ಭಾನುವಾರ, ಸೆಪ್ಟೆಂಬರ್ 20, 2020
23 °C
ಮನೆ ಕೆಲಸಕ್ಕೂ ಸೈ, ಸಮಾಜ ಕಾರ್ಯ ಜೈ ಎಂದ ಮಹಿಳೆಯರು

ಪೊಲೀಸ್ ಕರ್ತವ್ಯಕ್ಕೆ ಸಜ್ಜಾದ ತಾಯಂದಿರು

ಅನಿಲ್‌ ಬಾಚನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪೋಲಿಸ್‌ ಇಲಾಖೆಯ ಕಾನ್‌ಸ್ಟೆಬಲ್‌ ತರಬೇತಿ ಮುಗಿಸಿದ ಇಬ್ಬರು ತಾಯಂದಿರು ಕರ್ತವ್ಯಕ್ಕೆ ಸಜ್ಜಾಗಿದ್ದಾರೆ.

ನಗರದಲ್ಲಿ ಮಂಗಳವಾರ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 7ನೇ ತಂಡದ ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಇಬ್ಬರು ಪೊಲೀಸ್ ಪ್ರಶಿಕ್ಷಣಾರ್ಥಿಗಳು ಮಗುವಿನೊಂದಿಗೆ ಗಮನ ಸೆಳೆದರು.

ಪ್ರಶಿಕ್ಷಣಾರ್ಥಿ ಗಂಗಾವತಿಯ ಭಾಗ್ಯಲಕ್ಷ್ಮಿ ಒಂದು ಮಗುವಿನ ತಾಯಿ. ಗುಲಬುರ್ಗಾ ವಿಶ್ವವಿದ್ಯಾಲಯದಿಂದ ಬಿಪಿ.ಇಡಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೇ ಕ್ರೀಡೆಯಲ್ಲಿ 2 ಬಾರಿ ಯೂನಿವರ್ಸಿಟಿ ಬ್ಲ್ಯೂ ಆಗಿದ್ದಾರೆ. ಅಲ್ಲದೇ ಪ್ರಶಿಕ್ಷಣಾರ್ಥಿಗಳ ಕ್ರೀಡೆಯಲ್ಲಿಯೂ ಕೂಡಾ ಪ್ರಥಮ ಸ್ಥಾನ ಪಡೆದಿದ್ದಾರೆ.

‘ನನ್ನ ಓದಿಗೆ ಅತ್ತೆ, ಮಾವ, ಗಂಡ ಸೇರಿದಂತೆ ಮನೆಯವರ ಸಹಕಾರ ಇದೆ. ಹಾಗಾಗಿ ಪೊಲೀಸ್‌ ಆಗಬೇಕು ಎನ್ನುವ ಬಹಳಷ್ಟು ದಿನಗಳ ಆಸೆಯನ್ನು ಯಶಸ್ವಿಯಾಗಿ ‍ಪೂರೈಸಿದ್ದೇನೆ’ ಎನ್ನುತ್ತಾರೆ ಭಾಗ್ಯಲಕ್ಷ್ಮಿ.

ಬೆಂಗಳೂರಿನ ನಂದಿನಿ ಎಸ್. ಅವರಿಗೂ 4 ವರ್ಷದ ಆದ್ಯ ಎನ್ನುವ ಮಗುವಿದೆ. ಇವರು ಎಂಬಿಎ ವಿದ್ಯಾರ್ಹತೆ ಹೊಂದಿದ್ದಾರೆ.  ಪ್ರಶಿಕ್ಷಣಾರ್ಥಿಗಳ ಹೊರಾಂಗಣ ಕ್ರೀಡೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಮೊದಲು ಇವರು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಉದ್ಯಮಿಯಾಗಿದ್ದಾರೆ.

‘ನನ್ನ ಗಂಡನಿಗೆ ಪೊಲೀಸ್‌ ಆಗಬೇಕು ಎನ್ನುವ ಆಸೆ ಇತ್ತು. ಅವರಿಗೆ ಆಗಲಿಲ್ಲ. ನನ್ನ ಓದಿಗೆ ಅವರು ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ’ ಎನ್ನುತ್ತಾರೆ ನಂದಿನಿ. ಭಾರವಾದ ಬಂದೂಕುಗಳನ್ನು ಹೊತ್ತು ಅವರು ಪರೇಡ್ ಮಾಡಿದರು.

ಉನ್ನತ ಶಿಕ್ಷಣ ಪಡೆದವರು ಹೆಚ್ಚು

ನಾಗರೀಕ ಪೊಲೀಸ್‌ ಹುದ್ದೆಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಇದೆ. 10 ಜನರನ್ನು ಹೊರತು ಪಡಿಸಿ ಉಳಿದೆಲ್ಲರೂ ಉನ್ನತ ವ್ಯಾಸಂಗ ಮಾಡಿದ್ದಾರೆ.

ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 7ನೇ ತಂಡದ 104 ಮಹಿಳಾ ಪ್ರಶಿಕ್ಷಣಾರ್ಥಿಗಳ ಪೈಕಿ 7 ಸ್ನಾತಕೋತ್ತರ ಪದವೀಧರರು, 76 ಪದವೀಧರರು, 7 ಜನ ಬಿ.ಇಡಿ ವಿದ್ಯಾರ್ಹತೆ, ಇಬ್ಬರು ಡಿ.ಇಡಿ ಮಾಡಿದ್ದಾರೆ.

**

ಬಡತನದ ಪರಿಸ್ಥಿತಿಯಲ್ಲಿಯೂ ಕಷ್ಟಪಟ್ಟು ಓದಿಸಿದ್ದೇವೆ. ನಮ್ಮ ಮಗಳೂ ಸಹ ಶ್ರಮ ಪಟ್ಟು ವಿದ್ಯಾಭ್ಯಾಸ ಮಾಡಿದ್ದಾಳೆ. ಕೊನೆಗೂ ದೇವರ ದಯೆಯಿಂದ ಪೊಲೀಸ್‌ ನೌಕರಿ ಸಿಕ್ಕಿದ್ದು, ನಮ್ಮಮೇಲಿದೆ.
– ಮಂಗಳಮ್ಮ, ಪಾಲಕರು, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು