ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವವಾದಿಗೆ ಮುಸ್ಲಿಂ ಕಾರುಚಾಲಕ!

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ
Last Updated 30 ಡಿಸೆಂಬರ್ 2019, 4:47 IST
ಅಕ್ಷರ ಗಾತ್ರ

‘ಪ್ರಖರ ಹಿಂದುತ್ವವಾದಿ ಪೇಜಾವರ ಮಠದ ವಿಶ್ವೇಶತೀರ್ಥಶ್ರೀಗಳ ಕಾರಿಗೆ ಮುಸ್ಲಿಂ ಚಾಲಕನನ್ನು ನೇಮಿಸಿದಾಗ ಮಠದ ಒಳಗಿನಿಂದ ಅಪಸ್ವರಗಳು ಕೇಳಿಬಂದವು. ಹಿಂದೂಪರ ಸಂಘಟನೆಗಳಿಂದ ಟೀಕೆಗಳು ವ್ಯಕ್ತವಾಯಿತು. ಶ್ರೀಗಳು ಇದನ್ನೆಲ್ಲ ಕೇಳಿಸಿಕೊಂಡರೂ ಕೇಳದಂತೆ ಸುಮ್ಮನಾದರು. ಅವರಿಗೆ ಅಂದು ಬೇಕಿದ್ದು ಕಾರಿಗೆ ಚಾಲಕ ಮಾತ್ರ. ನಿರ್ದಿಷ್ಟ ಧರ್ಮದ ಕಾರು ಚಾಲಕನಲ್ಲ.

ಹೀಗೆ, ಹಲವು ವರ್ಷಗಳ ಹಿಂದೆ ಪೇಜಾವರ ಮಠದ ಕಾರು ಚಾಲಕನಾಗಿದ್ದ ಮಹಮ್ಮದ್‌ ಆರೀಫ್‌ ಶ್ರೀಗಳ ವ್ಯಕ್ತಿತ್ವನ್ನು ‘ಪ್ರಜಾವಾಣಿ’ಯ ಜತೆ ತೆರೆದಿಟ್ಟರು. ಚಾಲಕ ಆರೀಫ್‌ ಅವರೊಂದಿಗಿನ ಮಾತುಕತೆಯ ಸಾರಾಂಶವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

‘ನಮ್ಮ ಕುಟುಂಬದ ಮೂವರು ಹಿಂದೆ ಪೇಜಾವರಶ್ರೀಗಳ ಕಾರು ಚಾಲಕರಾಗಿದ್ದವರು. ಸಹೋದರರಾದ ಮಹಮ್ಮದ್ ಅಖಿರ್‌ ಮೂರು ವರ್ಷ, ಮಹಮ್ಮದ್ ಮನ್ಸೂರ್‌ ಏಳು ವರ್ಷ, ನಾನು ಒಂದೂವರೆ ವರ್ಷ ಶ್ರೀಗಳ ಕಾರು ಚಾಲಕರಾಗಿ ದುಡಿದಿದ್ದೇವೆ.

ಪೇಜಾವರಶ್ರೀಗಳನ್ನು ಕೆಲವರು ಕೋಮುವಾದಿ ಅಂತಾ ಕರೆಯುತ್ತಾರೆ. ಆದರೆ, ಅವರ ಜತೆಗಿದ್ದಷ್ಟು ದಿನ ಅವರೊಬ್ಬ ಕೋಮುವಾದಿ ಸ್ವಾಮೀಜಿ ಎಂಬ ಭಾವನೆ ಸುಳಿಯಲಿಲ್ಲ. ಅವರು ಸ್ವಾಮೀಜಿಯಾಗಿ ಮಾತ್ರ ಕಂಡಿದ್ದಾರೆ. ಈಗಲೂ ಹಾಗೆಯೇ ಕಾಣುತ್ತಾರೆ.

ಬ್ರಾಹ್ಮಣಸ್ವಾಮೀಜಿಗೆ ಮುಸ್ಲಿಂ ಚಾಲಕನ ನೇಮಕದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಾಗಲೂ ಅವರು ತಲೆಗೆ ಹಾಕಿಕೊಳ್ಳಲಿಲ್ಲ. ಬದಲಾಗಿ,‘ನನ್ನ ಬಳಿ ಕೆಲಸ ಮಾಡಲು ಕಷ್ಟವಾಗುತ್ತಿದೆಯೇ ಎಂದು ಕೇಳಿದ್ದರು. ಖಂಡಿತ ಇಲ್ಲ ಸ್ವಾಮೀಜಿ ಎಂದಾಗ, ಟೀಕೆಗಳನ್ನು ಕಿವಿಗೆ ಹಾಕಿಕೊಳ್ಳದೆ ಕೆಲಸ ಮಾಡು’ ಎಂದು ಸೂಚಿಸಿದ್ದರು.

ಶ್ರೀಗಳ ಅಂದಿನ ನಿಲುವು ಟೀಕಾಕಾರರ ಬಾಯಿ ಮುಚ್ಚಿಸಿತು. ಅವರ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಾಯಿತು. ಚಾಲಕನಾಗಿ ಅವರೊಂದಿಗಿದ್ದಷ್ಟು ದಿನ ಮಠದ ಒಳಗೆಲ್ಲ ಮುಕ್ತವಾಗಿ ಓಡಾಡಿದ್ದೇನೆ. ಯಾವತ್ತೂ ಸ್ವಾತಂತ್ರ್ಯಕ್ಕೆ ಧರ್ಮ ಅಡ್ಡಿ ಬರಲಿಲ್ಲ.

ನಮಾಜ್ ಮರೆಯದಿರು

ಒಮ್ಮೆ ಸ್ವಾಮೀಜಿಯ ಜತೆಗೆ ಕಾರಿನಲ್ಲಿ ತೆರಳುವಾಗ ನಮಾಜ್ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಮಾಡುತ್ತೇನೆ ಎಂದಾಗ, ನಮಾಜ್‌ ಪವಿತ್ರಕಾರ್ಯ, ಕೆಲಸದ ಒತ್ತಡದಲ್ಲಿ ನಮಾಜ್ ನಿಲ್ಲಿಸಬೇಡ. ಪ್ರಾರ್ಥನೆ ಸಲ್ಲಿಸಲು ನನ್ನ ಅಭ್ಯಂತರವಿಲ್ಲ ಎಂದಿದ್ದರು.

ಜತೆಗೆ, ನಿನ್ನ ಧರ್ಮವನ್ನು ಅತಿಯಾಗಿ ಪ್ರೀತಿಸು, ಹಾಗೆಯೇ ಅನ್ಯಧರ್ಮವನ್ನೂ ಗೌರವಿಸು ಎಂದು ಶ್ರೀಗಳು ಹೇಳಿದ್ದ ಮಾತು ಇಂದಿಗೂ ನೆನಪಾಗುತ್ತಿದೆ. ಅವರ ಮೇಲೆ ಅಂದು ಇದ್ದ ಗೌರವ ಇಂದಿಗೂ ಎಳ್ಳಷ್ಟು ಕಡಿಮೆಯಾಗಿಲ್ಲ.

ಕುರಾನ್ ಅಧ್ಯಯನ

ಶ್ರೀಗಳು ಭಗವದ್ಗೀತೆ ಓದಿಕೊಂಡಷ್ಟೇ ಕುರಾನ್‌ ಅನ್ನು ಅಧ್ಯಯನ ಮಾಡಿದ್ದಾರೆ. ಹಲವು ಸಂದರ್ಭಗಳಲ್ಲಿ ಕುರಾನ್ ಸಂದೇಶಗಳನ್ನು ಹೇಳಿ ಬುದ್ಧಿ ಹೇಳುವಾಗ ಅಚ್ಚರಿಯಾಗುತ್ತಿತ್ತು. ಮುಸ್ಲಿಂ ಹಬ್ಬಗಳ ಆಚರಣೆ, ಮಹತ್ವ, ವಿಧಿವಿಧಾನಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು.

ಸಮಾನ ಕಾಳಜಿ

ಜತೆಗಿರುತ್ತಿದ್ದ ಬ್ರಾಹ್ಮಣರ ಬಗ್ಗೆ ಇರುವಷ್ಟೇ ಕಾಳಜಿ, ಗೌರವ ನನ್ನ ಮೇಲೆಯೂ ಇತ್ತು. ಊಟ ಮಾಡಿದೆಯಾ, ಮನೆಯ ಪರಿಸ್ಥಿತಿ ಹೇಗಿದೆ, ಸಹಾಯ ಬೇಕಿದ್ದರೆ ಕೇಳು ಎಂದು ಆಗಾಗ ಹೇಳುತ್ತಿದ್ದರು. ಆದರೆ, ಹಣಕ್ಕಾಗಿ ಸ್ವಾಮೀಜಿ ಜತೆ ಕೆಲಸ ಮಾಡಲಿಲ್ಲ. ಮುಸ್ಲಿಮನಾದರೂ ಪೇಜಾವರಶ್ರೀಗಳೇ ನನ್ನ ಗುರುಗಳು ಎಂದು ಹೆಮ್ಮೆಯಿಂದ ಧೈರ್ಯವಾಗಿ ಹೇಳಿಕೊಳ್ಳುತ್ತೇನೆ.

ಮುಸ್ಲಿಮರು ಸಹ ಪೇಜಾವರಶ್ರೀಗಳನ್ನು ಎಂದೂ ವಿರೋಧಿಸಿದವರಲ್ಲ. ಅವರ ಪರ್ಯಾಯಕ್ಕೆ ನೆರವಿಗೆ ಬಂದಿದ್ದಾರೆ. ಭಟ್ಕಳ, ಬೈಂದೂರು, ಕೇರಳದಿಂದ ಬಂದು ಹೊರೆಕಾಣಿಕೆ ಸಲ್ಲಿಸಿ, ಹಣ ಕೊಟ್ಟು ಹೋದ ನಿದರ್ಶನಗಳಿವೆ. ಸಮಾಜದ ನೆರವಿಗೆ ಪ್ರತಿಯಾಗಿ, ಶ್ರೀಗಳು ನಮ್ಮನ್ನು ಮಠಕ್ಕೆ ಕರೆಸಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ.

ಹಿಂದೂ ಸಂಘಟನೆಗಳು ಹಾಗೂ ಸ್ವಾಮೀಜಿಗಳಿಂದ ವಿರೋಧ ವ್ಯಕ್ತಪಡಿಸಿದಾಗ, ತಮ್ಮ ನಿಲುವಿಗೆ ಗಟ್ಟಿಯಾಗಿ ನಿಂತು ಸೌಹಾರ್ದ ಕೂಟ ಆಯೋಜಿಸಿದ್ದಾರೆ. ಇಂದಿಗೂ ಉಭಯ ಸಮಾಜಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT