ಭಾನುವಾರ, ಮೇ 9, 2021
24 °C
ಕೊರೊನಾ ‘ಜನತಾ ಕರ್ಫ್ಯೂ’ ಇಂದು

ಅನಗತ್ಯವಾಗಿ ತಿರುಗಾಡಿದರೆ ಶಿಸ್ತು ಕ್ರಮ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಕೊರೊನಾ ವೈರಸ್‌ ಹರಡದಂತೆ ತಡೆಯಲು ನಗರದಲ್ಲಿ ಭಾನುವಾರ ಜನತಾ ಕರ್ಫ್ಯೂ ನಡೆಯಲಿದ್ದು, ಪ್ರತಿಯೊಬ್ಬರು ಮನೆಯಲ್ಲೇ ಇರಬೇಕು. ಉದ್ದೇಶವಿಲ್ಲದೆ ಅನಗತ್ಯವಾಗಿ ಯಾರಾದರೂ ಹೊರಗೆ ಬಂದು ರಸ್ತೆಯಲ್ಲಿ ತಿರುಗಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯದ ದೃಷ್ಟಿಯಿಂದಾಗಿ ಜನರು ಮುಂಜಾಗ್ರತಾ ಕ್ರಮಗಳನ್ನ ಪಾಲಿಸಬೇಕು. ಪ್ರಧಾನಿ‌ಯವರ ಕರೆಯಂತೆ ಜನತಾ ಕರ್ಫ್ಯೂ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕುಟುಂಬ ಸದಸ್ಯರ ಜೊತೆ ಎಲ್ಲರೂ ಮನೆಯಲ್ಲಿರಬೇಕು. ಪ್ರವಾಸ, ವಾಯುವಿಹಾರ ಹಾಗೂ ನಾನಾ ಕಾರ್ಯಕ್ರಮ ಹೆಸರಿನಲ್ಲಿ ಹೊರಗಡೆ ಸುತ್ತಾಡಬಾರದು’ ಎಂದು ಹೇಳಿದರು.

‘ಜನತಾ ಕರ್ಫ್ಯೂ ದಿನದಂದು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಆರೋಗ್ಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿ ಜೊತೆ ಸಭೆ ನಡೆಸಲಾಗಿದೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 31 (ಎಲ್‌) ಅಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ತಮಗೆ ಸೋಂಕು ತಗುಲಿದರೂ ಕೆಲವರು ಅದನ್ನು ಮುಚ್ಚಿಡುತ್ತಿರುವುದು ಗಮನಕ್ಕೆ ಬರುತ್ತಿದೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅದರ ಜೊತೆಗೆ ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರೇ ಗಸ್ತು ಕಾಯಲಿದ್ದಾರೆ. ಈ ಸಂಬಂಧ ಡಿಸಿಪಿಗಳಿಗೆ ಈಗಾಗಲೇ ಸೂಚನೆ‌ ನೀಡಲಾಗಿದೆ. ಯಾರ ಮೇಲಾದರೂ ಸಂಶಯ ವ್ಯಕ್ತವಾದರೆ ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ’ ಎಂದರು.

ಏನಿದು ಸೆಕ್ಷನ್ 31 (ಎಲ್‌) ? 

ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ವಿಶೇಷ ಅಧಿಕಾರವನ್ನು ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 31 (ಎಲ್‌) ಪೊಲೀಸ್ ಕಮಿಷನರ್ ಅವರಿಗೆ ನೀಡಿದೆ.

ರಸ್ತೆಯಲ್ಲಿ ಯಾರಾದರೂ ಓಡಾಡಿ ಸಾಂಕ್ರಾಮಿಕ ರೋಗಗಳನ್ನು ಹರಡಬಹುದು ಹಾಗೂ ಅದರಿಂದ ಬೇರೆಯವರಿಗೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಕಮಿಷನರ್, ಸೆಕ್ಷನ್ 31 (ಎಲ್‌) ಅಡಿ ಶಿಸ್ತುಕ್ರಮ ಜರುಗಿಸಲು ಮುಂದಾಗಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು