ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬೀಡಾದ ಕೆರೆಗಳ ಜಿಲ್ಲೆ

ಕಾಲೇಜು ವಾರ್ಷಿಕೋತ್ಸವದಲ್ಲಿ ರಂಗಕರ್ಮಿ ಪ್ರಸನ್ನ ಕಳವಳ
Last Updated 6 ಮೇ 2018, 11:49 IST
ಅಕ್ಷರ ಗಾತ್ರ

ಕೋಲಾರ: ‘ಕೆರೆಗಳಿಂದ ತುಂಬಿದ್ದ ಜಿಲ್ಲೆಯು ಇಂದು ಬರದ ಬೀಡಾಗಿದೆ. ಜಿಲ್ಲೆಯನ್ನು ಮತ್ತೆ ನಂದನ ವನವಾಗಿಸುವ ನಿಟ್ಟಿನಲ್ಲಿ ಯುವಕರಲ್ಲಿ ಪರಿಸರ ಕಾಳಜಿ ಬೆಳೆಯಬೇಕು’ ಎಂದು ರಂಗಕರ್ಮಿ ಪ್ರಸನ್ನ ಕಿವಿಮಾತು ಹೇಳಿದರು.

ನಗರದಲ್ಲಿ ಶನಿವಾರ ನಡೆದ ಮಹಿಳಾ ಸರ್ಕಾರಿ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿ, ‘ಪ್ರಕೃತಿಯ ಮೇಲಿನ ದಾಳಿಗೆ ಹೊಣೆಗಾರರು ಯಾರು. ನಾವೇ ಅತಿಯಾಸೆಗೆ ಬಿದ್ದು ಪರಿಸರ ನಾಶಕ್ಕೆ ಕಾರಣವಾಗಿದ್ದೇವೆ. ಇದನ್ನು ಸರಿ ಮಾಡಲು ವೈಚಾರಿಕತೆಯನ್ನು ಅತಿಯಾಸೆಯೆಡೆಗೆ ತಳ್ಳದೆ ಸರಿ ಎನಿಸಿದ್ದನ್ನು ಮಾಡುವ ಧೈರ್ಯ ಬರಬೇಕು’ ಎಂದರು.

‘ಯುವಕರು ಸ್ವತಂತ್ರವಾಗಿ ಆಲೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಕುವೆಂಪು ಅವರ ಮಾತಿನಂತೆ ಯುವಕ, ಯುವತಿಯರು ನಿರಂಕುಶಮತಿಗಳಾಗಿ ತಮಗೆ ಸರಿ ಎನಿಸಿದ್ದನ್ನು ಮಾಡಬೇಕು. ತಾವು ಮಾಡುವ ಕೆಲಸಕ್ಕೆ ತಾವೇ ಜವಾಬ್ದಾರರಾಗಬೇಕು. ಆಗ ಮಾತ್ರ ಮುನ್ನಡೆಯ ಮಾರ್ಗ ಕಂಡುಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಬೇರೆಯವರನ್ನು ಮೆಚ್ಚಿಸಲಿಕ್ಕೆ ಅಥವಾ ಬೇರೆಯವರಿಗಾಗಿ ಬದುಕುವುದು ಬೇಡ. ಆಗ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.

ರಕ್ತಹೀನತೆ: ‘ದೇಶದಲ್ಲಿ ಶೇ 70ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ. ವರ್ಷದಲ್ಲಿ ಸುಮಾರು 13 ಲಕ್ಷ ನವಜಾತ ಶಿಶುಗಳು ಸಾಯುತ್ತಿವೆ. ಇದಕ್ಕೆ ಅಪೌಷ್ಟಿಕತೆ ಪ್ರಮುಖ ಕಾರಣ. ಆದ್ದರಿಂದ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಬೇಕು. ದಿನಕ್ಕೆ 50 ಗ್ರಾಂ ಸೊಪ್ಪು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ಕಾಡುವುದಿಲ್ಲ’ ಎಂದು ಆಹಾರ ತಜ್ಞ ಕೆ.ಸಿ.ರಘು ತಿಳಿಸಿದರು.

‘ತಾತ್ವಿಕ ಬೋಧನೆಗಿಂತ ಪ್ರಾಯೋಗಿಕ ಬೋಧನೆ ಹೆಚ್ಚು ಪರಿಣಾಮಕಾರಿ. ಜೀವನದಲ್ಲಿ ಕಲಿಯುವುದು ಸಾಕಷ್ಟಿದೆ. ಆಹಾರ ಆರೋಗ್ಯ ಮೂಲಭೂತವಾಗಿ ಬೇಕು. ದಿನನಿತ್ಯದ ಬದುಕು ಚೆನ್ನಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ದೇಶದ ಆರ್ಥಿಕ ಅಭಿವೃದ್ಧಿಗಿಂತ ಆರೋಗ್ಯ ವೃದ್ಧಿಯೇ ಇಂದು ಅಗತ್ಯ’ ಎಂದು ಹೇಳಿದರು.

‘ಹಸಿವಾದಾಗ ಊಟ ಮಾಡುವವನು, ನಿದ್ದೆ ಬಂದಾಗ ನಿದ್ದೆ ಮಾಡುವವನು ಮತ್ತು ಬಾಯಾರಿಕೆಯಾದಾಗ ನೀರು ಕುಡಿಯುವವನೇ ನಿಜವಾದ ಜ್ಞಾನಿ. ಹಸಿವಿಲ್ಲದಿದ್ದರೂ ಬಾಯಿ ಚಪಲಕ್ಕೆ ತಿನ್ನುವುದು, ಮಿತಿಯಿಲ್ಲದ ಆಹಾರ ಸೇವನೆ, ಟಿ.ವಿ ಮುಂದೆ ಕುಳಿತು ನಿದ್ದೆಗೆಡುವುದು ಆರೋಗ್ಯಕರ ಲಕ್ಷಣಗಳಲ್ಲ’ ಎಂದರು.

ಶಿಕ್ಷಣದ ಭಾಗ: ‘ಕ್ರೀಡೆಗಳು ಸಮಗ್ರ ಶಿಕ್ಷಣದ ಭಾಗವಾಗಿವೆ. ಪಠ್ಯದಷ್ಟೇ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು. ಉತ್ತಮ ಆರೋಗ್ಯ ಇರುವೆಡೆ ಉತ್ತಮ ಮನಸ್ಸಿರುತ್ತದೆ ಮತ್ತು ಕಲಿಕೆಯ ಹಸಿವು ಇರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ’ ಎಂದು ತೋಟಗಾರಿಕಾ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಸಹ ಪ್ರಾಧ್ಯಾಪಕ ರಾಜೀವ್ ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ‘ಸ್ವರ್ಣ ದೀಪ್ತಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಮರೆಡ್ಡಿ, ಉಪನ್ಯಾಸಕರಾದ ಭಾಗ್ಯಲಕ್ಷ್ಮಿ, ಪಿ.ಯಶೋದಾ, ವಿಜಯಕುಮಾರ್, ಅಶ್ವತ್ಥ್‌, ಶ್ರೀನಿವಾಸ್, ಎನ್.ಎಲ್.ವಿಜಯಾ, ಎ.ಎಸ್.ವಸುಂಧರಾ, ಸಿ.ಎ.ರಮೇಶ್, ಅರಿವು ಶಿವಪ್ಪ ಪಾಲ್ಗೊಂಡಿದ್ದರು.

**
ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಂದು ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾವಂತರು ಸರ್ಕಾರಿ ಕೆಲಸಕ್ಕೆ ಕಾಯದೆ ಸ್ವಉದ್ಯೋಗ ಮಾಡಬೇಕು 
– ಪ್ರಸನ್ನ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT