ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಅಸ್ತ್ರಗಳಾಗಿರುವ ಆಯೋಗ, ಸಮಿತಿಗಳು; ವಿಚಾರಣಾ ವರದಿ ಶವಪೆಟ್ಟಿಗೆಗೆ

ಒಳನೋಟ: ಬಹಿರಂಗವಾಗದ ಶಿಫಾರಸುಗಳು
Last Updated 29 ಡಿಸೆಂಬರ್ 2018, 20:56 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಪರಮೋಚ್ಚ ವೇದಿಕೆಯಾಗಿರುವ ರಾಜ್ಯ ವಿಧಾನಮಂಡಲ, ರಾಜಕಾರಣಿಗಳ ಮೇಲಾಟದ ವೇದಿಕೆಯಾಗಿ ಪರಿವರ್ತನೆಯಾಗಿದೆ. ವಿಚಾರಣಾ ಆಯೋಗ, ಸದನ ಸಮಿತಿಗಳು ಬಲಾಢ್ಯರ ನಡುವಿನ ಕಾದಾಟಕ್ಕೆ ಬಳಕೆಯಾಗುವ ಅಸ್ತ್ರಗಳಂತಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚವಾದರೂ ಸತ್ಯ ಸಂಗತಿ ಶವಪೆಟ್ಟಿಗೆ ಸೇರುವ ಸ್ಥಿತಿ ಇದೆ. ಈ ಹಾವು ಏಣಿ ಆಟದ ಮೇಲೆ ಬೆಳಕು ಚೆಲ್ಲಲಿದೆ ಒಳನೋಟ...

ಇದು ಜನರ ಕಣ್ಣಿಗೆ ಮಣ್ಣೆರಚಲು ಆಡುವ ನಾಟಕ; ಕೆಲವೊಮ್ಮೆ ರಾಜಕೀಯ ಎದುರಾಳಿಗಳ ಬಾಯಿ ಮುಚ್ಚಿಸುವ ತಂತ್ರ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಇಡುವ ಜಾಣ್ಮೆಯ ಹೆಜ್ಜೆ... ಸರ್ಕಾರದ ವಿರುದ್ಧ ಆರೋಪ ಕೇಳಿಬಂದಾಗ; ಭ್ರಷ್ಟಾಚಾರ – ಹಗರಣಗಳ ಸುಳಿಯಲ್ಲಿ ಸಿಕ್ಕಾಗ, ಅಪಘಾತ ಅಥವಾ ವಿಪತ್ತುಗಳು ಘಟಿಸಿದಾಗ ವಿಚಾರಣಾ ಆಯೋಗಗಳ ನೇಮಸಿ; ವಿಧಾನಮಂಡಲ ಸದನ ಸಮಿತಿ ರಚಿಸಿ ಕೈತೊಳೆದುಕೊಳ್ಳುವ ರಾಜಕೀಯ ಮೇಲಾಟ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇತ್ತೀಚೆಗೆ ರಾಜಕೀಯ ಅಸ್ತ್ರಗಳಂತೆಯೂ ಬಳಕೆಯಾಗುತ್ತಿವೆ.

1952ರಲ್ಲಿ ವಿಚಾರಣಾ ಆಯೋಗ ಕಾಯ್ದೆ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅನೇಕ ಆಯೋಗಗಳು ನೇಮಕವಾಗಿವೆ. ಸದನ ಸಮಿತಿ, ಜಂಟಿ ಸದನ ಸಮಿತಿಗಳು ರಚನೆಯಾಗಿ ವರದಿಗಳನ್ನೂ ಕೊಟ್ಟಿವೆ. ಅವುಗಳ ಗತಿ ಏನಾಗಿದೆ ಎಂದು ನೋಡಿದರೆ ಬೇಸರವಾಗುತ್ತದೆ. ಆ ವರದಿಗಳ ಶಿಫಾರಸು ಜಾರಿಯಾಗಿದ್ದರೆ ಅದೆಷ್ಟೋ ನಾಯಕರ ತಲೆದಂಡ ಆಗುತ್ತಿತ್ತೋ? ಅದೆಷ್ಟೋ ಅಧಿಕಾರಿಗಳು ಕಂಬಿ ಎಣಿಸುತ್ತಿದ್ದರೋ? ಯಾವ್ಯಾವ ಸರ್ಕಾರ ಉರುಳುತ್ತಿದ್ದವೋ?

ಆದರೆ, ವರ್ಷಗಟ್ಟಲೇ ವಿಚಾರಣೆ ನಡೆಸಿ ಸಿದ್ಧಪಡಿಸಿದ ವರದಿಗಳು ಬಹುತೇಕ ತಿರಸ್ಕೃತಗೊಂಡಿದ್ದರೆ, ಕೆಲ ವರದಿಗಳಂತೂ ವಿಧಾನಮಂಡಲದಲ್ಲಿ ಮಂಡನೆಯೇ ಆಗಿಲ್ಲ. ಕೋಟಿಗಟ್ಟಲೆ ಹಣ ಇದಕ್ಕಾಗಿ ವ್ಯಯವಾಗಿದೆ. ಈಗಲೂ ಆಗುತ್ತಿದೆ. ಈ ವಿಷಯದಲ್ಲಿ ಎಲ್ಲ ಪಕ್ಷಗಳೂ ಅನುಕೂಲಸಿಂಧು ರಾಜಕಾರಣಕ್ಕೇ ಜೋತುಬಿದ್ದಿವೆಯೇ ಹೊರತು, ರಾಜ್ಯದ ಹಿತದ ಬಗ್ಗೆ ತಲೆಕೆಡಿಸಿಕೊಂಡ ನಿದರ್ಶನಗಳಿಲ್ಲ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಹಗರಣಗಳು ಹೆಚ್ಚು ಪ್ರಚಾರಕ್ಕೆ ಬಂದಿದ್ದು 1987ರಲ್ಲಿ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ. ಇದಕ್ಕೆ ಮುನ್ನ ಹಗರಣಗಳು ನಡೆದಿದ್ದರೂ ಹೆಚ್ಚು ಸದ್ದು ಮಾಡಿರಲಿಲ್ಲ. ವಿಧಾನಸೌಧ ನಿರ್ಮಿಸಿದ ಮುತ್ಸದ್ಧಿ ರಾಜಕಾರಣಿ, ಕೆಂಗಲ್‌ ಹನುಮಂತಯ್ಯ ವಿಧಾನಸೌಧ ಕಾಮಗಾರಿಯಲ್ಲಿ ಕಮಿಷನ್‌ ಪಡೆದಿದ್ದರು ಎಂಬ ಆರೋಪ ಎದುರಿಸಿದ್ದರು.

ದೇವರಾಜ ಅರಸು ಅವರ ಮೇಲೂ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಸ್ವಜನ ಪಕ್ಷಪಾತದ ಆರೋಪಗಳಿದ್ದವು. ಅಳಿಯ ಎಂ.ಡಿ. ನಟರಾಜ್‌ಗೆ ಎಂಟು ಎಕರೆ ಜಮೀನು ಮಂಜೂರು; ಕುಟುಂಬ ಸದಸ್ಯರಿಗೆ ರಾಜ್‌ಮಹಲ್‌ ಪ್ಯಾಲೇಸ್‌ ಪ್ರದೇಶದಲ್ಲಿ ನಿವೇಶನಗಳ ಹಂಚಿಕೆ, ಹೇಮಾವತಿ ಯೋಜನೆ ನಿರ್ಮಾಣ ವೇಳೆ ಏತ ನೀರಾವರಿ ಯೋಜನೆಗಳಿಗೆ ಹೆಚ್ಚುವರಿ ಹಣ ಪಾವತಿಸಿದ ದೂರುಗಳಿದ್ದವು.

ಚರಣ್‌ ಸಿಂಗ್‌ ನೇತೃತ್ವದ ಜನತಾ ಪಕ್ಷದ ಸರ್ಕಾರ ವಿಚಾರಣೆಗೆ ಗ್ರೋವರ್‌ ಆಯೋಗ ನೇಮಿಸಿತ್ತು. ರಾಜ್ಯದಲ್ಲಿ ನಡೆದ ಹಗರಣದ ವಿಚಾರಣೆಗೆ ಆಯೋಗ ರಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ ಎಂದು ವಾಗ್ವಾದವೂ ನಡೆದಿತ್ತು. ವಿಚಾರಣಾ ಆಯೋಗ ಕಾಯ್ದೆಯಡಿ ತನಗೆ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಬಳಿಕ ಆಯೋಗ ವರದಿಯನ್ನೂ ಕೊಟ್ಟಿತ್ತು. ಎರಡೇ ವರ್ಷದಲ್ಲಿ ಇಂದಿರಾಗಾಂಧಿ ಅಧಿಕಾರಕ್ಕೆ ಮರಳಿದರು. ವರದಿ ನಾಪತ್ತೆಯಾಯಿತು. ಅದರಲ್ಲಿ ಏನಿತ್ತು ಎಂಬ ಮಾಹಿತಿಯೂ ಬಹಿರಂಗವಾಗಲಿಲ್ಲ ಎಂದು ಆಗಿನ ರಾಜಕಾರಣಿಗಳು ಮತ್ತು ಹಿರಿಯ ಪತ್ರಕರ್ತರು ಹೇಳುತ್ತಾರೆ.

ಹೆಗಡೆ ಅವರ ಕಾಲದ‘ರೇವಜಿತು’ಮತ್ತು ‘ಎನ್‌ಆರ್‌ಐ ವಸತಿ ಹಗರಣ’ ಬಿರುಗಾಳಿ ಎಬ್ಬಿಸಿದ್ದವು. ಹೊಸೂರು– ಸರ್ಜಾಪುರದ ರಸ್ತೆಯಲ್ಲಿ 110 ಎಕರೆ ಅನಿವಾಸಿಗಳಿಗೆ ಜಮೀನು ಮಂಜೂರು ಮಾಡಿದ ಹಗರಣದ ಗದ್ದಲ ನ್ಯಾ.ಕುಲದೀಪ್‌ ಸಿಂಗ್‌ ಆಯೋಗ ನೇಮಿಸುವವರೆಗೂ ತಣ್ಣಗಾಗಲಿಲ್ಲ. ಮೂರು ವರ್ಷಗಳಲ್ಲಿ ಆಯೋಗ ವರದಿ ಸಲ್ಲಿಸಿತು.

‘ಅನಿವಾಸಿ ಭಾರತೀಯರಿಗೆ ಬಿಡಿಎ ಅಕ್ರಮವಾಗಿ ಜಮೀನು ನೀಡಿದೆ’ ಎಂದು ಹೇಳಿತ್ತು. ಹೆಗಡೆ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಿತ್ತು. ಎರಡು ವರ್ಷದ ಬಳಿಕ ಹೆಗಡೆ ಅವರ ವಿರುದ್ಧ ಸಿವಿಲ್‌ ಮತ್ತು ಕ್ರಿಮಿನಲ್‌ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ಅಂದಿನ ಸರ್ಕಾರ ಶಿಫಾರಸು ಮಾಡಿದ್ದು ಈಗ ಇತಿಹಾಸ.

ಈ ಹಗರಣ ವ್ಯಾಪಕ ಪ್ರಚಾರ ಪಡೆಯಲು ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಕಾರಣವಾಗಿತ್ತು. ಚಳವಳಿಗಳು ಉತ್ತುಂಗದಲ್ಲಿದ್ದವು. ರೈತ– ದಲಿತ, ಬಂಡಾಯ ಮತ್ತು ಭಾಷಾ ಚಳವಳಿಗಳ ಭರಾಟೆ ಇತ್ತು. ಇದರೊಟ್ಟಿಗೆ, ಟ್ಯಾಬ್ಲಾಯ್ಡ್‌ ಪತ್ರಿಕೆಗಳ ಕರಾಮತ್ತೂ ಜೋರಾಗಿ‌ತ್ತು. ಕನ್ನಡಿಗರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಿತ್ತು.

ಹೀಗಾಗಿ, ಇದು ಹೆಚ್ಚು ಸುದ್ದಿಯಾಯಿತು. ಹಾಗೆಯೇ ದೇವೇಗೌಡರ ವಿರುದ್ಧ ತುಂಡು ಗುತ್ತಿಗೆ ಹಗರಣವೂ ಹೆಚ್ಚು ಸದ್ದು ಮಾಡಿತ್ತು. ಆಗಿನ ರಾಜಕೀಯ ಸಂದರ್ಭಕ್ಕೆ, ರಾಜ್ಯದ ಮಟ್ಟಿಗೆ ಇವೇ ದೊಡ್ಡ ಹಗರಣ ಎಂಬಂತಾಗಿತ್ತು. ಆನಂತರ ಇದನ್ನೂ ಮೀರಿಸುವಂಥ ಹಗರಣಗಳು ನಡೆದಿವೆ.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್‌ ಹಗರಣ ಕುರಿತು ನ್ಯಾ.ಎಚ್‌.ಎಸ್‌. ಕೆಂಪಣ್ಣ ಆಯೋಗ ವಿಚಾರಣೆ ನಡೆಸಿ ವರದಿ ಸಲ್ಲಿಸಿತು.

ಈ ವರದಿ ಬಹಿರಂಗವಾಗಲಿಲ್ಲ. ಕಲ್ಲಿದ್ದಲು ಮತ್ತು ಟ್ರಾನ್ಸ್‌ಫಾರ್ಮರ್‌ ಖರೀದಿ ಕುರಿತ ನ್ಯಾ. ಪಿ.ವಿ. ಮೋಹನ್‌ ಕುಮಾರ್‌ ಆಯೋಗದ ವರದಿ ನಾಪತ್ತೆಯಾಯಿತು.

‘ಜಿ’ ಕೆಟಗರಿ ನಿವೇಶನಗಳ ಹಂಚಿಕೆ ಕುರಿತು ಹೈಕೋರ್ಟ್‌ ಸೂಚನೆ ಮೇಲೆ ನೇಮಿಸಿದ್ದ ನ್ಯಾ. ಬಿ.ಪದ್ಮರಾಜ್‌ ಸಮಿತಿ ವರದಿಯನ್ನು ಹಿಂದಿನ ಸಿದ್ದರಾಮಯ್ಯ ಸರ್ಕಾರ ತಿರಸ್ಕರಿಸಿತು. 2004ರಿಂದ 2011ರವರೆಗೆ 308 ಜನಪ್ರತಿನಿಧಿಗಳಿಗೆ ‘ಜಿ’ ಕೆಟಗರಿ ನಿವೇಶನಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು.

ಭಟ್ಕಳದ ಶಾಸಕ ಚಿತ್ತರಂಜನ್‌ ಹತ್ಯೆ ಕುರಿತು ನ್ಯಾ. ರಾಮಚಂದ್ರಯ್ಯ ಆಯೋಗದ ವರದಿ ವಿಧಾನ ಮಂಡಲದಲ್ಲಿ ಮಂಡನೆಯಾಗಲಿಲ್ಲ.

ಬಿಎಂಐಸಿ ಯೋಜನೆ ಕುರಿತು ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ಕೊಟ್ಟ ವರದಿ ಎರಡು ವರ್ಷ ಕಳೆದರೂ ಜಾರಿಯಾಗಿಲ್ಲ. ಈ ವರದಿಗಳು ದೂಳು ಹಿಡಿಯುತ್ತಿರುವುದರ ಹಿಂದೆ ಪ್ರಬಲ ರಾಜಕೀಯ ಕಾರಣಗಳಿವೆ. ಇವುಗಳ ಜಾಡು ಹಿಡಿದರೆ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗಬಹುದು.

ನೈಸ್‌ ವರದಿ ಅನುಷ್ಠಾನಕ್ಕೆ ಏನು ಅಡ್ಡಿ?

'ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ ಯೋಜನೆ’ಯಲ್ಲಿನ ಲೋಪಗಳನ್ನು ಪತ್ತೆ ಹಚ್ಚಲು ಸಿದ್ದರಾಮಯ್ಯ ಸರ್ಕಾರದ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಸಮಿತಿಯನ್ನು 2014ರಲ್ಲಿ ರಚಿಸಲಾಗಿತ್ತು.

ಸಮಿತಿ 2016ರ ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡಿಸಿತು. ವರದಿ ಅನೇಕ ಲೋಪಗಳನ್ನು ಎತ್ತಿ ತೋರಿಸಿದೆ ಎನ್ನಲಾಗಿದೆ. ಆಗಿನ ಪ್ರಭಾವಿ ಸಚಿವರೊಬ್ಬರ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ ಎನ್ನಲಾಗಿದೆ. ವರದಿ ಮಂಡನೆಯಾಗಿ ಎರಡು ವರ್ಷ ಕಳೆದರೂ ಶಿಫಾರಸುಗಳು ಜಾರಿಯಾಗಿಲ್ಲ.

ಅನೇಕ ಪ್ರಭಾವಿ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ಜಾರಿಯಾಗದಂತೆ ಅಡ್ಡಿಪಡಿಸುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಯೋಜನೆ ವಿರುದ್ಧ ಆಗೊಮ್ಮೆ, ಈಗೊಮ್ಮೆ ಗುಡುಗುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ತಮ್ಮದೇ ಪಕ್ಷ, ಕಾಂಗ್ರೆಸ್‌ ಜೊತೆ ಅಧಿಕಾರ ಹಂಚಿಕೊಂಡಿದ್ದರೂ ಸುಮ್ಮನೆ ಕುಳಿತಿರುವುದು ಅಚ್ಚರಿ ಮೂಡಿಸಿದೆ.

ಬಿಜೆಪಿ ನಾಯಕರೂ ತುಟಿ ಬಿಚ್ಚುತ್ತಿಲ್ಲ. ಹೊಂದಾಣಿಕೆ ರಾಜಕಾರಣಕ್ಕೆ ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕೇ ಎಂದು ಯೋಜನೆಗಾಗಿ ಜಮೀನು ಕಳೆದುಕೊಂಡು ಅತಂತ್ರರಾಗಿರುವ ರೈತರು ಮಾಡುತ್ತಿದ್ದಾರೆ.

ಬಹಿರಂಗವಾಗದ ನ್ಯಾ. ಕೆಂಪಣ್ಣ ವರದಿ... ಕಾಣೆಯಾದ ಮೋಹನ್‌ ಕುಮಾರ್‌ ವರದಿ...

ಬೆಂಗಳೂರಿನ ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಶನ್‌ ಹಗರಣದ ವಿಚಾರಣೆಗೆ ನ್ಯಾ.ಎಚ್‌.ಎಸ್‌. ಕೆಂಪಣ್ಣ ಅವರ ಆಯೋಗ ರಚಿಸಲಾಗಿತ್ತು. ಆಯೋಗ ವರದಿ ಸಲ್ಲಿಸಿದ್ದರೂ ಬಹಿರಂಗಪಡಿಸಿಲ್ಲ.

ಆಯೋಗಕ್ಕೆ 2004ರಿಂದ ಮಾಡಲಾದ ಡಿನೋಟಿಫಿಕೇಶನ್‌ ಬಗ್ಗೆ ವಿಚಾರಣೆ ನಡೆಸುವ ‘ಕಾರ್ಯವ್ಯಾಪ್ತಿ’ ನೀಡಲಾಗಿತ್ತು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 541ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದು, ಸಿಬಿಐ ತನಿಖೆ ನಡೆಸುವಂತೆ ಬೊಬ್ಬೆ ಹಾಕಿದ್ದ ಬಿಜೆಪಿ ನಾಯಕರು, ಬಳಿಕ ಕೆಂಪಣ್ಣ ಆಯೋಗದ ವರದಿ ಕುರಿತು ಮೌನವಾಗಿದ್ದೇಕೆ ಎಂಬುದು ಉತ್ತರ ಸಿಗದ ಪ್ರಶ್ನೆ.

ನ್ಯಾ. ವಿ.ಪಿ.ಮೋಹನ್‌ ಕುಮಾರ್‌ ಆಯೋಗದ ವರದಿಗೂ ಇಂತಹದೇ ಸ್ಥಿತಿ ಬಂದೊದಗಿದೆ. ಕಲ್ಲಿದ್ದಲು ಖರೀದಿ, ಸಾಗಣೆ ಹಾಗೂ ಸ್ವಚ್ಛಗೊಳಿಸುವ ಗುತ್ತಿಗೆ ಮತ್ತು ಟ್ರಾನ್ಸ್‌ಫಾರ್ಮರ್‌ ಖರೀದಿ ಕುರಿತು ಆಯೋಗ ವಿಚಾರಣೆ ನಡೆಸಿತ್ತು. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸುವ ಬುದ್ಧಿವಂತಿಕೆ ಪ್ರದರ್ಶಿಸಿದರು.

2002ರಿಂದ 2009ರವರೆಗಿನ ಖರೀದಿ ವ್ಯವಹಾರ ಕುರಿತು ಪರಿಶೀಲನೆ ನಡೆಸುವಂತೆ ಆಯೋಗಕ್ಕೆ ಕೇಳಿದ್ದರು. ಈ ಅವಧಿಯಲ್ಲಿ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಎಲ್ಲ ಪಕ್ಷವೂ ಅಧಿಕಾರ ನಡೆಸಿದ್ದವು. ಆದರೆ, ವರದಿ ಏನಾಯಿತು? ಎಲ್ಲಿ ಹೋಯಿತು ಎಂದು ಯಾರೂ ಬಾಯಿ ಬಿಡುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಾಡಿಕೊಂಡಿದ್ದ ವಿದ್ಯುತ್‌ ಖರೀದಿ ಒಪ್ಪಂದ ಕುರಿತು ಸಚಿವ ಡಿ.ಕೆ. ಶಿವಕುಮಾರ್‌ ನೇತೃತ್ವದ ಸದನ ಸಮಿತಿ ವರದಿ ಕೊಟ್ಟಿದ್ದರೂ ಇದುವರೆಗೆ ಏನೂ ಆಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಇಡೀ ಒಪ್ಪಂದದ ಸತ್ಯ ಗೊತ್ತಿದ್ದರೂ ತಟಸ್ಥರಾಗಿದ್ದಾರೆ ಎನ್ನಲಾಗುತ್ತಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT