ಸಿಎಂ ಕುಮಾರಸ್ವಾಮಿ ಮಾಧ್ಯಮಗೋಷ್ಠಿ; ಬಿಜೆಪಿಯಿಂದ ಶಾಸಕರಿಗೆ ಗಾಳ, ಆಡಿಯೊ ಬಿಡುಗಡೆ

7

ಸಿಎಂ ಕುಮಾರಸ್ವಾಮಿ ಮಾಧ್ಯಮಗೋಷ್ಠಿ; ಬಿಜೆಪಿಯಿಂದ ಶಾಸಕರಿಗೆ ಗಾಳ, ಆಡಿಯೊ ಬಿಡುಗಡೆ

Published:
Updated:

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಎರಡನೇ ಬಜೆಟ್‌ ಮಂಡನೆಗೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ತುರ್ತು ಮಾಧ್ಯಮಗೋಷ್ಠಿ ನಡೆಸಿ, ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಮೈತ್ರಿ ಸರ್ಕಾರದ ಶಾಸಕರಿಗೆ ಆಮಿಷವೊಡ್ಡಿ ಸೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಆಡಿಯೊ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ. 

ಗೃಹ ಕಚೇರಿ ಕೃಷ್ಣದಲ್ಲಿ ಕುಮಾರಸ್ವಾಮಿ ಮಾತನಾಡಿದರು. ’ಸದನದಲ್ಲಿ ರಾಜ್ಯಪಾಲರ ಭಾಷಣ ಕುರಿತು ಚರ್ಚೆಗೆ ಬಿಜೆಪಿ ಅವಕಾಶ ನೀಡಲಿಲ್ಲ. ಆಪರೇಷನ್‌ ಕಮಲ ಬಿಜೆಪಿಗೆ ರಕ್ತಗತವಾಗಿ ಬಂದಿದೆ, ಈ ಬಗ್ಗೆ ನನ್ನಲ್ಲಿ ಆಡಿಯೊ ಸಾಕ್ಷ್ಯವಿದೆ. ಅದನ್ನು ದೇಶದ ಜನರ ಮುಂದೆ ಇಡುತ್ತಿದ್ದೇನೆ’ ಎಂದು ಹೇಳಿದ ಕುಮಾರಸ್ವಾಮಿ 40 ನಿಮಿಷಗಳ ಆಡಿಯೊ ಕ್ಲಿಪ್‌ ಬಿಡುಗಡೆ ಮಾಡಿದರು.

ಬಿ.ಎಸ್‌.ಯಡಿಯೂರಪ್ಪ ದೇವದುರ್ಗದಿಂದ ನಡೆಸಿರುವ ಆಪರೇಷನ್‌ ಕಮಲದ ಕಾರ್ಯಚಾರಣೆ ಕುರಿತಾಗಿ ಆಡಿಯೊದಲ್ಲಿ ಪ್ರಸ್ತಾಪವಿದೆ ಎನ್ನಲಾಗಿದೆ. ಗುರುಮಠಕಲ್‌ ಕ್ಷೇತ್ರದ ಶಾಸಕ ನಾಗನಗೌಡ ಪಾಟೀಲ ಅವರ ಮಗನಿಂದ ಆಮಿಷವೊಡ್ಡಿರುವುದಾಗಿ ಕುಮಾರಸ್ವಾಮಿ ಆರೋಪಿಸಿದರು. ಜೆಡಿಎಸ್‌ ಶಾಸಕ ನಾಗನಗೌಡ ಪುತ್ರ ಶರಣಗೌಡ ಗುರುವಾರ ರಾತ್ರಿ ಬಿಜೆಪಿ ಮುಖಂಡರು ನೀಡಿದ ಆಮಿಷದ ಬಗ್ಗೆ ವಿವರಿಸಿದರು. 

’ದೇವದುರ್ಗದ ಐ.ಬಿಗೆ ಕೂಡಲೇ ಬರಬೇಕಾಗಿ ಬಿಜೆಪಿಯ ಮುಖಂಡರೊಬ್ಬರು ಕರೆ ಮಾಡಿದರು. ಬಿ.ಎಸ್‌.ಯಡಿಯೂರಪ್ಪ ಅವರು ತುರ್ತು ಮಾತುಕತೆ ನಡೆಸಬೇಕಿದೆ ಎಂದರು. ಮಧ್ಯರಾತ್ರಿ ಹೊತ್ತಿಗೆ ನಾನು ಐಬಿ ತಲುಪಿದೆ. ಬಿಜೆಪಿಯ ಕೆಲವು ಶಾಸಕರು ಹಾಗೂ ಯಡಿಯೂರಪ್ಪ ನನ್ನೊಂದಿಗೆ ಮಾತನಾಡಿ, ನಿಮ್ಮ ತಂದೆ ಬಿಜೆಪಿಗೆ ಬೆಂಬಲಿಸಿದರೆ ಮುಂದಿನ ಚುನಾವಣೆಗೆ ಅಗತ್ಯವಿರುವ ಎಲ್ಲ ಖರ್ಚು ನಾವು ನೋಡಿಕೊಳ್ಳುತ್ತೇವೆ. ಈಗಲೇ ಮುಂಬೈಗೆ ತೆರಳಿ ಅಲ್ಲಿ ಹಣಕಾಸಿನ ವ್ಯವಹಾರವನ್ನು ಪಕ್ಕಾ ಮಾಡಿಕೊಳ್ಳಬಹುದು. ₹40 ಕೋಟಿ ಸಿದ್ಧವಿದೆ’ ಎಂದು ಹೇಳಿದ್ದಾಗಿ ಶರಣಗೌಡ ಹೇಳಿದರು. 

ಸಭಾಪತಿಗಳನ್ನೇ ₹50 ಕೋಟಿಗೆ ಬುಕ್‌ ಮಾಡಿಕೊಂಡಿದ್ದೇವೆ ಎಂದೂ ಪ್ರಸ್ತಾಪಿಸಿರುವುದಾಗಿ ಹೇಳಿದರು. ಇನ್ನೂ ನ್ಯಾಯಾಂಗದ ವಿಚಾರ ಅಮಿತ್‌ ಷಾ ನಿರ್ವಹಿಸುತ್ತಿರುವುದಾಗಿ ಬಿಜೆಪಿ ಮುಖಂಡರು ಭರವಸೆ ನೀಡಿದರು ಎಂದರು. 

ಆಪರೇಷನ್‌ ಕಮಲದ ಹಿಂದೆ ಮೋದಿ, ಅಮಿತ್ ಷಾ ಕೈವಾಡ ಇದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದರು. ಸ್ಪೀಕರ್‌ ಅವರಿಗೆ ಪತ್ರ ಬರೆದು, ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ.

ವಿರೋಧ ಪಕ್ಷಗಳನ್ನು ನರೇಂದ್ರ ಮೋದಿ ಅತ್ಯಂತ ತುಚ್ಯವಾಗಿ ಕಾಣುತ್ತಿದ್ದಾರೆ ಎಂದೂ ಪ್ರಧಾನಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 23

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !