ಗುರುವಾರ , ಮೇ 6, 2021
25 °C
ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿ ರ್‍ಯಾಲಿ

'ನಿಮ್ಮ ವೋಟ್‌ಬ್ಯಾಂಕ್‌ ಭಾರತದಲ್ಲಿಯೋ, ಪಾಕಿಸ್ತಾನದಲ್ಲಿಯೋ?'- ಎಚ್‌ಡಿಕೆಗೆ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬಿಜೆಪಿ ಆಯೋಜಿಸಿರುವ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. 

ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸಾವಿರಾರು ಬಿಜೆಪಿ ಕಾರ್ಯಕರ್ತರು ಮೈದಾನದಲ್ಲಿ ಸೇರಿದ್ದಾರೆ. ‘ಮೋದಿ, ಮೋದಿ...’ ಎಂಬ ಘೋಷಣೆ ಮೈದಾನದಲ್ಲಿ ಅನುರಣಿಸುತ್ತಿದೆ.

ಪ್ರಧಾನಿ ಮೋದಿ ಅವರಿಗೆ ಬಿಳಿ ಕಂಬಳಿ ಹಾಗೂ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಪ್ರತಿಕೃತಿ ಉಡುಗೊರೆಯಾಗಿ ನೀಡಲಾಯಿತು. ಕಂಬಳಿಗೆ ಬಿಜೆಪಿ ಚಿಹ್ನೆ ‘ಕಮಲದ ಹೂ’ವನ್ನು ದಾರದ ಕುಸುರಿಯಲ್ಲಿ ಮೂಡಿಸಲಾಗಿದೆ. 

ಸನ್ಮಾನ ಸ್ವೀಕರಿಸಿ ಮೋದಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದರು. 

ಮೋದಿ: ‘ಭಾಷಾಂತಿರುಸುವುದು ಬೇಕೇ...? ಹಿಂದಿ ಚಲೇಗಾ..? 

ಜನರು: ಹಾಂ...

ಮೋದಿ: ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಕ್ಷೇತ್ರದ ಆತ್ಮೀಯ ಬಂಧು ಭಗಿನಿಯರೇ... ನಿಮಗೆಲ್ಲರಿಗೂ ನಿಮ್ಮ ಚೌಕಿದಾರನ ನಮನಗಳು. ಯುಗಾದಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದೇವೆ. ಕರ್ನಾಟಕದ ಬಂಧು ಭಗಿನಿಯರಿಗೆ ಯುಗಾದಿ ಹಬ್ಬದ ಶುಭಾಶಯಗಳು. 

ಸಿದ್ದಗಂಗಾ ಮಠದ ಶತಾಯುಷಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ನನ್ನ ನಮನಗಳು.

‘ಉಗ್ರರ ನೆಲೆಗಳ ಮೇಲೆ ನಾವು ದಾಳಿ ನಡೆಸಿದೆವು. ನಾವು ನಡೆಸಿದ ದಾಳಿಯಿಂದ ಪಾಕಿಸ್ತಾನಕ್ಕೆ ನೋವುಂಟಾಗಿದೆ. ಇಡೀ ವಿಶ್ವವೇ ವಾಯುದಾಳಿಯನ್ನುಶ್ಲಾಘಿಸಿದೆ. ಆದರೆ, ನಮ್ಮ ದೇಶದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಣ್ಣೀರು ಸುರಿಸುತ್ತಿವೆ.’

ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು, ಉಗ್ರರ ಮೇಲಿನ ದಾಳಿಯನ್ನು ವೋಟ್‌ಬ್ಯಾಂಕ್‌ಗಾಗಿ ಮಾಡಿದ ದಾಳಿ ಎನ್ನುತ್ತಿವೆ. ಇಲ್ಲಿನ ಮುಖ್ಯಮಂತ್ರಿ, ದೇಶದ ಭದ್ರತಾ ಪಡೆಗಳ ಕಾರ್ಯದ ಬಗೆಗೆ ಮಾತನಾಡಬೇಡಿ ಎಂದಿದ್ದಾರೆ. ಇದು ವೋಟ್‌ಬ್ಯಾಂಕ್‌ಗೆ ಹೊಡೆತ ಎಂದಿದ್ದಾರೆ. 

ಅವರಿಗೆ ಕೇಳುತ್ತಿದ್ದೇನೆ 'ನಿಮ್ಮ ವೋಟ್‌ಬ್ಯಾಂಕ್‌ ಭಾರತದಲ್ಲಿಯೋ ಅಥವಾ ಪಾಕಿಸ್ತಾನದಲ್ಲಿಯೋ..?' ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಧಾನಿ ಮೋದಿ ವೇದಿಕೆಯಲ್ಲಿ ಪ್ರಶ್ನಿಸಿದರು. 

* ಒನಕೆ ಓಬವ್ವಾ, ಮದಕರು ಹೋರಾಡಿದಂತೆ ನಾವು ಹೋರಾಡಬೇಕಿದೆ. 

* ಚೌಕಿದಾರ್‌ ಏನು ಹೇಳುತ್ತಾನೋ ಅದನ್ನು ಪೂರೈಸುತ್ತಾನೆ. 

* ಕರ್ನಾಟಕದ ಮ್ಯಾನ್‌ಚೆಸ್ಟರ್‌ ’ದಾವಣಗೆರೆ’. ಅದನ್ನು ಸ್ಮಾರ್ಟ್‌ಸಿಟಿ ಮಾಡಲು ಏನೆಲ್ಲ ಯೋಜನೆ ಬೇಕು ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. 

‘ನಿಮ್ಮ ವೋಟು ಬಡವರ ಏಳಿಗಾಗಿ, ದೇಶಕ್ಕಾಗಿ ಹುತಾತ್ಮರಾದವರಿಗಾಗಿ ನಿಮ್ಮ ವೋಟು, ಮುದ್ರಾ ಯೋಜನೆ ಅನುಷ್ಠಾನಗೊಳಿಸಿರುವಲ್ಲಿ,..ನಿಮ್ಮ ಮತ ಸಮರ್ಪಿತವಾಗಲಿ.’ 

ನೀವು ಕಮಲದ ಗುರುತಿಗೆ ನೀಡುವ ಮತ, ಸೀದಾ ಮೋದಿಯ ಖಾತೆಗೆ ಜಮೆಯಾಗುತ್ತದೆ ಎಂದು ಮತದಾರರನ್ನು ‘ಮೋದಿ’ಗೆ ಮತನೀಡುವಂತೆ ಓಲೈಸಿದರು. 

‘ಹಳ್ಳಿ ಹಳ್ಳಿಯೂ, ನಗರ ನಗರ ಎಲ್ಲವೂ, ಮಕ್ಕಳು ತಾಯಿ ತಂಗಿ, ಉಳುವ(ಅಳುವ ಎಂದು ಉಚ್ಚರಿಸಿದರು) ಭೂಮಿಯಲ್ಲೂ, ಪಾರ್ಕ್‌ನಲ್ಲೂ, ಡಾಕ್ಟರ್‌ ಎಂಜಿನಿಯರ್‌, ಕಾಲೇಜು ಹೋಗುವ ವಿದ್ಯಾರ್ಥಿ, ಲೇಖಕಕರು, ಜರ್ನಲಿಸ್ಟ್‌ಗಳು, ವಕೀಲರು,..’ ಎಲ್ಲರೂ 'ಚೌಕಿದಾರ'ರು ಎಂದು ಜನರಿಂದ ಹೇಳಿಸಿದರು. 

ಚಳ್ಳಕೆರೆ ತಾಲ್ಲೂಕಿನ ಡಿಆರ್‌ಡಿಒ ಆವರಣದ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಒನಕೆ ಓಬವ್ವ ಮೈದಾನಕ್ಕೆ ಬಂದರು. ಅಲ್ಲಿಂದ ಕಾರಿನಲ್ಲಿ ರ್‍ಯಾಲಿ ಆಯೋಜನೆಯಾಗಿರುವ ಮೈದಾನಕ್ಕೆ ಬಂದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ, ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಹಾಗೂ ತುಮಕೂರು ಅಭ್ಯರ್ಥಿ ಬಸವರಾಜು ಪರ ಮೋದಿ ಮತಯಾಚನೆ ಮಾಡಿದರು.

ಸಾರ್ವಜನಿಕರಿಗೆ ಮೈದಾನದಿಂದ ಒಂದು ಕಿ.ಮೀ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬಿ.ಡಿ.ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಅಶೋಕ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು