ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರ’ ಹಣೆಪಟ್ಟಿ ಕಟ್ಟಲು ಅವಕಾಶ: ಭಯೋತ್ಪಾದನೆ ವಿರೋಧಿ ಮಸೂದೆಗೆ ಲೋಕಸಭೆ ಅಸ್ತು

ಭಯೋತ್ಪಾದನೆ ವಿರೋಧಿ ಮಸೂದೆಗೆ ಲೋಕಸಭೆ ಅಸ್ತು
Last Updated 25 ಜುಲೈ 2019, 1:19 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಇಟ್ಟುಕೊಂಡ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶ ಕಲ್ಪಿಸುವ, ಭಯೋತ್ಪಾದನೆ ವಿರೋಧಿ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಮಸೂದೆಯನ್ನು ಸಮರ್ಥಿಸಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ‘ಕಾನೂನು ಜಾರಿ ಸಂಸ್ಥೆಗಳನ್ನು ಭಯೋತ್ಪಾದನಾ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಇರುವಂತೆ ಬಲಪಡಿಸುವುದು ಅಗತ್ಯ’ ಎಂದರು.

ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ (ಯುಎಪಿಎ) ತಿದ್ದುಪಡಿ ಮಸೂದೆಯ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಗಳಿಗೆ ಉತ್ತರಿಸಿದ ಶಾ, ‘ಈ ಕಾಯ್ದೆಯನ್ನು ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮಾತ್ರ ಬಳಸಲಾಗುವುದು.ಅದರ ದುರ್ಬಳಕೆ ಆಗುವುದಿಲ್ಲ ಎಂದು ಭರವಸೆ ನೀಡುತ್ತೇವೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಬೇಕಾದರೆ, ಭಯೋತ್ಪಾದನಾ ಸಂಸ್ಥೆಗಳ ಜೊತೆ ಸಂಬಂಧ ಇಟ್ಟುಕೊಂಡ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಕಾನೂನಿನಲ್ಲಿ ಅವಕಾಶ ಇರುವುದು ಅಗತ್ಯ ಎಂದರು.

ತಿದ್ದುಪಡಿಯನ್ನು ವಿರೋಧಿಸಿದ ಕಾಂಗ್ರೆಸ್‌ ಪಕ್ಷವನ್ನು ಟೀಕೆಗೆ ಒಳಪಡಿಸಿದ ಸಚಿವರು, ‘ಯುಪಿಎ ಅವಧಿಯಲ್ಲಿ ಭಯೋತ್ಪಾದನಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದು ಸರಿ ಎಂದಾದರೆ, ಎನ್‌ಡಿಎ ಅವಧಿಯಲ್ಲಿ ಮಾಡಿರುವ ತಿದ್ದುಪಡಿಯೂ ಸರಿಯೇ ಆಗಿದೆ. ‘ಸಿದ್ಧಾಂತ’ದ ಹೆಸರಿನಲ್ಲಿ ಕೆಲವರು ‘ನಗರ ನಕ್ಸಲ’ರನ್ನು ಬೆಂಬಲಿಸುತ್ತಿದ್ದಾರೆ. ಯಾವ ಪಕ್ಷದ ಸರ್ಕಾರ ಇದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆಯೇ ಕೇಂದ್ರವು ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಲಿದೆ’ ಎಂದರು. ಈ ಕಾನೂನಿಗೆ ಹಿಂದಿನ ಸರ್ಕಾರಗಳು ಮಾಡಿದ್ದ ತಿದ್ದುಪಡಿ
ಗಳನ್ನೂ ಶಾ ಉಲ್ಲೇಖಿಸಿದರು.

‘ತಿದ್ದುಪಡಿಯ ಮೂಲಕ ನಾವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದೇವೆ ಎಂದು ಕೆಲವರು ವಾದಿಸಿದ್ದಾರೆ. ಈ ಕಾನೂನು ಜಾರಿಯಾಗಿದ್ದೇ ಯುಪಿಎ ಅವಧಿಯಲ್ಲಿ. ಕಾನೂನಿನಿಂದ ಒಕ್ಕೂಟವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬುದು ನಿಜವಾಗಿದ್ದರೆ ಆ ಅವಧಿ
ಯಲ್ಲೇ ಆಗಿರಬೇಕು’ ಎಂದು ತಿಳಿಸಿದರು.

ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವವರ ಕಂಪ್ಯೂಟರ್‌ ಹಾಗೂ ಇತರ ಉಪಕರಣಗಳನ್ನು ಎನ್‌ಐಎ ವಶಪಡಿಸಿಕೊಳ್ಳಲು ಅವಕಾಶವಿದೆ.

ಮಸೂದೆಯನ್ನು ಅಂಗೀಕರಿಸುವುದಕ್ಕೂ ಮುನ್ನ ಕಾಂಗ್ರೆಸ್‌ ಹಾಗೂ ಟಿಎಂಸಿ ಸದಸ್ಯರು ಸಭಾತ್ಯಾಗ ನಡೆಸಿದರು. ಆ ಸಂದರ್ಭದಲ್ಲಿ ಅವರನ್ನು ಕುಟುಕಿದ ಶಾ, ‘ನಿಮ್ಮ ವೋಟ್‌ಬ್ಯಾಂಕ್‌ ಉಳಿಸಿಕೊಳ್ಳುವ ಸಲುವಾಗಿ, ಸಿಟ್ಟಾಗಿ ಹೊರ ಹೋದರೆ ನಾವೇನು ಮಾಡಲೂ ಬರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT