ಗುರುವಾರ , ಏಪ್ರಿಲ್ 9, 2020
19 °C
₹ 15ರಿಂದ ₹ 20 ಕೋಟಿಯಷ್ಟು ವ್ಯವಹಾರ, 3,500 ಮಂದಿ ಹೂಡಿಕೆ

ಆನ್‌ಲೈನ್‌ ವಂಚನೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ದುಪ್ಪಟ್ಟು ಹಣ ಗಳಿಸುವ ಆಸೆ ತೋರಿಸಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕುಶಾಲನಗರದ ತ್ಯಾಗರಾಜ ಕಾಲೊನಿಯ 3ನೇ ಬ್ಲಾಕ್‌ ನಿವಾಸಿ, ರಿಯಲ್‌ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಜಾನ್‌ (45), ಶಿವರಾಮಕಾರಂತ್‌ ಬಡಾವಣೆ ನಿವಾಸಿ, ಬಿಎಸ್‌ಎಂ ಮೋಟಾರ್ಸ್‌ನಲ್ಲಿ ಸೇಲ್ಸ್‌ ಎಕ್ಸಿಕ್ಯೂಟೀವ್‌ ಆಗಿರುವ ಶಶಿಕಾಂತ್‌ (37) ಹಾಗೂ ಕುಶಾಲನಗರ ಬಸವೇಶ್ವರ ಬಡಾವಣೆಯ ನಿವಾಸಿ, ದಿವಾನ್‌ ಹೌಸಿಂಗ್‌ ಫೈನಾನ್ಸ್‌ನಲ್ಲಿ ಮ್ಯಾನೇಜರ್‌ ಆಗಿರುವ ಆಂಟೋನಿ ಡಿ. ಕುನ್ನಾ (39) ಬಂಧಿತರು. ಕೊಡಗು ಮೂಲದ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಅಂದಾಜು ₹ 15ರಿಂದ ₹ 20 ಕೋಟಿಯಷ್ಟು ವ್ಯವಹಾರ ನಡೆದಿರುವುದು, ರಾಜ್ಯದಾದ್ಯಂತ ಈ ಜಾಲ ಹಬ್ಬಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

capitalrelations.in ಎಂಬ ವೆಬ್‌ಸೈಟ್‌ ಅನ್ನು ಬೆಂಗಳೂರು ಮೂಲದ ಕಂಪೆನಿಯಿಂದ ಅಭಿವೃದ್ಧಿ ಪಡಿಸಿಕೊಂಡಿದ್ದರು. ಅದಕ್ಕೆ ₹ 1.50 ಲಕ್ಷ ಖರ್ಚು ಮಾಡಲಾಗಿತ್ತು. ಈ ವೆಬ್‌ಸೈಟ್‌ ಮೂಲಕ ಹಣ ಹೂಡಿಕೆ ಮಾಡಿದರೆ, ಬಹಳ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂಬ ಆಮಿಷವೊಡ್ಡಲಾಗಿತ್ತು. 3,500 ಮಂದಿ ಅದರಲ್ಲಿ ಹೂಡಿಕೆ ಮಾಡಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿದರು.

‘ಶಶಿಕಾಂತ್‌ ಅಡ್ಮಿನ್‌ ಆಗಿದ್ದರು. ವ್ಯವಹಾರದಲ್ಲಿ ಹಣ ತೊಡಗಿಸಲು ಇಚ್ಛಿಸುವವರು ಶಶಿಕಾಂತ್‌ ಅವರನ್ನು ಸಂಪರ್ಕಿಸಿ ಅವರಿಂದ ಯೂಸರ್‌ ಐ.ಡಿ, ಪಾಸ್‌ವರ್ಡ್‌ ಹಾಗೂ ಮೂರು ಇ–ಪಿನ್‌ ಖರೀದಿಸಬೇಕು. ತಲಾ ಒಂದು ಪಿನ್‌ಗೆ ₹ 1 ಸಾವಿರ ನಿಗದಿ ಪಡಿಸಲಾಗಿತ್ತು. ಈ ಹಣವು ಆರೋಪಿಗಳ ಖಾತೆಗೆ ಜಮೆ ಆಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಹಣ ಹೂಡಿಕೆ ಮಾಡಿರುವವರಿಗೆ ಪ್ರತ್ಯೇಕ ಯೂಸರ್‌ ಸಹ ನೀಡಲಾಗಿತ್ತು. ಹಣ ಹೂಡಿಕೆ ಮಾಡಲು ಲಾಗಿನ್‌ ಆದ ಕೂಡಲೇ ಯಾರ ಖಾತೆಗೆ ಹಣ ಸಂದಾಯವಾಗಬೇಕು ಎಂಬುದು ಸ್ಕ್ರೀನ್‌ ಮೇಲೆ ಬರುತ್ತಿತ್ತು. ಹಣವನ್ನು ಪಡೆಯುವ ಸದಸ್ಯರ ಮೊಬೈಲ್‌ಗೆ ಕರೆ ಮಾಡಿ ತಾವು ಗೂಗಲ್‌ ಪೇ, ಫೋನ್‌ ಪೇ, ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ಹಣವನ್ನು ಹಾಕುವ ಮಾಹಿತಿ ನೀಡಿ ಸಂದಾಯ ರಶೀದಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ನಂತರ, ಹಣ ಹೂಡಿಕೆ ಮಾಡಿದರೆ ಹಿರಿತನ ಲಭ್ಯವಾಗುತ್ತಿತ್ತು ಎಂದು ಹೇಳಿದರು.

ಈ ವ್ಯವಹಾರದಲ್ಲಿ ಪ್ರಥಮವಾಗಿ ಹಣ ಹೂಡಿಕೆ ಮಾಡಿದ ವ್ಯಕ್ತಿಗೆ ಏಳು ದಿನಗಳ ನಂತರ ಹಣ ದ್ವಿಗುಣಗೊಂಡು ತಲಾ ಒಂದು ಪಿನ್‌ಗೆ ₹ 6 ಸಾವಿರ ಸಂದಾಯ ಆಗಲಿದೆ ಎಂಬ ಆಮಿಷವೊಡ್ಡಲಾಗಿತ್ತು. ಕೆಲವರಿಗೆ ಹಣ ಬಂದಿತ್ತು. ಇನ್ನೂ ಕೆಲವರಿಗೆ ಹಣ ವಾಪಸ್ ಬಂದಿರಲಿಲ್ಲ. ಈ ರೀತಿ ಆನ್‌ಲೈನ್‌ನಲ್ಲಿ ವಂಚನೆ ಮಾಡಲಾಗುತ್ತಿತ್ತು ಎಂದು ಸುಮನ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)