಾಗ್ಯವಿಲ್ಲ.

ಅಲ್ಲಲ್ಲಿ ಸಣ್ಣ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದರೂ ನಲ್ಲಿ ಸಂಪರ್ಕವಾಗಿಲ್ಲ. ಹೀಗಾಗಿ ಖಾಸಗಿ ಬಾವಿಗಳು, ರಸ್ತೆಯಂಚಿನಲ್ಲಿರುವ ಸರ್ಕಾರಿ ಕೊಳವೆಬಾವಿಗಳ ಮೊರೆ ಹೋಗಬೇಕಿದೆ. ಸ್ವಲ್ಪ ಅನುಕೂಲಸ್ಥರು ಕೊಳವೆಬಾವಿ ಕೊರೆಸುತ್ತಾರೆ. ಆದರೆ, ಅಲ್ಲೂ ನೀರು ಸಿಗುವ ಭರವಸೆಯಿಲ್ಲ. ರಾಮನಗರದ ಕಾಲೊನಿಯಲ್ಲಿ ಒಂದೆರಡು ರಸ್ತೆಗಳು ಮಾತ್ರ ಡಾಂಬರು, ಕಾಂಕ್ರೀಟ್ ಕಂಡಿವೆ. ಜೊಯಿಡಾದಲ್ಲಿ ರಸ್ತೆಗಳು ಡಾಂಬರನ್ನೂ ಕಂಡಿಲ್ಲ.

ಹಕ್ಕುಪತ್ರ ಸಿಕ್ಕಿಲ್ಲ: ‘ಇನ್ನೂ 70– 80 ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಆದರೆ, ಅವರು ಸಂತ್ರಸ್ತರು ಎನ್ನಲು ದಾಖಲೆಗಳಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿ) ನಿರಾಶ್ರಿತರ ಕಾಲೊನಿಯನ್ನು 2004ರಲ್ಲಿ ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರಿಸಿ ಕೈ ತೊಳೆದುಕೊಂಡಿತು. ಸ್ವಸ್ತಿ ಗ್ರಾಮ ಯೋಜನೆಯಡಿ 2001ರಲ್ಲಿ ಬಿಡುಗಡೆಯಾದ ₹ 1.70 ಕೋಟಿ ಅನುದಾನದಲ್ಲಿ ಒಂದಿಷ್ಟು ಕಾಮಗಾರಿ ಆಗಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿಲ್ಲ’ ಎನ್ನುತ್ತಾರೆ ಕಾಳಿ ಬ್ರಿಗೇಡ್‌ನ ಸಂಚಾಲಕ ರವಿ ರೇಡ್ಕರ್.

‘ಸಂತ್ರಸ್ತರಿಗೆ ಮೀಸಲಾದ ಜಮೀನನ್ನು ಖಾನಾಪುರ, ಲೋಂಡಾ, ಗೋವಾ, ಮಹಾರಾಷ್ಟ್ರ, ದಾಂಡೇಲಿಯಿಂದ ಬಂದವರು ಅತಿಕ್ರಮಿಸಿದ್ದಾರೆ. ಕ್ವಾರಿ ಮಾಲೀಕರು, ಗುತ್ತಿಗೆದಾರರು, ಆದಾಯ ತೆರಿಗೆ ಪಾವತಿಸುವವರು ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ’ ಎಂದು ಸಂತ್ರಸ್ತರ ಕುಟುಂಬದವರೂ ಆದ ರಾಮನಗರ ನಿವಾಸಿ ಮಲ್ಹಾರ್ ರಾಣೆ ಬೇಸರ ವ್ಯಕ್ತಪಡಿಸುತ್ತಾರೆ.

1974ರಲ್ಲಿ ಕಾಳಿ ನದಿಗೆ ಸೂಪಾ ಅಣೆಕಟ್ಟೆ ಕಾಮಗಾರಿ ಆರಂಭಿಸಲಾಯಿತು. ಆಗ 47 ಹಳ್ಳಿಗಳಲ್ಲಿದ್ದ 1,710 ಕುಟುಂಬಗಳನ್ನು ಮೂರು ಹಂತಗಳಲ್ಲಿ ಸ್ಥಳಾಂತರಿಸಲಾಯಿತು. ಅವರಿಗೆ ಜೊಯಿಡಾದಲ್ಲಿ 150 ಎಕರೆ ಹಾಗೂ ರಾಮನಗರದಲ್ಲಿ 530 ಎಕರೆ ಅರಣ್ಯಭೂಮಿಯಲ್ಲಿ ಪುನರ್‌ವಸತಿ ವ್ಯವಸ್ಥೆ ಮಾಡಲಾಯಿತು. ಈ ಅಣೆಕಟ್ಟೆಗಾಗಿ 26,419 ಎಕರೆ ಅರಣ್ಯ ಭೂಮಿಯೂ ಮುಳುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT