ಮಂಗಳವಾರ, ಜನವರಿ 21, 2020
29 °C

ಸಂಪುಟ ವಿಸ್ತರಣೆಗೆ ಮುನ್ನ ಕೆಲವರಿಗೆ ಕೊಕ್ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊಸಬರಿಗೆ ಮಣೆ ಹಾಕಲು ಇಬ್ಬರು ಅಥವಾ ಮೂವರು ಸಚಿವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ (ಕಾಂಗ್ರೆಸ್‌– ಜೆಡಿಎಸ್‌ನಿಂದ ಬಂದವರು) ಮಂತ್ರಿ ಸ್ಥಾನ ನೀಡುವುದರ ಜತೆಗೆ ಪಕ್ಷದ ಪ್ರಭಾವಿ ಶಾಸಕರಿಗೂ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕಾಗಿದೆ. ಈ ಕಾರಣಕ್ಕೆ ಇಬ್ಬರು ಅಥವಾ ಮೂವರು ಸಚಿವರ ರಾಜೀನಾಮೆ ಪಡೆದರೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ಮೂಲ ಶಾಸಕರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂಬುದು ಯಡಿಯೂರಪ್ಪ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

ಯಾವ ಸಚಿವರಿಂದ ರಾಜೀನಾಮೆ ಪಡೆಯಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದ್ದು, ಪಕ್ಷದ ನಿಷ್ಠಾವಂತ ಮತ್ತು ಸಚಿವ ಸ್ಥಾನ ಕಳೆದುಕೊಂಡ ಕಾರಣಕ್ಕೆ ಮುನಿಸಿಕೊಂಡು ಗದ್ದಲ ಎಬ್ಬಿಸದವರಿಂದ ರಾಜೀನಾಮೆ ಪಡೆಯಬಹುದು ಎನ್ನಲಾಗಿದೆ.

ಈ ಮಧ್ಯೆ ಗೋಕಾಕದ ಶಾಸಕ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಬುಧವಾರ ರಾತ್ರಿ ನೂತನ ಶಾಸಕರ ನಡೆದಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದ ಎಲ್ಲ ಶಾಸಕರೂ ಒಗ್ಗಟ್ಟಿನಿಂದ ಇರಬೇಕು. ಯಡಿಯೂರಪ್ಪ ಅವರು ತಮಗೆ ಈ ಹಿಂದೆ ನೀಡಿದ್ದ ಭರವಸೆಯ ಪ್ರಕಾರವೇ ನಡೆದುಕೊಳ್ಳುವಂತೆ ಒತ್ತಡ ಹೇರಲು ತೀರ್ಮಾನಿಸಲಾಯಿತು.

‘ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ವದಂತಿ ಹಬ್ಬಿದೆ. ಆದರೆ, ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವವರಲ್ಲ. ಆದರೂ ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಪರಸ್ಪರರ ರಕ್ಷಣೆಗೆ ಧಾವಿಸಬೇಕು’ ಎಂದು ಜಾರಕಿಹೊಳಿ ಸಲಹೆ ನೀಡಿದರು ಎನ್ನಲಾಗಿದೆ.

ಶನಿವಾರ ಪ್ರಮುಖರ ಸಭೆ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಶನಿವಾರ ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಹೋಗುವ ಮುನ್ನ ಪ್ರಮುಖರ ಸಭೆಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಸಂಪುಟ ವಿಸ್ತರಣೆ ಸಂಬಂಧ ಭೇಟಿಗೆ ಅಮಿತ್‌ ಶಾ ಅವರಲ್ಲಿ ಸಮಯ ಕೇಳಿದ್ದೇವೆ. ಅವರು ದಿನಾಂಕ ಮತ್ತು ಸಮಯ ನೀಡಿದ ತಕ್ಷಣವೇ ಭೇಟಿ ಮಾಡುತ್ತೇನೆ. ಇದೇ 11 ಅಥವಾ 12 ರಂದು ಕರೆಯಬಹುದು ಎಂದು ಯಡಿಯೂರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು