ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗಯ್ಯಗೆ ಪಂಪ ಪ್ರಶಸ್ತಿ

Last Updated 3 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹5 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಫೆ. 8ರಂದು ಬನವಾಸಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಲ್ಲೇಪುರಂ ಜಿ.ವೆಂಕಟೇಶ್ ನೇತೃತ್ವದ ಆಯ್ಕೆ ಸಮಿತಿಯು ಸಿದ್ದಲಿಂಗಯ್ಯ ಅವರನ್ನು ಆಯ್ಕೆ ಮಾಡಿದೆ.

ಅಂಬೇಡ್ಕರ್, ಪೆರಿಯಾರ್ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದ ಸಿದ್ದಲಿಂಗಯ್ಯ ಅವರು ದಲಿತ ಮತ್ತು ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದವರು.

‘ಪ್ರಶಸ್ತಿಯು ಜವಾಬ್ದಾರಿಯನ್ನು ಹೆಚ್ಚಿಸಿದೆ. ಮಾಡಬೇಕಿರುವ ಸಾಹಿತ್ಯ ಕೆಲಸಗಳಿಗೆ ಉತ್ತೇಜನಕಾರಿಯಾಗಿದೆ’ ಎಂದು ಸಿದ್ದಲಿಂಗಯ್ಯ ಪ್ರತಿಕ್ರಿಯಿಸಿದ್ದಾರೆ.

ಒಡಲಾಳದ ನೋವಿಗೆ ಅಕ್ಷರದ ರೂಪ

ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿ ಳಿಸಿದ,ಸತ್ವಪೂರ್ಣ ಕಾವ್ಯಾಭಿವ್ಯಕ್ತಿಯಿಂದ ತನ್ನ ಒಡಲಾಳದ ಸಿಟ್ಟನ್ನುಹೊರಹಾಕಿ ಒಂದು ತಲೆಮಾರನ್ನು ಜಾಗೃತಗೊಳಿಸಿದ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರ ಮುಡಿಗೆ ಪಂಪ ಪ್ರಶಸ್ತಿಯ ಗರಿಯೂ ಏರಿದೆ.

‘ಹೊಲೆ ಮಾದಿಗರ ಹಾಡು’ ಕವನದಿಂದತೊಡಗಿ ‘ನನ್ನ ಜನಗಳು ಮತ್ತು ಇತರ ಕವಿತೆಗಳು’ ತನಕ ಅವರು ಬರೆದ ಕವನಗಳು ಕೆಂಡದ ಉಂಡೆಗಳು, ಕ್ರಾಂತಿ ಕಿಡಿ ಹಚ್ಚಿದ ಅಕ್ಷರಗುಚ್ಛಗಳು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ'ಮಂಚನಬೆಲೆ' ಗ್ರಾಮದಲ್ಲಿ 1954ರಲ್ಲಿ ಜನಿಸಿದ ಸಿದ್ದಲಿಂಗಯ್ಯ,ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಅಲ್ಲೇ ಪ್ರಾಧ್ಯಾಪಕ, ಕನ್ನಡ ವಿಭಾಗದ ಮುಖ್ಯಸ್ಥರಾದವರು.‘ಗ್ರಾಮ ದೇವತೆಗಳು’ ಅವರ ಪಿಎಚ್‌.ಡಿ ಪ್ರಬಂಧ.ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎರಡು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

‘ಹೊಲೆ ಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ಆಯ್ದ ಕವಿತೆಗಳು’, ‘ಅಲ್ಲೆಕುಂತವರೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’ ಅವರ ಕವನ ಸಂಕಲನಗಳು. ‘ಹಕ್ಕಿನೋಟ’, ‘ರಸಗಳಿಗೆಗಳು’, ‘ಎಡಬಲ‘, ‘ಉರಿಕಂಡಾಯ’ ವಿಮರ್ಶಾಕೃತಿಗಳು. ‘ಅವತಾರಗಳು’, ‘ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1,2’ ‘ಜನಸಂಸ್ಕೃತಿ’ ಲೇಖನಗಳ ಸಂಕಲನ. ‘ಏಕಲವ್ಯ, ‘ನೆಲಸಮ’, ‘ಪಂಚಮ’ ನಾಟಕಗಳು. ‘ಊರುಕೇರಿ- ಭಾಗ-1, 2’ ಅವರ ಆತ್ಮಕಥೆ.

ಉತ್ತಮ ಚಲನಚಿತ್ರಗೀತ ರಚನೆಕಾರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ,ಸಂದೇಶ ಪ್ರಶಸ್ತಿ,ಡಾ.ಅಂಬೇಡ್ಕರ್ ಪ್ರಶಸ್ತಿ,ಸತ್ಯಕಾಮ ಪ್ರತಿ ಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ,ನಾಡೋಜ ಪ್ರಶಸ್ತಿ,ಆಳ್ವಾಸ್ ನುಡಿಸಿರಿಪ್ರಶಸ್ತಿ, ನೃಪ ತುಂಗ ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT