ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಿಂದ ಬೆಂಗಳೂರಿನತ್ತ ವಾಹನಗಳ ಲಗ್ಗೆ

ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ಸಾಲು
Last Updated 11 ಮೇ 2020, 1:18 IST
ಅಕ್ಷರ ಗಾತ್ರ

ಆನೇಕಲ್:ತಮಿಳುನಾಡು ಕಡೆಯಿಂದ ಬೆಂಗಳೂರಿನ ಕಡೆಗೆ ‌ವಾಹನಗಳು ಪ್ರವಾಹದಂತೆ ಹರಿದು ಬರುತ್ತಿದ್ದು, ಶನಿವಾರ ರಾತ್ರಿಯಿಂದ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ವಾಹನಗಳು ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಕ್ವಾರಂಟೈನ್ ಸೀಲ್ ಹಾಕಿಸಿಕೊಳ್ಳಲು ಜನ ನಿರಾಕರಿಸುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಅಧಿಕಾರಿಗಳು ಹೈರಾಣಾಗಿದ್ದಾರೆ.

ಸೇವಾ ಸಿಂಧು ಇ–ಪಾಸ್ ಪಡೆದ ಜನರು ನಗರದತ್ತ ಲಗ್ಗೆ ಇಡುತ್ತಿದ್ದಾರೆ. ಬಸ್‌, ಕಾರು, ವ್ಯಾನ್‌ಗಳಲ್ಲಿ ತಂಡೋಪತಂಡವಾಗಿ ಗಡಿ ದಾಟುತ್ತಿದ್ದಾರೆ. ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪಾಸ್ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಗಡಿ ಪ್ರವೇಶಿಸುವ ಎಲ್ಲರಿಗೂ ಸೀಲ್ ಹಾಕಿ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.

ತಮಿಳುನಾಡು ಪಾಸ್ ಪಡೆದು ಉತ್ತರ ಭಾರತದತ್ತಲೂ ಜನ ಹೊರಟಿದ್ದಾರೆ. ಪಾಸ್ ಪಡೆದಿರುವ ಕಾರಣ ಕ್ವಾರಂಟೈನ್ ಸೀಲ್ ಹಾಕಿಸಿಕೊಳ್ಳಲು ಬಹುತೇಕರು ನಿರಾಕರಿಸುತ್ತಿದ್ದು, ‘ಮಹಿಳೆಯರು, ಮಕ್ಕಳು ಇದ್ದಾರೆ ಬಿಟ್ಟುಬಿಡಿ’ ಎಂದು ಅಧಿಕಾರಿಗಳ ಬಳಿ ದುಂಬಾಲು ಬೀಳುತ್ತಿದ್ದಾರೆ. ಹೀಗಾಗಿ, ಐದಾರು ಕಿಲೋ ಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಶಿವಣ್ಣ, ತಹಶೀಲ್ದಾರ್ ಸಿ. ಮಹದೇವಯ್ಯ ಶನಿವಾರ ರಾತ್ರಿಯಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಭಾನುವಾರ ಹೆಚ್ಚುವರಿ ಸಿಬ್ಬಂದಿಯನ್ನು ಜಿಲ್ಲಾಡಳಿತ ನಿಯೋಜಿಸಿದೆ.

‘ಕರ್ನಾಟಕ ಗಡಿಯ ಅತ್ತಿಬೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ರಾಜ್ಯಗಳ ಜನರನ್ನು ರಾಜ್ಯದ ಗಡಿಯೊಳಗೆ ಬಿಡುವುದಿಲ್ಲ. ಅತ್ತಿಬೆಲೆ ಗಡಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್‌ ಮಾಡಲಾಗುತ್ತಿದೆ’ ಎಂದುಉಪವಿಭಾಗಾಧಿಕಾರಿ ಶಿವಣ್ಣ ತಿಳಿಸಿದರು.

‘ಇನ್‌ಸ್ಟಿಟ್ಯೂಷನಲ್‌ ಕ್ವಾರೆಂಟೈನ್‌ ಮತ್ತು ಖಾಸಗಿ ಕ್ವಾರಂಟೈನ್‌ ಎಂದು ಎರಡು ರೀತಿ ವಿಭಾಗಿಸಲಾಗಿದೆ. ಉಳ್ಳವರು ಹಣ ನೀಡಿ ಸರ್ಕಾರ ಕಾಯ್ದಿರಿಸಿರುವ ಹೋಟೆಲ್‌ಗಳಲ್ಲಿ ಉಳಿಯಬಹುದು. ಇಲ್ಲವಾದಲ್ಲಿ ಸರ್ಕಾರದ ಗುರುತಿಸಿರುವ ಕಲ್ಯಾಣ ಮಂಟಪ, ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 14 ದಿನ ಕ್ವಾರೆಂಟೈನ್‌ನಲ್ಲಿರಬೇಕು. ಕ್ವಾರಂಟೈನ್‌ಗೆ ಒಪ್ಪದಿದ್ದಲ್ಲಿ ಯಾವುದೇ ಕಾರಣಕ್ಕೂ ರಾಜ್ಯದೊಳಗಡೆ ಬಿಡುವುದಿಲ್ಲ’ ಎಂದು ತಿಳಿಸಿದರು.

‘ಅತ್ತಿಬೆಲೆ ಗಡಿಯಲ್ಲಿ ಪೊಲೀಸ್‌, ಕಂದಾಯ ಮತ್ತು ಆರೋಗ್ಯ ಇಲಾಖೆಯವರು ದಿನದ 24 ಗಂಟೆಗಳು ಕೆಲಸ ಮಾಡುತ್ತಿದ್ದಾರೆ’ ಎಂದು ತಹಶೀಲ್ದಾರ್ ಸಿ.ಮಹಾದೇವಯ್ಯ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT